ಗೋದಾಮುಗಳಲ್ಲಿ ಕೊಳೆಯುತ್ತಿರುವ ಆಹಾರ ಧಾನ್ಯ

Update: 2020-11-18 06:00 GMT

ಈ ದೇಶದಲ್ಲಿ ಒಂದು ಹೊತ್ತು ಊಟಕ್ಕೂ ಗತಿಯಿಲ್ಲದೆ ಕೋಟ್ಯಂತರ ಜನ ನರಳುತ್ತಿದ್ದಾರೆ. ಹೊಟ್ಟೆಗಿಲ್ಲದೆ ಮಕ್ಕಳನ್ನು ಮಾರಾಟ ಮಾಡಿದ ಘಟನೆಗಳೂ ವರದಿಯಾಗುತ್ತಿವೆ. ಹಸಿವಿನಿಂದ ಸಾವುಗಳು ಸಂಭವಿಸುವ ದಾರುಣವಾದ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಆದರೆ ತನ್ನ 130 ಕೋಟಿ ಜನರಿಗೆ ಹೊಟ್ಟೆ ತುಂಬಿಸಲಾಗದಷ್ಟು ಭಾರತ ಬಡ ರಾಷ್ಟ್ರವೇ? ಇಲ್ಲ ಭಾರತ ಬಡ ರಾಷ್ಟ್ರವಲ್ಲ. ಸಂಪದ್ಭರಿತ ರಾಷ್ಟ್ರ. ಇನ್ನು ಹತ್ತು ವರ್ಷ ಬರಗಾಲ ಬಿದ್ದರೂ ತೊಂದರೆಯಾಗದಷ್ಟು ಆಹಾರ ಧಾನ್ಯ ಸಂಗ್ರಹವಿದೆ ಎಂದು ಸರಕಾರವೇ ಈ ಹಿಂದೆ ಒಪ್ಪಿಕೊಂಡಿದೆ. ಆದರೂ ಈ ಧಾನ್ಯ ಸಂಗ್ರಹ ಜನರ ಹೊಟ್ಟೆಯ ಹಸಿವನ್ನು ಇಂಗಿಸಿಲ್ಲ ಎಂಬುದೂ ಕಟುವಾದ ಕಹಿ ಸತ್ಯ. ಆಹಾರ ಧಾನ್ಯ ಸಂಗ್ರಹ ಎಷ್ಟಿದೆಯೆಂದರೆ ಎರಡು ವರ್ಷಗಳ ಹಿಂದೆಯೇ ಗೋದಾಮುಗಳಲ್ಲಿ ಇಲಿ ಹೆಗ್ಗಣಗಳ ಪಾಲಾಗುವಷ್ಟಿತ್ತು. ಅಷ್ಟೇ ಅಲ್ಲ ಗೋದಾಮುಗಳಲ್ಲಿ ಕೊಳೆತ ಆಹಾರ ಧಾನ್ಯವನ್ನು ಸಮುದ್ರಕ್ಕೆ ಚೆಲ್ಲಿದ ಘಟನೆಯೂ ವರದಿಯಾಗಿತ್ತು. ಇದರರ್ಥ ಜನರ ಹಸಿವೆಗೆ ಕಾರಣ ಆಹಾರ ಧಾನ್ಯಗಳ ಕೊರತೆಯಲ್ಲ. ಇಲ್ಲಿನ ಜನಪರವಲ್ಲದ ಸರಕಾರದ ಆಡಳಿತ ವೈಫಲ್ಯವಲ್ಲದೆ ಬೇರೇನೂ ಅಲ್ಲ.

