ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಶಾಲೆಗಳನ್ನು ಆರಂಭಿಸಲು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ಮನವಿ

Update: 2020-11-22 17:17 GMT

ಬೆಂಗಳೂರು, ನ. 22: ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಅಗತ್ಯ ಸುರಕ್ಷತಾ ಕ್ರಮ ಮತ್ತು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಶಾಲೆಗಳನ್ನು ಕೂಡಲೇ ತೆರೆಯಲು ತೀರ್ಮಾನಿಸಬೇಕು ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು, ಕಲಿಕೆಯ ಹೊರತಾಗಿ, ಪೌಷ್ಟಿಕಾಂಶ ಮತ್ತು ಆರೋಗ್ಯ ಸೇರಿದಂತೆ ಶಿಕ್ಷಣದ ಇತರ ಹಲವು ಅಂಶಗಳಿಗೆ ಶಾಲೆಯು ಒಂದು ಪ್ರಮುಖ ತಾಣವಾಗಿದೆ. ಶಾಲೆಗಳನ್ನು ಮುಚ್ಚಿರುವುದು ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟದಿಂದ ಮಕ್ಕಳನ್ನು ವಂಚಿತಗೊಳಿಸಿದೆ. ಈ ಅಂಶವನ್ನು ಹೈಕೋರ್ಟ್ ಇತ್ತೀಚೆಗೆ ವ್ಯಕ್ತಡಿಸಿದೆ ಎಂದು ಉಲ್ಲೇಖಿಸಿದ್ದಾರೆ.

ಮಧ್ಯಾಹ್ನದ ಬಿಸಿ ಊಟ ಹಾಗೂ ಇತರೆ ಸೌಲಭ್ಯಗಳನ್ನು ಮಕ್ಕಳು ನಿರಂತರವಾಗಿ ಕಳೆದುಕೊಳ್ಳುವುದರಿಂದ ಮಕ್ಕಳ ಬದುಕಿನ ಮೇಲೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗುವ ಎಲ್ಲ ಸಂಭವನೀಯತೆಗಳಿವೆ ಹೆಚ್ಚಿವೆ. ನಿಜ ಹೇಳಬೇಕೆಂದರೆ ಗ್ರಾಮೀಣ ಭಾಗದಲ್ಲಿ ಮನೆಗಿಂತ ಶಾಲೆಯೇ ಮಗುವಿನ ಸುರಕ್ಷತೆ ಹಾಗು ರಕ್ಷಣೆಗೆ ಇರುವ ಸೂಕ್ತ ಸ್ಥಳವಾಗಿದೆ. ದೀರ್ಘಕಾಲ ಶಾಲೆಗಳು ಮುಚ್ಚಿರುವುದರಿಂದ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ. ಶಾಲೆಯ ಮುಚ್ಚಿರುವ ಕಾರಣ ಮಕ್ಕಳು ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಮತ್ತು ಅಪೌಷ್ಟಿಕತೆಯಿಂದ ಶಾಶ್ವತವಾಗಿ ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಇದೆ ಮತ್ತು ಅದು ಸಹಕಾರಿಯಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇದು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸರಕಾರವು ಈಗಾಗಲೇ ಎಸೆಸೆಲ್ಸಿ, ಪಿಯುಸಿ, ಸಿಇಟಿ, ನೀಟ್ ಇತ್ಯಾದಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಆಸ್ಪತ್ರೆಗೆ ದಾಖಲಾದವರ ಸಂಖ್ಯೆ, ಗುಣಮುಖರಾದವರು ಮತ್ತು ಸಾವನ್ನಪ್ಪಿದವರ ವಿವರಗಳು ಸರಕಾರದ ಬಳಿ ಇದೆ. ಈ ಪಟ್ಟಿಗಳಲ್ಲಿ ಮಕ್ಕಳ ಶೇಕಡಾವಾರು ಪ್ರಮಾಣ ಕಡಿಮೆ ಎಂಬುದು ಸರಕಾರಕ್ಕೆ ತಿಳಿದಿದೆ. ಇತರ ಕಾಯಿಲೆಗಳಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿ ಮಡಿದ ಕೆಲವೇ ಕೆಲವು ಮಕ್ಕಳನ್ನು  ಹೊರತುಪಡಿಸಿದರೆ ಮಕ್ಕಳಿಗೆ ಈ ರೋಗ ಹರಡಿದ ಪ್ರಮಾಣ ಕಡಿಮೆ. ಪಾಲಕರಿಗೆ ಮತ್ತು ಪೋಷಕರಿಗೆ ಧೈರ್ಯ ತುಂಬಲು ಸರ್ಕಾರ ಈ ಎಲ್ಲ ದತ್ತಾಂಶಗಳನ್ನು ಬಿಡುಗಡೆ ಮಾಡಬೇಕು ಮತ್ತು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಅವರು ಕೋರಿದ್ದಾರೆ.

