ಡಿಎಂಕೆಯಲ್ಲಿ ದಾಯಾದಿ ಕಲಹ ಭೀತಿ; ಅಳಗಿರಿಯಿಂದ ಹೊಸ ಪಕ್ಷ?

Update: 2020-11-17 04:33 GMT

ಚೆನ್ನೈ, ನ.17: ಕರುಣಾನಿಧಿ ಪುತ್ರರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ತೀವ್ರಗೊಂಡಿದೆ. ಕರುಣಾನಿಧಿಯವರ ಕಿರಿಯ ಮಗ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ರಾಜ್ಯದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಇದರಿಂದ ತೀವ್ರ ಅಸಮಾಧಾನಗೊಂಡಿರುವ ಹಿರಿಯ ಪುತ್ರ ಎಂ.ಕೆ.ಅಳಗಿರಿ ಹೊಸ ಪಕ್ಷ ರಚನೆ ಸಾಧ್ಯತೆಯನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಮುಂದಿನ ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.

"ನನ್ನ ಬೆಂಬಲಿಗರ ಜತೆ ಮಾತುಕತೆ ನಡೆಸುತ್ತಿದ್ದೇನೆ. ನಮ್ಮದೇ ಸ್ವಂತ ಪಕ್ಷವನ್ನು ರಚಿಸಬೇಕೇ ಅಥವಾ ನಮ್ಮ ಬೆಂಬಲವನ್ನು ಬೇರೆ ಪಕ್ಷಕ್ಕೆ ಘೋಷಿಸಬೇಕೇ ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ" ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಅಳಗಿರಿ ಬಹಿರಂಗಪಡಿಸಿದ್ದಾರೆ.

ಎಂ.ಕೆ.ಅಳಗಿರಿ ಬಣ ಬಿಜೆಪಿಗೆ ಬೆಂಬಲ ಘೋಷಿಸಲಿದೆ ಎಂಬ ವರದಿಗಳ ಬೆನ್ನಲ್ಲೇ ಈ ತಿಂಗಳ 21ರಂದು ಗೃಹಸಚಿವ ಅಮಿತ್ ‌ಶಾ ಚೆನ್ನೈಗೆ ಭೇಟಿ ನೀಡುವ ವೇಳೆ ಅವರನ್ನು ಭೇಟಿ ಮಾಡಲು ಅಳಗಿರಿ ಉದ್ದೇಶಿಸಿದ್ದಾರೆ ಎಂಬ ವದಂತಿಯೂ ಹಬ್ಬಿದೆ. ಆದರೆ ಅಳಗಿರಿ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. "ಇದು ಕಟ್ಟುಕಥೆ. ಬಿಜೆಪಿ ಕಡೆಯಿಂದ ಯಾರೂ ನನ್ನ ಜತೆ ಮಾತನಾಡಿಲ್ಲ. ಗೃಹಸಚಿವರು ನನ್ನನ್ನೇಕೆ ಭೇಟಿ ಮಾಡುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಮುಂದಿನ ಚುನಾವಣೆಗೆ ರಾಜ್ಯ ಬಿಜೆಪಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಅಮಿತ್ ಶಾ ಪಕ್ಷದ ಮುಖಂಡರಿಗೆ ಸಲಹೆ ನೀಡಲಿದ್ದಾರೆ ಎನ್ನಲಾಗಿದ್ದು, ಅಳಗಿರಿಯವರು ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಸುಮಾರು ಎರಡು ದಶಕಗಳಿಂದ ಪಕ್ಷದೊಳಗೆ ಕರುಣಾನಿಧಿ ಪುತ್ರರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಾ ಬಂದಿದೆ. ಕರುಣಾನಿಧಿ ತಮ್ಮ ಕಿರಿಯ ಪುತ್ರನನ್ನು ತಮ್ಮ ಉತ್ತರಾಧಿಕಾರಿಯಾಗಿ ಬೆಳೆಸಿದ್ದರು. ಚೆನ್ನೈ ಮೇಯರ್, ಶಾಸಕ, ಸಚಿವ ಹಾಗೂ ಉಪಮುಖ್ಯಮಂತ್ರಿಯಾಗಿಯೂ ಹಂತಹಂತವಾಗಿ ಬೆಳೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News