''ಮರಾಠಾ ಭಾಷಾ ಪ್ರಾಧಿಕಾರ ಸ್ಥಾಪನೆ ಪ್ರಜಾಪ್ರಭುತ್ವದ ಸೌಹಾರ್ದತೆಗೆ ದೊಡ್ಡ ಧಕ್ಕೆ''

Update: 2020-11-17 13:55 GMT
ಎಸ್.ಜಿ.ಸಿದ್ದರಾಮಯ್ಯ - ಮುಖ್ಯಮಂತ್ರಿ ಚಂದ್ರು

ಬೆಂಗಳೂರು, ನ.17: ಮುಖ್ಯಮಂತ್ರಿಗಳು ಮರಾಠಾ ಭಾಷಾ ಪ್ರಾಧಿಕಾರವನ್ನು ಕರ್ನಾಟಕ ರಾಜ್ಯದಲ್ಲಿ ಸ್ಥಾಪಿಸ ಹೊರಟಿರುವುದು, ಅದಕ್ಕೆ ಐವತ್ತು ಕೋಟಿ ರೂಪಾಯಿಗಳನ್ನು ಪ್ರಥಮ ಹಂತದ ಅನುದಾನವಾಗಿ ಬಿಡುಗಡೆ ಮಾಡಲು ಹೊರಟಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಸೌಹಾರ್ದತೆಗೆ ದೊಡ್ಡ ಧಕ್ಕೆಯುಂಟು ಮಾಡಲು ಹೊರಟ ವಿವೇಕಹೀನ ನಡೆಯಾಗಿದೆ ಎಂದು ಕನ್ನಡ ನುಡಿ-ಕನ್ನಡ ಗಡಿ ಜಾಗೃತಿ ಸಮಿತಿಯ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದ್ದಂತೆ ಸಂವಿಧಾನಾತ್ಮಕವಾಗಿ ಅಂಗೀಕೃತಗೊಂಡಿರುವ ಇಪ್ಪತ್ತೆರಡು ಪ್ರಾದೇಶಿಕ ಭಾಷೆಗಳಿಗೂ ಭಾಷಾ ಅಭಿವೃದ್ಧಿಗಾಗಿ ಆಯಾ ರಾಜ್ಯ ಭಾಷೆಯ ರಾಜ್ಯ ಸರಕಾರಗಳೇ ಪ್ರಾಧಿಕಾರಗಳನ್ನು ಸ್ಥಾಪಿಸುವುದು ಆಯಾ ರಾಜ್ಯ ಸರಕಾರಗಳ ನೈತಿಕ ಜವಾಬ್ದಾರಿ. ಅದು ಬಿಟ್ಟು ಬೇರೊಂದು ರಾಜ್ಯದ ರಾಜ್ಯ ಭಾಷೆಯ ಅಭಿವೃದ್ಧಿಗೆ ಕರ್ನಾಟಕ ಸರಕಾರ ಪ್ರಾಧಿಕಾರ ರಚಿಸಲು ಹೊರಟಿರುವುದು ‘ತನ್ನ ಮಕ್ಕಳಿಗೆ ಅನ್ನ ಹಾಕಲಾರದವ ನೆರಮನೆಯ ಮಕ್ಕಳಿಗೆ ಮೃಷ್ಟಾನ್ನ ಭೋಜನದ ವ್ಯವಸ್ಥೆ ಮಾಡಿದಂತಿದೆ’ ಎಂದು ಅವರು ಟೀಕಿಸಿದ್ದಾರೆ.

ಈ ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಡಬೇಕಾಗಿದ್ದ ವಾರ್ಷಿಕ ಅನುದಾನವನ್ನು ಕಡಿತಗೊಳಿಸಿತು. ಅಷ್ಟೇ ಅಲ್ಲ ಕಡಿತಗೊಳಿಸಿದ ಮೊತ್ತವನ್ನು ಬಿಟ್ಟು ಉಳಿಕೆ ಹಣವನ್ನು ಕೊಡದೆ ವಿಳಂಬ ನೀತಿ ಅನುಸರಿಸಿತು. ಆಗ ರಾಜ್ಯದ ಕನ್ನಡಪರ ಸಂಘಟನೆಗಳು, ಹೋರಾಟಗಾರರು, ಸಾಹಿತಿಗಳು, ಕಲಾವಿದರು ಒಕ್ಕೂಟಗಳೆಲ್ಲ ದನಿ ಎತ್ತಿದ ಮೇಲೆ ಕುದಿಯುವ ಎಸರಿಗೆ ನೀರು ಬಿಟ್ಟಂತೆ ಸ್ವಲ್ಪ ಹಣ ಬಿಡುಗಡೆಗೊಳಿಸಿತು ಎಂದು ಅವರು ತಿಳಿಸಿದ್ದಾರೆ.

