ಮಲ ಹೊರುವ ಪದ್ಧತಿಗೆ ಕೊನೆಯೆಂದು?

Update: 2020-11-20 06:38 GMT

ಕೊರೋನ ಕಾಲದಲ್ಲಿ ಸೇವೆ ಮಾಡುತ್ತಾ ಎಷ್ಟು ವೈದ್ಯರು, ಪೊಲೀಸರು ಮೃತರಾಗಿದ್ದಾರೆ ಎನ್ನುವುದರ ಕುರಿತಂತೆ ಅಧಿಕೃತ ಅಂಕಿ ಅಂಶಗಳು ಸಿಗುತ್ತವೆ. ಆದರೆ ಎಷ್ಟು ಮಂದಿ ಪೌರ ಕಾರ್ಮಿಕರು ಸತ್ತಿದ್ದಾರೆ ಎನ್ನುವುದರ ಕುರಿತಂತೆ ಸರಕಾರದ ಬಳಿ ಯಾವುದೇ ಮಾಹಿತಿಯಿಲ್ಲ. ಕೊರೋನ ಕಾಲದಲ್ಲೂ ಯಾವುದೇ ಭಯವಿಲ್ಲದೆ, ಸೌಲಭ್ಯಗಳಿಲ್ಲದೆ ನಗರ ಪರಿಸರವನ್ನು ಶುಚಿಯಾಗಿಡುತ್ತಿದ್ದ ಈ ಯೋಧರಿಗೆ ಕೊರೋನ ಸೋಂಕು ತಗಲಿರುವ ಮಾಹಿತಿಯೂ ಸರಕಾರದ ಬಳಿಯಿಲ್ಲ. ಬಹುಶಃ ಕೊರೋನ ಸೋಂಕು ಈ ಕಾರ್ಮಿಕರನ್ನು ಬಿಟ್ಟು ಉಳಿದೆಲ್ಲ ಸಿಬ್ಬಂದಿ ವಲಯವನ್ನೂ ಕಾಡಿದೆ. ಈ ಕಾರ್ಮಿಕರನ್ನು ಕಾಡುತ್ತಿರುವ ಜಾತಿ ಸೋಂಕಿಗೆ ಭಯಪಟ್ಟು ಕೊರೋನ ಸೋಂಕು ಇವರ ಬಳಿ ಸಮೀಪಿಸದೇ ಇದ್ದಿರುವ ಸಾಧ್ಯತೆಗಳಿವೆ.

ಶುಚಿತ್ವ ಆಂದೋಲನಕ್ಕಾಗಿ ಸರಕಾರ ಕೋಟ್ಯಂತರ ರೂಪಾಯಿ ವ್ಯಯ ಮಾಡಿದೆಯಾದರೂ, ಈ ದೇಶದಲ್ಲಿ ಪೌರ ಕಾರ್ಮಿಕರ ಬದುಕಿನಲ್ಲಿ ಸುಧಾರಣೆಯಾಗಿಲ್ಲ. ಇನ್ನೂ ದೇಶದಲ್ಲಿ ಮಲ ಹೊರುವ ಪದ್ಧತಿ ಜೀವಂತವಿರುವ ಕುರಿತಂತೆ ಮಾಹಿತಿಗಳು ಹೊರ ಬೀಳುತ್ತಿವೆ. ಮಲ ಹೊರುವ ವೃತ್ತಿಯ ನಿಷೇಧ ಹಾಗೂ ಮಲಹೊರುವ ಕಾರ್ಮಿಕರ ಪುನರ್ವಸತಿ (ತಿದ್ದುಪಡಿ) ವಿಧೇಯಕ-2020, ಒಳಚರಂಡಿಗಳಲ್ಲಿ ಮೃತಪಟ್ಟ ಕಾರ್ಮಿಕರಿಗೆ ಪರಿಹಾರ, ಪುನರ್ವಸತಿ ಯೋಜನೆಗಳು ಹಾಗೂ ಉದ್ಯೋಗದ ಸ್ಥಳದಲ್ಲಿ ಸುರಕ್ಷಿತ ಸಾಧನಗಳ ಲಭ್ಯತೆಗೆ ಸಂಬಂಧಿಸಿ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸಿದೆ. ವಿಷಾದಕರವೆಂದರೆ ಈ ಕಾಯ್ದೆಯ 1993 ಹಾಗೂ 2013ರ ಆವೃತ್ತಿಗಳಲ್ಲಿಯೂ ಇದೇ ಅಂಶಗಳನ್ನು ಖಾತರಿಪಡಿಸಲಾಗಿತ್ತು. ಆದಾಗ್ಯೂ ದೇಶದಲ್ಲಿ ಮಲಹೊರುವ ಕಾರ್ಮಿಕರ ಪರಿಸ್ಥಿತಿಯು ಸುಧಾರಿಸುವ ಹಾಗೆೆ ಕಾಣುತ್ತಿಲ್ಲ. ಈ ಹಿಂದಿನ ಕಾಯ್ದೆಗಳು ಕೂಡಾ ಈ ನಿಟ್ಟಿನಲ್ಲಿ ನೀತಿನಿರೂಪಣೆ ಹಾಗೂ ಅನುಷ್ಠಾನ ಮಟ್ಟದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದವು.

