ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Update: 2020-11-13 12:37 GMT

ಬೆಳಗಾವಿ, ನ.13: ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗುಡ್ಡದಲ್ಲಿ ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ನಡೆಸಿದ ಐವರು ಆರೋಪಿಗಳಿಗೆ ಬೆಳಗಾವಿ 3ನೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ ಒಬ್ಬರಿಗೆ ಐದು ಲಕ್ಷ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಸಂಜು ಸಿದ್ದಪ್ಪ ದಡ್ಡಿ(24), ಸುರೇಶ ಭರಮಪ್ಪ ಬೆಳಗಾವಿ(24), ಸುನೀಲ ಲಗಮಪ್ಪ ಡುಮ್ಮಗೋಳ(21), ಹುಕ್ಕೇರಿ ತಾಲೂಕು ಮಣಗುತ್ತಿಯ ಅಂಬೇಡ್ಕರ್ ಗಲ್ಲಿಯ ಮಹೇಶ ಬಾಳಪ್ಪ ಶಿವನ್ನಗೋಳ(23) ಮತ್ತು ಬೈಲಹೊಂಗಲದ ಸೋಮಶೇಖರ ದುರಡುಂಡೇಶ್ವರ ಶಹಾಪುರ(23) ಶಿಕ್ಷೆಗೊಳಗಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 33 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದೆ.

ಏನಿದು ಪ್ರಕರಣ: ಹಾಸ್ಟೆಲ್‍ನಲ್ಲಿದ್ದ ಬಾಲಕಿಯು 2017ರ ಫೆ.15ರಂದು ಸ್ನೇಹಿತನೊಂದಿಗೆ ಗುಡ್ಡಕ್ಕೆ ತೆರಳಿ ಅಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಈ ಕೃತ್ಯ ನಡೆದಿತ್ತು.

ಆರೋಪಿಗಳು ಸೇರಿಕೊಂಡು ಗೆಳೆಯನಿಂದಲೂ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದರು. ಅವರ ಬಳಿ ಇದ್ದ ಎರಡು ಮೊಬೈಲ್ ಫೋನ್‍ಗಳು ಹಾಗೂ 300 ರೂಪಾಯಿ ನಗದು ಕಿತ್ತುಕೊಂಡಿದ್ದರು. ಅತ್ಯಾಚಾರ ನಡೆಸಿದ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ಆಕೆಯ ಗೆಳೆಯನನ್ನು ಥಳಿಸಿ, ನಂತರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಆನಂತರ ವಿಚಾರವನ್ನು ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಒಡ್ಡಿದ್ದರು. ಆಲ್ಲದೇ 20 ಸಾವಿರ ರೂಪಾಯಿ ಹಣ ತಂದು ಕೊಡಬೇಕು. ಇಲ್ಲವಾದಲ್ಲಿ ಮೊಬೈಲ್‍ನಲ್ಲಿ ಚಿತ್ರೀಕರಿಸಿರುವ ವಿಡಿಯೋ ಹರಿಬಿಡುವುದಾಗಿ ಹಾಗೂ ಆಕೆಯನ್ನು ಮತ್ತು ಆಕೆಯ ಮನೆಯವರನ್ನು ಕೊಲ್ಲುವುದಾಗಿ ಹೆದರಿಸಿದ್ದರು. ದ್ವಿಚಕ್ರ ವಾಹನದ ಪೆಟ್ರೋಲ್ ಪೈಪ್ ಕಸಿದುಕೊಂಡು ದೌರ್ಜನ್ಯ ನಡೆಸಿದ್ದರು. ರಾತ್ರಿ 9ರ ವರೆಗೂ ತಮ್ಮನ್ನು ಬಿಡದೆ ಕಾಡಿದರು ಎಂಬ ಸಂತ್ರಸ್ತೆಯ ಹೇಳಿಕೆ ಆಧರಿಸಿ ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಸಂಬಂಧ ತನಿಖಾಧಿಕಾರಿ ರಮೇಶ ಬಿ. ಗೋಕಾಕ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರಕಾರಿ ಅಭಿಯೋಜಕ ವಿ.ಎಲ್. ಪಾಟೀಲ ಸರಕಾರದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಆರೋಪ ಸಾಬೀತಾಗಿದೆ ಎಂದು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News