ರಾಜ್ಯದಲ್ಲಿ ಬಗೆಹರಿಯದ ತ್ಯಾಜ್ಯ ವಿಲೇವಾರಿ, ಸಂಸ್ಕರಣಾ ಘಟಕ ಸಮಸ್ಯೆ

Update: 2020-11-15 15:51 GMT

ಬೆಂಗಳೂರು, ನ. 15: ರಾಜ್ಯದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆಯು ಹಲವು ವರ್ಷಗಳ ಸಮಸ್ಯೆಯಾಗಿ ಉಳಿದಿದ್ದು, ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆಯನ್ನು ರಾಜ್ಯ ಸರಕಾರ ಬರೀ ತಾತ್ಕಾಲಿಕ ನೆಲೆಯಲ್ಲಿ ಬಗೆಹರಿಸುತ್ತಿದ್ದೇವೆಯೇ ಹೊರತು ಶಾಶ್ವತವಾಗಿ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಹಸಿ ಕಸ, ಒಣ ಕಸವನ್ನು ವಿಂಗಡಿಸಿ ಹಸಿ ತ್ಯಾಜ್ಯದಿಂದ ಸಿಎನ್‍ಜಿ ಇಂಧನ, ಒಣ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಬಹುದು. ಆದರೆ, ಸರಕಾರ ಮಾತ್ರ ಈ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗುತ್ತಿದೆ.

ರಾಜಧಾನಿಯಲ್ಲಿ ಕಸದಿಂದ ವಿದ್ಯುತ್ ತಯಾರಿಕಾ ಘಟಕದ ಆರಂಭಕ್ಕೆ ಬಿಬಿಎಂಪಿ ಮೀನಾಮೇಷ ಎಣಿಸುತ್ತಿದ್ದು, ಆರು ಸಂಸ್ಥೆಗಳ ಜೊತೆ ಮಾತುಕತೆ ನಡೆದಿದ್ದರೂ ಇನ್ನೂ ಒಂದು ಸಂಸ್ಥೆಯೂ ಕಾರ್ಯಾರಂಭಗೊಳಿಸಿಲ್ಲ. ನಗರದಲ್ಲಿ ಪ್ರತಿನಿತ್ಯ 4,500 ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಗೊಬ್ಬರ ತಯಾರಿಕೆ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಕಸ ಮರುಬಳಕೆ ಆಗುತ್ತಿಲ್ಲ.

ನೂರಾರು ಟನ್ ತ್ಯಾಜ್ಯ ಸಂಗ್ರಹಿಸಿ ಗೊಬ್ಬರ ತಯಾರಿಸಿ ಗಮನ ಸೆಳೆದಿದ್ದ ಬೆಳಗಾವಿ ಮಹಾನಗರ ಪಾಲಿಕೆಯು, ಇದೀಗ ವಿದ್ಯುತ್ ತಯಾರಿಕೆಗೂ ಮುಂದಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನದ ಹಿನ್ನೆಲೆ, ಬೆಳಗಾವಿ ಮಹಾನಗರ ಪಾಲಿಕೆ ಬಯೋ ಮಿಥನಾಜೈಶನ್ ಮೂಲಕ ತ್ಯಾಜ್ಯದಿಂದ ವಿದ್ಯುತ್ ತಯಾರಿಕೆಗೆ ಯೋಜನೆ ಹಾಕಿಕೊಂಡಿದೆ.

ಬೆಳಗಾವಿ ಮಹಾನಗರದಲ್ಲಿ ನಿತ್ಯ 120 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಈ ಕಸವನ್ನು ಬೆಳಗಾವಿ ತಾಲೂಕಿನ ತುರುಮುರಿ ಗ್ರಾಮದಲ್ಲಿರುವ ಗೊಬ್ಬರ ತಯಾರಿಕಾ ಘಟಕಕ್ಕೆ ಡಂಪ್ ಮಾಡಲಾಗುತ್ತದೆ. ತ್ಯಾಜ್ಯದ ಸಹಾಯದಿಂದ ಗೊಬ್ಬರ ತಯಾರಿಸಲಾಗುತ್ತದೆ. ಇದೀಗ ಇದೇ ಕಸದಿಂದ ವಿದ್ಯುತ್ ತಯಾರಿಸಲು ಪಾಲಿಕೆ ಮುಂದಾಗಿದೆ.

ಮಂಗಳೂರಿನಲ್ಲಿ ಪ್ರತಿದಿನ 300 ಟನ್ ಕಸ ಸಂಗ್ರಹವಾಗುತ್ತಿದ್ದು, ಈಗಾಗಲೇ 5 ಲಕ್ಷ ಟನ್ ಕಸ ಸಂಗ್ರಹವಿದೆ. ಆದ್ದರಿಂದ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ರೂಪಿಸಲು ಮಂಗಳೂರು ಪಾಲಿಕೆ ಚಿಂತನೆ ನಡೆಸಿದೆ.

ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು, ಒಣತ್ಯಾಜ್ಯದಿಂದ ಇಂಧನ ತಯಾರಿಸುವ ಬಗ್ಗೆ ನಿರ್ಧಾರ ಮಾಡಿದೆ. ದಿನನಿತ್ಯ ಉತ್ಪತ್ತಿಯಾಗುವ ಸುಮಾರು 200 ಟನ್ ಒಣತ್ಯಾಜ್ಯದಿಂದ ಇಂಧನ ತಯಾರಿಸುವ ಕುರಿತಂತೆ ಎನ್.ವಿ.ವಿ.ಎನ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

`ಕಸದಿಂದ ಇಂಧನ' ಉತ್ಪಾದನೆ ಮಾಡುವುದರಿಂದ ನಗರಗಳಲ್ಲಿನ ಒಣತ್ಯಾಜ್ಯವು, ವೈಜ್ಞಾನಿಕವಾಗಿ ಪರಿಸರಕ್ಕೆ ಮಾರಕವಾಗದಂತೆ ವಿಲೇವಾರಿಯಾಗಲು ಅನುಕೂಲವಾಗುತ್ತದೆ. ಇದರಿಂದ ವಾಯುಮಾಲಿನ್ಯವು ಕಡಿಮೆಯಾಗಲಿದ್ದು, ಸ್ವಚ್ಛ ಪರಿಸರ ನಿರ್ಮಾಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News