2013ರ ಕಾಯ್ದೆಯಲ್ಲಿ ಮಲಹೊರುವ ಕಾರ್ಮಿಕರಿಗೆ ಘನತೆಯೊಂದಿಗೆ ಬದುಕುವ ಮೂಲಭೂತ ಹಕ್ಕನ್ನು ಸಂರಕ್ಷಿಸಲು ಒತ್ತು ನೀಡಲಾಗಿತ್ತು. ಮಲಹೊರುವ ಕಾರ್ಮಿಕ ಪದ್ಧತಿಯನ್ನು ಈ ಕಾಯ್ದೆಯು ಜನಾಂಗೀಯ ನರಮೇಧಕ್ಕೆ ಹೋಲಿಸಿತ್ತು. 2020ರಲ್ಲಿ ದೇಶಾದ್ಯಂತ ಸುಮಾರು 48 ಸಾವಿರ ಜನರು ಮಾನವ ಮಲಹೊರುವ ಕೆಲಸದಲ್ಲಿ ತೊಡಗಿದ್ದಾರೆಂದು ಅಂದಾಜಿಸಲಾಗಿದ್ದು, ಅವರಲ್ಲಿ ಶೇ.98 ಮಂದಿ ಮಹಿಳೆಯರು. ಅವರು ಗುತ್ತಿಗೆಯಾಧಾರದಲ್ಲಿ ನಿಯೋಜಿತರಾಗಿದ್ದಾರೆ. ಅವರಿಗೆ ಯಾವುದೇ ರಕ್ಷಣಾ ಕವಚಗಳನ್ನು ನೀಡಲಾಗುತ್ತಿಲ್ಲ. ಅವರ ಪುನರ್ವಸತಿಯ ಕುರಿತಾಗಿ ಯಾವುದೇ ಹಣಕಾಸು ನೆರವನ್ನು ನೀಡಲು ಕೂಡಾ ವಿಳಂಬಿಸಲಾಗುತ್ತಿದೆ.

