2 ಕೋಟಿ ರೂ. ಹಫ್ತಾ ಬೇಡಿಕೆ ಪ್ರಕರಣದಲ್ಲಿ ಪೊಲೀಸ್ ಪದಕ ವಿಜೇತ ಎಎಸ್‍ಐ ಬಂಧನ

Update: 2020-11-23 06:22 GMT

ಹೊಸದಿಲ್ಲಿ: ಅತ್ಯುತ್ತಮ ಸೇವೆಗೆ ನೀಡಲಾಗುವ ಪೊಲೀಸ್ ಪದಕವನ್ನು 2019ರಲ್ಲಿ ಪಡೆದಿದ್ದ ದಿಲ್ಲಿಯ ಎಎಸ್‍ಐ ಒಬ್ಬರನ್ನು ಹಫ್ತಾ ವಸೂಲಿ ಪ್ರಕರಣದಲ್ಲಿ  ಬಂಧಿಸಲಾಗಿದೆ.  ದಕ್ಷಿಣ ದಿಲ್ಲಿಯ ಹೌಝ್ ಖಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ  ಎಎಸ್‍ಐ ರಾಜಬೀರ್ ಸಿಂಗ್ ಪ್ರಮುಖ ಆರೋಪಿಯೆಂದು ಹೇಳಲಾಗಿದೆ. ಈ ಪ್ರಕರಣದ ನಾಲ್ವರು ಇತರ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.

ಆರೋಪಿ ಎಎಸ್‍ಐಯನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದು ಅವರನ್ನು ಸೇವೆಯಿಂದಲೇ ವಜಾಗೊಳಿಸುವ ಕುರಿತಂತೆ ಯೋಚಿಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರು ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣ ಸಂಬಂಧ ದೂರು ದಾಖಲಿಸಿದ್ದ ವ್ಯಕ್ತಿ ದೂರಿನಲ್ಲಿ ತಿಳಿಸಿದಂತೆ ಆತನ ತಂದೆಗೆ ಕಾಲಾ ಎಂಬಾತನಿಂದ ರೂ. 2 ಕೋಟಿ ಹಣಕ್ಕೆ ಬೇಡಿಕೆಯಿರಿಸಿ ಕರೆ ಬಂದಿತ್ತಲ್ಲದೆ ಹಣ ನೀಡದೇ ಇದ್ದರೆ ಕುಟುಂಬ ಸಮೇತ ಕೊಲೆಗೈಯ್ಯುವ ಬೆದರಿಕೆಯನ್ನೂ ಒಡ್ಡಲಾಗಿತ್ತು.

ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಈ ಕರೆ ಮಾಡಿದಾಗ ಬಳಸಿದ ಸಿಮ್/ಮೊಬೈಲ್ ಫೋನನ್ನು ಹರ್ಯಾಣಾದ ರೋಹ್ಟಕ್‍ನಿಂದ ಜೂನ್ 2020ರಲ್ಲಿ ರಾಮಮೂರ್ತಿ ಎಂಬವರಿಂದ ಸೆಳೆಯಲಾಗಿತ್ತೆಂದು ತಿಳಿದು ಬಂದಿತ್ತು.  ಆದರೆ ಈ ಮೊಬೈಲ್ ಫೋನ್ ಬಳಸದ ಆರೋಪಿಗಳು ಅದರ ಸಿಮ್ ಅನ್ನು ಬೇರೊಂದು ಫೋನ್‍ನಲ್ಲಿ ಹಾಕಿ ಕರೆ ಮಾಡಿದ್ದರು. ಈ ಇನ್ನೊಂದು ಮೊಬೈಲ್ ಫೋನ್ ಅನ್ನು ಮುಕೇಶ್ ಎಂಬಾತ ಸಾವನ್ ಎಂಬ ವ್ಯಕ್ತಿಯಿಂದ ಖರೀದಿಸಿದ್ದ. ಇಬ್ಬರೂ ಪಂಕಜ್ ಗಾರ್ಡನ್ ಪ್ರದೇಶದ ನಿವಾಸಿಗಳಾಗಿದ್ದು ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಖರೀದಿಸಿದ ಮೊಬೈಲ್ ಅನ್ನು ಮುಕೇಶ್ ಪರ್ಮೋದ್ ಆಲಿಯಾಸ್ ಕಾಲಾ ಎಂಬಾತನಿಗೆ ನೀಡಿದ್ದ. ಹರ್ಯಾಣಾದ ಝಜ್ಜರ್ ನಿವಾಸಿಯಾದ ಈತ ರಾಜಸ್ಥಾನದ ಭಿವಂಡಿಯಿಂದ ಕರೆ ಮಾಡಿದ್ದ.

ತನಿಖೆಯಿಂದ ಈ ಮಾಹಿತಿ ಕಲೆ ಹಾಕಿದ ಪೊಲೀಸರು ಮುಕೇಶ್, ಸಾವನ್ ಹಾಗೂ ಸನ್ನಿ ಎಂಬವರನ್ನು ಬಂಧಿಸಿದ್ದರು.  ಇವರ ವಿಚಾರಣೆ ವೇಳೆ ಪರ್ಮೋದ್ ಆಲಿಯಾಸ್ ಕಾಲಾ ಮೂರು ಮೊಬೈಲ್ ಫೋನನ್ನು ಬಳಸುತ್ತಿದ್ದ ಎಂದು ತಿಳಿದು ಬಂದಿತ್ತು. ಇವುಗಳನ್ನು ಪರಿಶೀಲಿಸಿದಾಗ ಕಾಲಾ ಎಎಸ್‍ಐ ರಾಜಬೀರ್ ಸಿಂಗ್  ಜತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿತ್ತು. ವಜಾಗೊಳ್ಳುವ ಸಂದರ್ಭ ಆರೋಪಿ ಎಎಸ್‍ಐ ಪಿಸಿಆರ್ ನ ನೈಋತ್ಯ ವಲಯದಲ್ಲಿ ಸೇವೆಯಲ್ಲಿದ್ದರು.

ಪ್ರಕರಣದ ದೂರುದಾರನ ಬಗ್ಗೆ ತಿಳಿದಿದ್ದ ಸಿಂಗ್ ಆತನ ಕುರಿತು ಕಾಲಾ ಗೆ ಮಾಹಿತಿ ನೀಡಿದ್ದರಲ್ಲದೆ ಆತನನ್ನು ಹಲವಾರು ಬಾರಿ ಭೇಟಿಯಾಗಿದ್ದರು. ಎಎಸ್‍ಐ ತನಗೆ ಕರೆ ಮಾಡಿ ಈ ಹಫ್ತಾ ಕರೆಯ ಕುರಿತು ಮಾತನಾಡಲು ಕರೆದಾಗ ದೂರುದಾರರಿಗೆ ಅವರ ಶಾಮಿಲಾತಿಯ ಕುರಿತು ಸಂಶಯ ಉಂಟಾಗಿತ್ತು. ಕಾಲಾನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸಿಂಗ್ ಅವರೇ ತನಗೆ ಹಫ್ತಾ ಕರೆ ಮಾಡಲು ಹಾಗೂ ಹಣ ನೀಡದೇ ಇದ್ದರೆ  ದೂರುದಾರನ ಪುತ್ರನ ಕಾರಿನತ್ತ ಗುಂಡು ಹಾರಿಸಲು ಹೇಳಿದ್ದರು ಎಂದು ಆತ ಬಾಯ್ಬಿಟ್ಟ ನಂತರ ಎಎಸ್‍ಐ ಬಂಧನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News