ಇದು ದೇಶದ ಕತೆಯಾದರೆ ಕರ್ನಾಟಕದ ಕತೆಯೂ ಭಿನ್ನವಲ್ಲ. ಕರ್ನಾಟಕದ ಗೋದಾಮುಗಳಲ್ಲೂ ಭಾರೀ ಪ್ರಮಾಣದ ಆಹಾರ ಧಾನ್ಯ ಕೊಳೆಯುತ್ತಿದೆ ಎಂದು ವರದಿಯಾಗಿದೆ. ಸರಕಾರದ ಅಂಕಿಅಂಶಗಳ ಪ್ರಕಾರವೇ 43,258 ಟನ್ ಅಕ್ಕಿ, 1,716 ಟನ್ ಗೋಧಿ ಹಾಗೂ 12,046 ಟನ್ ತೊಗರಿಬೇಳೆ ಮುಂತಾದ ಸಾಮಗ್ರಿಗಳು ಕೊಳೆತು ಹೋಗಿವೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಕೊಡಲು ಈ ಆಹಾರ ಧಾನ್ಯ ಸಂಗ್ರಹಿಸಲಾಗಿತ್ತು ಎಂದು ಹೇಳಲಾಗಿದೆ. ಪ್ರತಿಕೂಲ ವಾತಾವರಣದ ಪರಿಣಾಮವಾಗಿ ಈ ಆಹಾರ ಧಾನ್ಯಗಳು ಉಪಯೋಗಿಸಲು ಸಾಧ್ಯವಾಗದಷ್ಟು ಹಾಳಾಗಿ ಹೋಗಿವೆ. ಆಡಳಿತ ವ್ಯವಸ್ಥೆಯ ಲೋಪಗಳೇ ಇದಕ್ಕೆ ಕಾರಣವಾಗಿದೆ. ಕೊರೋನ ನಂತರದ ಜನಸಾಮಾನ್ಯರ ಬದುಕು ಯಾತನಾಮಯವಾಗಿರುವಾಗ ಇಷ್ಟು ಭಾರೀ ಪ್ರಮಾಣದ ಆಹಾರ ಧಾನ್ಯಗಳನ್ನು ಕೊಳೆತು ಹೋಗಲು ಬಿಟ್ಟಿರುವುದು ಬರೀ ಲೋಪವಲ್ಲ ಇದನ್ನು ಗಂಭೀರ ಅಪರಾಧ ಎಂದೇ ಪರಿಗಣಿಸಬೇಕು.

ಕಳೆದ ಮಾರ್ಚ್ ತಿಂಗಳಲ್ಲಿ ಕೊರೋನ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದಾಗ ಲಕ್ಷಾಂತರ ವಲಸೆ ಕಾರ್ಮಿಕರು ತುತ್ತು ಕೂಳಿಗಾಗಿ ಪರದಾಡಿದ ಘಟನೆಗಳು ವರದಿಯಾಗಿದ್ದವು. ಅದೇ ಸಂದರ್ಭದಲ್ಲಿ ಗೋದಾಮುಗಳಲ್ಲಿ ಎಂಟು ಲಕ್ಷ ಟನ್ ಆಹಾರ ಧಾನ್ಯಗಳು ಕೊಳೆಯುವ ಸ್ಥಿತಿಯಲ್ಲಿದ್ದವು ಎಂದೂ, ಕೊಳೆಯುತ್ತಿದ್ದ ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸಬೇಕೆಂಬ ಚಿಂತನೆ ನಡೆದಿದೆ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಷ್ಟೇ ಅಲ್ಲ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಪ್ರತಿವರ್ಷ ಮೂರು ಲಕ್ಷ ಟನ್ ಆಹಾರ ಧಾನ್ಯಗಳು ಹಾಳಾಗುತ್ತಿರುವುದನ್ನು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸಚಿವಾಲಯ ಕಳೆದ ಮಾರ್ಚ್ ನಲ್ಲಿ ಲೋಕಸಭೆಗೆ ತಿಳಿಸಿತ್ತು. ಕೋಟ್ಯಂತರ ಜನರ ಹಸಿವನ್ನು ಇಂಗಿಸಬೇಕಾದ ಆಹಾರ ಸಾಮಗ್ರಿಗಳು ಈ ಪರಿ ಹಾಳಾಗಿ ಹೋಗಲು ಕಾರಣವೇನು? ನಮ್ಮ ದೇಶದ ಗೋದಾಮುಗಳು ವೈಜ್ಞಾನಿಕವಾಗಿ ಆಹಾರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಕಾಪಾಡುವ ಸ್ಥಿತಿಯಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ನಮ್ಮ ದೇಶದ ಅನೇಕ ಗೋದಾಮುಗಳು ಮಳೆ ಬಂದಾಗ ಸೋರುತ್ತವೆ. ಮಳೆ ಮತ್ತು ತೇವಾಂಶದ ವಾತಾವರಣ ಕೂಡ ಆಹಾರ ಸಾಮಗ್ರಿ ಹಾಳಾಗಲು ಕಾರಣವಾಗಿದೆ. ಜೊತೆಗೆ ಕೀಟಗಳಿಂದಲೂ ಆಹಾರ ಧಾನ್ಯಗಳು ಹಾಳಾಗಿ ಹೋಗುತ್ತಿವೆ.