ಓರ್ವ ಮಲಹೊರುವ ಕಾರ್ಮಿಕನ ಸರಾಸರಿ ಜೀವಿತಾವಧಿಯು 50 ವರ್ಷಗಳಿಗಿಂತಲೂ ಕಡಿಮೆಯೆಂಬುದನ್ನು ಅಂಕಿಅಂಶಗಳು ದೃಢಪಡಿಸಿವೆ. ಇವರಲ್ಲಿ ಶೇ.80ರಷ್ಟು ಮಂದಿ ನಿವೃತ್ತಿಯ ವಯಸ್ಸು ತಲುಪುವ ಮುನ್ನವೇ ಕೆಲಸದ ಸಂದರ್ಭದಲ್ಲಿಯೋ ಅಥವಾ ಮಲದ ನೇರ ಸಂಪರ್ಕದಿಂದಾಗಿ ಉಂಟಾಗುವ ಗಂಭೀರವಾದ ಅಸ್ವಸ್ಥತೆಯಿಂದಾಗಿ ಸಾವನ್ನಪ್ಪುತ್ತಾರೆ. ಒಳಚರಂಡಿ ಕಾರ್ಮಿಕರ ಸಾವುಗಳ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶಗಳು ಲಭ್ಯವಿಲ್ಲವಾದರೂ, 1,080ಕ್ಕೂ ಅಧಿಕ ನೈರ್ಮಲ್ಯ ಕಾರ್ಮಿಕರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆಂದು ಅಂದಾಜಿಸಲಾಗಿದ್ದು, ಅವರಲ್ಲಿ ಬಹುತೇಕ ಮಂದಿಯ ಕುಟುಂಬಿಕರಿಗೆ ಪರಿಹಾರ ಇನ್ನೂ ದೊರೆತಿಲ್ಲ. ಇಲ್ಲಿ ಕಾಯ್ದೆಯು ಸಮರ್ಪಕವಾಗಿ ಜಾರಿಗೊಂಡಿಲ್ಲ ಎನ್ನುವುದಕ್ಕಿಂತಲೂ ಹೆಚ್ಚಾಗಿ ಮಾನವಹಕ್ಕುಗಳ ಘೋರ ಉಲ್ಲಂಘನೆಯೇ ದುರಂತಗಳಿಗೆ ಕಾರಣ ಎಂದು ಹೇಳಬಹುದಾಗಿದೆ.

ಮಲ ಹೊರುವ ಪದ್ಧತಿಯು ಪ್ರಚಲಿತದಲ್ಲಿರುವುದನ್ನು ಒಪ್ಪಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಲೇ ಇವೆ. ಮಲಹೊರುವ ಕೆಲಸದಲ್ಲಿ ತಾವು ಯಾವುದೇ ಕಾರ್ಮಿಕರನ್ನು ತೊಡಗಿಸಿಕೊಂಡಿಲ್ಲವೆಂದು ಕೆಲವು ರಾಜ್ಯಗಳು ತಾವಾಗಿಯೇ ಘೋಷಿಸಿಕೊಂಡಿವೆ. ಇತರ ರಾಜ್ಯಗಳು ಕಾಯ್ದೆಯ ನಿಯಮಾವಳಿಗಳನ್ನು ಜಾರಿಗೊಳಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ದೇಶದಲ್ಲಿ ಮಲಹೊರುವ ಕಾರ್ಮಿಕರ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆಯಾಗಿರುವ ಭಾರತೀಯ ರೈಲ್ವೆಯು ರೈಲ್ವೆ ಹಳಿಗಳಿಂದ ಮಾನವ ಮಲವನ್ನು ತೆಗೆಯುವ ಕೆಲಸಕ್ಕಾಗಿ ಅವರನ್ನು ಸಫಾಯಿ ಕರ್ಮಚಾರಿಗಳು ಎಂಬ ಹೆಸರಿನಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಈ ಉದ್ಯೋಗವನ್ನು ಗುತ್ತಿಗೆಯಾಧಾರದಲ್ಲಿ ನೀಡುವುದರಿಂದ ವಿವಿಧ ಇಲಾಖೆಗಳು ಅವರ ಬಗೆಗೆ ತಮ್ಮ ಹೊಣೆಗಾರಿಕೆಯಿಂದ ಸುಲಭದಲ್ಲಿಯೇ ತಪ್ಪಿಸಿಕೊಳ್ಳುತ್ತಿವೆ. ಈ ಉದ್ಯೋಗವನ್ನು ಖಾಸಗೀಕರಣಗೊಳಿಸಿರುವುದರಿಂದ ಅವರ ಶೋಷಣೆಗೆ ಹೆಚ್ಚಿನ ಅವಕಾಶ ದೊರೆತಂತಾಗಿದೆ. ಅಪಾಯದ ಅರಿವಿದ್ದೂ ಮಲಹೊರುವ ಕಾರ್ಮಿಕರನ್ನು ಇವರು ಒಳಚರಂಡಿಗಳಲ್ಲಿ ಇಳಿಯುವಂತೆ ಮಾಡುವುದರಿಂದಾಗಿ ಒಂದೇ ಬಾರಿಗೆ ಮೂರರಿಂದ ನಾಲ್ವರು ಸಾವಿಗೀಡಾದ ಹಲವಾರು ಘಟನೆಗಳು ವರದಿಯಾಗಿವೆ.

