ಹರ್ಯಾಣ: ದಲಿತ ಯುವತಿಯನ್ನು ವಿವಾಹವಾದ ವ್ಯಕ್ತಿಯ ಥಳಿಸಿ ಹತ್ಯೆ

Update: 2020-11-13 14:56 GMT

ಚಂಡೀಗಢ, ನ.13: ದಲಿತ ಯುವತಿಯನ್ನು ವಿವಾಹವಾದ ಹಿನ್ನೆಲೆಯಲ್ಲಿ ಸ್ಥಳೀಯರ ವಿರೋಧ ಕಟ್ಟಿಕೊಂಡಿದ್ದ ವ್ಯಕ್ತಿಯ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತನಾಗಿದ್ದಾನೆ ಎಂದು ವರದಿಯಾಗಿದೆ.

ಗುರುಗ್ರಾಮದ ನಿವಾಸಿ 28 ವರ್ಷದ ಆಕಾಶ್ ಎಂಬಾತ ಮೃತಪಟ್ಟ ಯುವಕ. ಈತ 5 ತಿಂಗಳ ಹಿಂದೆ ದಲಿತ ಯುವತಿಯನ್ನು ಮದುವೆಯಾಗಿದ್ದ. ಇದನ್ನು ಸ್ಥಳೀಯರು ವಿರೋಧಿಸಿದ್ದರು. ಯುವತಿಯನ್ನು ಮದುವೆಯಾಗಿ ಗ್ರಾಮಕ್ಕೆ ಕರೆತಂದರೆ ಜೀವಸಹಿತ ಬಿಡುವುದಿಲ್ಲ ಎಂದು ಕೆಲವರಿಂದ ಎಚ್ಚರಿಕೆ ಕರೆ ಬಂದಿದೆ ಎಂದು ಆಕಾಶ್‌ನ ಸಹೋದರ ಆರೋಪಿಸಿದ್ದಾನೆ.

ರವಿವಾರ ಈತ ಪತ್ನಿಯ ಮನೆಗೆ ಹೋಗಿದ್ದು ಪತ್ನಿಯನ್ನು ಅಲ್ಲಿ ಬಿಟ್ಟು ರಾತ್ರಿ ವೇಳೆ ರಿಕ್ಷಾದಲ್ಲಿ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ಬಾದ್‌ಶಾಪುರ ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅಜಯ್ ಎಂಬಾತ ವಿನಾಕಾರಣ ತಗಾದೆ ತೆಗೆದು ರಿಕ್ಷಾವನ್ನು ತಡೆದಿದ್ದಾನೆ. ಇಬ್ಬರೊಳಗೆ ಮಾತಿನ ಚಕಮಕಿ ನಡೆದಾಗ ಅಲ್ಲಿಗೆ ಬಂದ ಅಜಯ್ ಸ್ನೇಹಿತರು ಆಕಾಶ್‌ನನ್ನು ಥಳಿಸಿದ್ದಾರೆ.

ತೀವ್ರ ಗಾಯಗೊಂಡ ಆಕಾಶ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಮೂರು ದಿನದ ಬಳಿಕ ಮೃತಪಟ್ಟಿದ್ದಾನೆ ಎಂದು ಸಹೋದರ ದೂರು ನೀಡಿದ್ದು, ಇದರಂತೆ ಪ್ರಕರಣ ದಾಖಲಿಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಲಿತ ಯುವತಿಯನ್ನು ಮದುವೆಯಾಗದಂತೆ ಬೆದರಿಕೆ ಒಡ್ಡಿದವರಲ್ಲಿ ಅಜಯ್ ಹಾಗೂ ಐವರು ಆರೋಪಿಗಳೂ ಸೇರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News