ಸಂಸತ್ತಿನ ಚಳಿಗಾಲದ ಅಧಿವೇಶನ ಇಲ್ಲ; ಸುಳಿವು ನೀಡಿದ ಸಚಿವ

Update: 2020-11-17 03:48 GMT

ಹೊಸದಿಲ್ಲಿ, ನ.17: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಸತ್ತಿನ ಅಧಿವೇಶನವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದಕ್ಕೆ ಹಾಕಲಾಗಿದ್ದು, ಇದು ಚಳಿಗಾಲದ ಅವಧಿಯುದ್ದಕ್ಕೂ ಮುಂದುವರಿಯುವ ಸಾಧ್ಯತೆ ಇದೆ. ಸದ್ಯದ ಸ್ಥಿತಿಗತಿಯಲ್ಲಿ ಅಧಿವೇಶನ ನಡೆಸುವುದು ಜಾಣ ನಿರ್ಧಾರವಲ್ಲ ಎಂದು ಹಿರಿಯ ಕೇಂದ್ರ ಸಚಿವರೊಬ್ಬರು ಎನ್‌ಡಿಟಿವಿ ಜತೆ ಮಾತನಾಡುತ್ತಾ ಸ್ಪಷ್ಟಪಡಿಸಿದ್ದಾರೆ. ದಿಲ್ಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ವ್ಯಾಪಕವಾಗಿ ಹಬ್ಬುತ್ತಿದೆ.

ಸದ್ಯ ಅಧಿವೇಶನ ನಡೆಸಬೇಕಾದ ತುರ್ತು ಅಗತ್ಯವಂತೂ ಕಾಣುತ್ತಿಲ್ಲ. ಸಂವಿಧಾನದ ಅನುಸಾರವಾಗಿ ಕೂಡಾ ಅಧಿವೇಶನ ಕನಿಷ್ಠ ಆರು ತಿಂಗಳಿಗೊಮ್ಮೆ ನಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗುವ ಹಿನ್ನೆಲೆಯಲ್ಲಿ ಜನವರಿ ಕೊನೆಯ ವಾರ ಅಧಿವೇಶನ ಕರೆಯುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ.

ಕಳೆದ ಸೆಪ್ಟಂಬರ್‌ನಲ್ಲಿ ವಿಳಂಬವಾಗಿ ಆರಂಭವಾದ ಮುಂಗಾರು ಅಧಿವೇಶನದ ವೇಳೆ ಹಲವು ಮಂದಿ ಸಂಸದರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿವೇಶನವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News