ಮಲಹೊರುವಿಕೆಯ ಉದ್ಯೋಗವನ್ನು ಕೇವಲ ಕೆಳವರ್ಗದ ದಲಿತರು ಅಥವಾ ‘ಅಸ್ಪಶ್ಯ’ ಜಾತಿಗಳಿಗೆ ಮಾತ್ರವೇ ನೀಡಲಾಗುತ್ತದೆ. ಈ ಸಮುದಾಯಗಳಿಗೆ ಸೇರಿದವರನ್ನು ಹುಟ್ಟಿನಿಂದಲೇ ಅಶುದ್ಧರೆಂಬುದಾಗಿ ಪರಿಗಣಿಸಲಾಗುತ್ತಿದೆ. ಅವರು ಪ್ರತ್ಯೇಕ ಪ್ರದೇಶಗಳಲ್ಲಿ ಅತ್ಯಂತ ಕೊಳಕು ವಾತಾವರಣದಲ್ಲಿ ಬದುಕುತ್ತಿರುತ್ತಾರೆ. ನೈರ್ಮಲ್ಯದ ಕಾಯಕವು ಜಾತಿ ಆಧಾರಿತ ವೃತ್ತಿಯಾಗಿರುವುದರಿಂದ, ಈ ಸಮುದಾಯಗಳ ಮುಂದಿನ ತಲೆಮಾರು ಕೂಡಾ ಈ ವಿಷ ವರ್ತುಲದಿಂದ ಪಾರಾಗುವುದು ಕಷ್ಟಕರವಾಗುತ್ತಿದೆ. ಪ್ರಸ್ತಾಪಿತ ಮಲ ಹೊರುವ ಉದ್ಯೋಗದ ನಿಷೇಧ ಹಾಗೂ ಮಲಹೊರುವ ಕಾರ್ಮಿಕರ ಪುನರ್ವಸತಿ (ತಿದ್ದುಪಡಿ) ವಿಧೇಯಕ-2020, ಜಾತಿ ವಿಷಯದ ಬಗ್ಗೆ ವೌನವಾಗಿದೆ ಹಾಗೂ ಈ ಸಮುದಾಯಗಳಿಗಾದ ಐತಿಹಾಸಿಕ ಅನ್ಯಾಯದಿಂದ ಮುಕ್ತಿ ದೊರಕಿಸಿಕೊಡಲು ವಿಫಲವಾಗಿದೆ. ಈ ಅವಕಾಶ ವಂಚಿತ ಸಮುದಾಯದಲ್ಲಿ ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ಮಲಹೊರುವ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಲಹೊರುವ ಪದ್ಧ್ದತಿಯನ್ನು ತೊಡೆದುಹಾಕಲು ಜಾತಿ ವ್ಯವಸ್ಥೆಯು ಒಂದು ದೊಡ್ಡ ಅಡ್ಡಗೋಡೆಯಾಗಿ ಪರಿಣಮಿಸಿದೆ.

ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ಪೌರ ಕಾರ್ಮಿಕರ ಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಆರ್ಥಿಕ ಹಿಂಜರಿತದಿಂದಾಗಿ ಮಲಹೊರುವ ಕೆಲಸವಾದರೂ ಸರಿ ಎಂಬ ಹತಾಶೆ, ಅಸಹಾಯಕತೆಗೆ ಕಾರ್ಮಿಕರು ಬಲಿಯಾಗಿದ್ದಾರೆ. ಬರೇ ಕಾನೂನಿಂದಷ್ಟೇ ಮಲಹೊರುವ ಪದ್ಧತಿಯನ್ನು ನಿವಾರಿಸಲು ಸಾಧ್ಯವಿಲ್ಲ. ಜಾತಿಯ ಕಲ್ಮಶಗಳು ನಮ್ಮಾಳಗಿಂದ ಅಳಿಯದೆ ಈ ಪದ್ಧತಿಯೂ ಅಳಿಯದು. ಒಂದು ನಿರ್ದಿಷ್ಟ ಸಮುದಾಯದವರು ಈ ಕೆಲಸಕ್ಕಾಗಿಯೇ ಹುಟ್ಟಿದ್ದಾರೆ ಎನ್ನುವ ನಮ್ಮ ಮನಸ್ಥಿತಿಯಿಂದಾಗಿ ಮಲಹೊರುವ ಪದ್ಧತಿಗೆ, ಮ್ಯಾನ್‌ಹೋಲ್ ಶುಚಿತ್ವಕ್ಕೆ ಮನುಷ್ಯರನ್ನೇ ಬಳಸುವ ಅಮಾನವೀಯತೆ ಉಳಿದುಕೊಂಡಿದೆ. ಮಂಗಳವನ್ನು ತಲುಪಿರುವ ನಮಗೆ, ಕೆಲವೇ ಅಡಿ ಆಳವಿರುವ ಮ್ಯಾನ್ ಹೋಲ್‌ಗಳಿಗೆ ಇಳಿಸುವ ಯಂತ್ರಗಳನ್ನು ಬಳಸುವುದಕ್ಕೆ ಸಾಧ್ಯವಾಗಿಲ್ಲ.

ಮಲಹೊರುವ ಪದ್ಧತಿ ಕೊನೆಗಾಣಿಸಬೇಕಾದರೆ, ಮಲಹೊರುವಿಕೆಯ ಅವಶ್ಯಕತೆಯನ್ನು ತೊಡೆದುಹಾಕುವ ಮೂಲ ಸೌಕರ್ಯಗಳನ್ನು ನಿರ್ಮಿಸುವ ಕುರಿತು ಸರಕಾರವು ಗಮನಹರಿಸಬೇಕಾಗಿದೆ. ಒಳಚರಂಡಿಗಳ ಸ್ವಚ್ಛತೆಯ ಪ್ರಕ್ರಿಯೆಯನ್ನು ಸ್ವಯಂಚಾಲಿತ ಯಂತ್ರಗಳ ಮೂಲಕ ನಡೆಸುವ ತಂತ್ರಜ್ಞಾನದ ಅಳವಡಿಕೆ ಹಾಗೂ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯು, ಈ ಜಾತಿಗಳನ್ನು ಮಲಹೊರುವ ಪದ್ಧತಿಯಿಂದ ಮೇಲೆತ್ತಲು ಅವಕಾಶ ನೀಡುವ ಪ್ರಥಮ ಹೆಜ್ಜೆಯಾಗಿದೆ. ಶರೀರವನ್ನು ಸೀಳದೆ, ಶಸ್ತ್ರಕ್ರಿಯೆಗಳನ್ನು ನಡೆಸಲು ಸಾಧ್ಯವಿರುವಂತಹ ತಂತ್ರಜ್ಞಾನ ನಮ್ಮಲ್ಲಿರುವಾಗ, ಒಳಚರಂಡಿಯನ್ನು ಸ್ವಚ್ಛಗೊಳಿಸಲು ಕಾರ್ಮಿಕರ ಅಗತ್ಯ ಯಾಕಿದೆ? ಎಂಬ ಸರಳ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದರಿಂದ ಸುದೀರ್ಘ ಇತಿಹಾಸವುಳ್ಳ ಬಹುದೊಡ್ಡ ಮಾನವ ದುರಂತವೊಂದಕ್ಕೆ ಅಂತ್ಯ ಹಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News