ಹಾವೇರಿಯಲ್ಲಿ ಆರೋಗ್ಯ ನಗರ ನಿರ್ಮಾಣ: ಸಚಿವ ಡಾ.ಸುಧಾಕರ್

Update: 2020-11-13 17:56 GMT

ಹಾವೇರಿ, ನ.13: ರಾಜ್ಯ ಸರಕಾರ ಹಾವೇರಿ ಜಿಲ್ಲೆಯಲ್ಲಿ ಆರೋಗ್ಯ ನಗರ ನಿರ್ಮಿಸುವ ಗುರಿಯನ್ನು ಹೊಂದಿದ್ದು, 450 ಕೋಟಿ ರೂ. ವೆಚ್ಚದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೀಡಿಯೋ ಮೂಲಕ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೇ ವರ್ಷ 4 ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜುಗಳ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.

ಹಾವೇರಿಯಲ್ಲಿ ಹೊಸ ಕಾಲೇಜು ಆವರಣದಲ್ಲಿ ಎಲ್ಲ ಬಗೆಯ ಕೋರ್ಸ್‍ಗಳನ್ನು ಆರಂಭಿಸಲಾಗುತ್ತಿದ್ದು, ಹೆಚ್ಚು ಸಂಖ್ಯೆಯ ವೈದ್ಯರು ಆರೋಗ್ಯ ಕ್ಷೇತ್ರಕ್ಕೆ ಸಿಗಲಿದ್ದಾರೆ. ಇದರಿಂದ ಹಾವೇರಿಯಲ್ಲಿ ಆರೋಗ್ಯ ನಗರ ನಿರ್ಮಾಣವಾಗಲಿದೆ. ಕಳೆದ 6 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ 157 ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಕೆಲಸ ಮಾಡಿದೆ. ಹಿಂದುಳಿದ ವರ್ಗ, ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಕನಸಾಗಿದ್ದು, ಈಗ ಅಂತಹವರಿಗೆ ಅನುಕೂಲವಾಗಿದೆ. ಹೊಸ ಕಾಲೇಜುಗಳಿಂದ ದೇಶದಲ್ಲಿ ಒಟ್ಟಾರೆ 27 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಾಕ್‍ಡೌನ್‍ನಿಂದಾಗಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.2.5ರಿಂದ 3ರಷ್ಟಿದೆ. ದೇಶದಲ್ಲಿ ಶೇ.1.4ರಷ್ಟಿದೆ. ಹಾಗೂ ರಾಜ್ಯದಲ್ಲಿ 1.37 ಇದೆ. ಬೆಂಗಳೂರಿನಲ್ಲಿ ಶೇ.1.01 ರಷ್ಟಿದೆ., ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಮೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೆಕಾರ್ ಉಪಸ್ಥಿತರಿದ್ದರು.

-ಹೊಸದಾಗಿ 2500 ವೈದ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 800 ವೈದ್ಯರನ್ನು ನೇಮಕ ಮಾಡಿ ಹಳ್ಳಿಗಳಿಗೆ ನಿಯೋಜಿಸಲಾಗುತ್ತಿದೆ.

-ಪ್ರತಿದಿನ ಕೋವಿಡ್ ಪರೀಕ್ಷೆಗೆ ನಮ್ಮ ಸರಕಾರ 8 ಕೋಟಿ ರೂ. ಖರ್ಚು ಮಾಡುತ್ತಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ 1.15 ಕೋಟಿ ಕುಟುಂಬಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News