ತನ್ನ ರಾಜ್ಯದ ರಾಜ್ಯ ಭಾಷೆಗೆ ಈ ರೀತಿಯ ತಾತ್ಸಾರ ಧೋರಣೆ ತೋರಿ ಪ್ರಾಧಿಕಾರದ ಮೂಲ ಆಶಯಕ್ಕೆ ಎರವಾದ ನಡೆಯನ್ನು ಬಿಂಬಿಸಿತು. ಇಂಥ ಹೊಣೆಗೇಡಿ ಸರಕಾರ ಈಗ ಚುನಾವಣಾ ತಂತ್ರವಾಗಿ ಮರಾಠಿಗರ ಓಟು ಸೆಳೆಯಲು ಮರಾಠಾ ಭಾಷಾ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು ಹೊರಟಿರುವುದು ಐವತ್ತು ಕೋಟಿ ಅನುದಾನ ಘೋಷಣೆ ಮಾಡಿರುವುದು ಪ್ರಜಾಪ್ರಭುತ್ವದ ನೈತಿಕತೆಯನ್ನು ನಾಚಿಕೆಗೇಡಿನ ರೀತಿಯಲ್ಲಿ ಹಾಳುಗೈಯುವ ದುರ್ವತನೆಯೇ ಸರಿ ಎಂದು ಅವರು ಕಿಡಿಗಾರಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಾರಂಭವಾದಾಗಿನಿಂದ ಇಲ್ಲಿವರೆಗೆ ಐವತ್ತು ಕೋಟಿಯ ಅನುದಾನವನ್ನು ಒಮ್ಮೆಯೂ ನೀಡಿಲ್ಲ. ಅದು ಹೋಗಲಿ ಇಡೀ ಪ್ರಾಧಿಕಾರದ ಈವರೆಗಿನ ಅನುದಾನವನ್ನು ಲೆಕ್ಕ ಹಾಕಿದರೆ ಅದರ ಮುಕ್ಕಾಲು ಪಾಲು ಹಣವನ್ನು ಒಮ್ಮೆಗೆ ಮರಾಠಾ ಭಾಷೆಗೆ ನೀಡ ಹೊರಟಿರುವುದು ಯಾವ ಮಾನದಂಡದ ವಿವೇಕ ಪೂರ್ಣ ತೀರ್ಮಾನ ಇದು ಎಂಬುದನ್ನು ಕನ್ನಡಿಗರು ಹಕ್ಕಿನಿಂದ ಕೇಳುವ ಪ್ರಶ್ನೆ ಇದಾಗಿದೆ. ಇದಕ್ಕೆ ಉತ್ತರ ನೀಡಬೇಕಾದ ನೈತಿಕ ಹೊಣೆ ಸರಕಾರದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ತತ್ಕಾಲದ ಚುನಾವಣೆಯ ಲಾಭಕ್ಕಾಗಿ ಇಡೀ ಒಕ್ಕೂಟ ನೀತಿಯ ಸೌಹಾರ್ದತೆಗೆ ಭಂಗ ಬರುವ ಭಾವನಾತ್ಮಕತೆಯನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡಬಾರದಾಗಿ ಸರಕಾರಕ್ಕೆ ಈ ಮೂಲಕ ಮನವಿ ಮಾಡುತ್ತೇವೆ. ರಾಜ್ಯದ ಜನತೆ ನಾಡು-ನುಡಿಯ ಬಗ್ಗೆ ಈ ಬಗೆಯ ಹಗಲ ದ್ರೋಹವನ್ನು ಕಣ್ಣುಮುಚ್ಚಿಕೊಂಡು ಸಹಿಸುವುದಿಲ್ಲ. ಈ ಅರಿವು ಯಾವುದೇ ಜವಾಬ್ದಾರಿಯುತ ಸರಕಾರಗಳಿಗೆ ತಿಳಿಯಬೇಕಾದ ಸತ್ಯ. ಕೊರೋನದ ಈ ಅಸಹಾಯಕ ವಾತಾವರಣದಲ್ಲಿ ಜನತೆಯ ಮೌನವನ್ನು ದುರಾಡಳಿತಕ್ಕೆ ಸಮ್ಮತಿ ಎಂದು ಭಾವಿಸಿದರೆ ಅದು ನಾಡು-ನುಡಿಗೆ ಗೈದ ಮಹಾಪರಾಧವೇ ಸರಿ. ಪ್ರಸ್ತುತ ಸರಕಾರ ಈ ತೀರ್ಮಾನವನ್ನು ಹಿಂಪಡೆದು ರಾಜ್ಯ ಭಾಷೆಗೆ ಉತ್ತರದಾಯಿತ್ವವುಳ್ಳ ಸರಕಾರವಾಗಿ ನಡೆದುಕೊಳ್ಳಲಿ ಎಂದು ನಿರೀಕ್ಷಿಸುತ್ತೇವೆ ಎಂದು ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News