ಲಕ್ಷಾಂತರ ಟನ್ ಆಹಾರ ಧಾನ್ಯ ಹಾಳಾಗಲು ಬರೀ ಸಂಗ್ರಹ ವ್ಯವಸ್ಥೆಯ ಲೋಪಗಳು ಮಾತ್ರ ಕಾರಣವಲ್ಲ. ಅವುಗಳ ಜೊತೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ದೋಷಗಳೂ ಕಾರಣವಾಗಿವೆ. ನಮ್ಮ ಪಡಿತರ ವ್ಯವಸ್ಥೆ ನಿಜವಾದ ಫಲಾನುಭವಿಗಳನ್ನು ತಲುಪುವಲ್ಲಿ ವಿಫಲಗೊಂಡಿದೆ. ಆಹಾರ ಧಾನ್ಯಗಳು ಗೋದಾಮುಗಳಲ್ಲಿ ಕೊಳೆತು, ಇಲಿ ಹೆಗ್ಗಣಗಳ ಪಾಲಾದರೂ ಇವುಗಳನ್ನು ಹಸಿದವರಿಗೆ ವಿತರಿಸದಿರಲು ಕಾರಣವೇನು? ಇಲಿ ಹೆಗ್ಗಣಗಳಾದರೂ ತಿನ್ನಲಿ ಜನರಿಗೆ ವಿತರಿಸುವುದಿಲ್ಲ ಎನ್ನುವ ಅಧಿಕಾರಶಾಹಿಯ ಮನೋಭಾವ ಹಾಗೂ ಅಧಿಕಾರದಲ್ಲಿರುವ ರಾಜಕಾರಣಿಗಳ ಬೇಜವಾಬ್ದಾರಿತನ ಕಾರಣವಲ್ಲದೇ ಬೇರೇನೂ ಅಲ್ಲ ಎಂದರೆ ಅತಿಶಯೋಕ್ತಿಯಲ್ಲ.

 ಹಸಿವು ಮುಕ್ತ ಭಾರತ ಬರೀ ಘೋಷಣೆಯಾಗಬಾರದು. ದೇಶದಲ್ಲಿ ಆಹಾರ ಧಾನ್ಯಗಳ ಸಂಗ್ರಹ ಸಾಕಷ್ಟಿರುವಾಗ ಹಸಿವಿನಿಂದ ನರಳುತ್ತಿರುವ ಇಲ್ಲವೆ ಸಾಯುತ್ತಿರುವ ಘಟನೆಗಳು ಸಂಭವಿಸಬಾರದು. ಅಪೌಷ್ಟಿಕತೆ ಎಂಬುದು ಇರಲೇಬಾರದು. ಆಹಾರ ಧಾನ್ಯಗಳು ಹಾಳಾಗಿ ಹೋಗದಂತೆ ಸಮರ್ಪಕವಾದ, ವೈಜ್ಞಾನಿಕವಾದ ಸಂಗ್ರಹ ವ್ಯವಸ್ಥೆಯನ್ನು ರೂಪಿಸಲು ಸರಕಾರ ಇನ್ನು ಮುಂದಾದರೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ದೇಶದ ಎಲ್ಲ ಗೋದಾಮುಗಳನ್ನು ಆಹಾರ ಧಾನ್ಯ ಹಾಳಾಗಿ ಹೋಗದಂತೆ ಸುಸಜ್ಜಿತವಾಗಿಡಲು ಸೂಕ್ತವಾದ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು. ಆಹಾರ ಸಾಮಗ್ರಿಯನ್ನು ಕೊಳೆಯಲು ಬಿಡುವಂತಹ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಉಗ್ರ ಕ್ರಮವನ್ನು ಕೈಗೊಳ್ಳಬೇಕು. ಹೀಗೆ ಕೊಳೆಯಲು ಬಿಡುವುದು ಅತ್ಯಂತ ಗಂಭೀರವಾದ ಲೋಪವಾಗಿದೆ. ಇನ್ನು ಮುಂದಾದರೂ ಹೀಗಾಗದಂತೆ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News