ಕೋವಿಡ್-19  ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಧೀರ್ಘಕಾಲದ ಲಾಕ್‍ಡೌನ್ ಹೆಚ್ಚಿನ ಸಹಾಯ ಮಾಡಲಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಜೊತೆಗೆ ಕೋವಿಡ್ ಹರಡುವಿಕೆಯು ಈಗ ಕ್ಷೀಣಿಸುತ್ತಿದ್ದು, ಸುರಕ್ಷಿತ ಅಂತರ ಹಾಗು ಸ್ವಚ್ಛತೆ ಕಾಪಾಡುವ ಮೂಲಕ ಮಕ್ಕಳು ತಮ್ಮ ದೈನಂದಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಬಹುದಾಗಿದೆ. ಸರಕಾರ ಶಾಲೆಗಳನ್ನು ತೆರೆಯುವುದರಿಂದ ಎರಡನೇ ತರಂಗ ಸೃಷ್ಟಿಯಾಗುತ್ತದೆಯೆಂಬುದು ಕೇವಲ ಊಹಾಪೋಹವೇ ಹೊರತು ವೈಜ್ಞಾನಿಕ ಸತ್ಯವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಶಾಲೆಗಳನ್ನು ಪುನಾರಾರಂಭಿಸದಿರಲು ಯಾವುದೇ ವೈಜ್ಞಾನಿಕ ಕಾರಣ ಇಲ್ಲ. ಬದಲಿಗೆ, ಶಾಲೆ ಪ್ರಾರಂಭಿಸದಿದ್ದರೆ ಮಕ್ಕಳ ಬೆಳವಣಿಗೆಯ ಮೇಲೆ ಅದರಲ್ಲೂ ವಿಶೇಷವಾಗಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಮೇಲೆ ತೀವ್ರತರದ ಪರಿಣಾಮ ಉಂಟಾಗುತ್ತದೆ. ಈ ಮಕ್ಕಳ ದುರಾದೃಷ್ಟ ಸುಗಮವಾಗಿ ನಡೆಯುತ್ತಿದ್ದ ಮತ್ತು ದೇಶಕ್ಕೆ ಮಾದರಿಯಾಗಿದ್ದ ವಿದ್ಯಾಗಮ ಯೋಜನೆಯನ್ನು ತಾವು ಸ್ಥಗಿತಗೊಳಿಸಿದ್ದೀರಿ. ಇದು ತಂತ್ರಜ್ಞಾನದ ಲಭ್ಯತೆ ಇಲ್ಲದ ಮಕ್ಕಳಿಗಾದ ಘೋರ ಅನ್ಯಾಯ. ಈ ಮಕ್ಕಳು ಹಲವಾರು ತಿಂಗಳುಗಳಿಂದ ಶಾಲೆಯಿಂದ ಹೊರಗುಳಿದಿರುವ ಕಾರಣ ಮಕ್ಕಳು ತೀವ್ರವಾದ ‘ಕಲಿಕೆಯ ನಷ್ಟ’ವನ್ನು ಅನುಭವಿಸುತ್ತಿದ್ದಾರೆ. ಈ ಹಾನಿಕಾರಕ ಪರಿಣಾಮವು ವಿಶೇಷವಾಗಿ ಅವಕಾಶವಂಚಿತ ಮತ್ತು ಬಡಕುಟುಂಬಗಳ ಮೇಲೆ ಹೆಚ್ಚಾಗಿದೆ, ಈ ಮಕ್ಕಳಿಗೆ ಕುಟುಂಬದ ಬೆಂಬಲ ಬಹಳ ಕಡಿಮೆ ಎಂದು ನಿರಂಜನಾರಾಧ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News