ಬಾಲಕಿಗೆ ಲೈಂಗಿಕ ಕಿರುಕುಳ: ಬಂಧಿತ ಬಿಜೆಪಿ ಮುಖಂಡನ ಹೇಳಿಕೆ ಆಧಾರದಲ್ಲಿ ಪೊಲೀಸ್ ಅಧಿಕಾರಿ ಸೆರೆ

Update: 2020-11-24 03:48 GMT

ಚೆನ್ನೈ : ಹದಿಮೂರು ವರ್ಷದ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಎನ್ನೋರ್ ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಪುಗಳೇಂಡಿ ಎಂಬಾತನನ್ನು ಬಂಧಿಸಲಾಗಿದೆ.

ಬಾಲಕಿಯನ್ನು ಬಲಾತ್ಕಾರವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ ಎನ್ನುವುದನ್ನು ತಿಳಿದುಕೊಂಡ ಅಧಿಕಾರಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಎಂದು ಆಪಾದಿಸಲಾಗಿದ್ದು, ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಬಾಲಕಿಯನ್ನು ಬಲಾತ್ಕಾರವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದು ತಿಳಿದರೂ, 'ಗಿರಾಕಿ’ಯಾಗಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಈತ ಪ್ರತಿಯಾಗಿ ಈ ಅಪರಾಧವನ್ನು ವರದಿ ಮಾಡಿರಲಿಲ್ಲ ಎಂದು ಹೇಳಲಾಗಿದೆ.

ನಗರ ಪೊಲೀಸ್ ಇಲಾಖೆಯ ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧ ಪತ್ತೆ ವಿಭಾಗ, ಮೇಲ್ನೋಟಕ್ಕೆ ಈತನ ವಿರುದ್ಧ ಪುರಾವೆ ಸಿಕ್ಕಿದ ಹಿನ್ನೆಲೆಯಲ್ಲಿ ಪುಗಳಾಂಡಿಯನ್ನು ಬಂಧಿಸಿದೆ. ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣದಲ್ಲಿ ಬಂಧಿತನಾಗಿರುವ ಬಿಜೆಪಿ ಪದಾಧಿಕಾರಿ ರಾಜೇಂದ್ರ ಎಂಬಾತ ನೀಡಿದ ಮಾಹಿತಿಯ ಮೇರೆಗೆ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ತಾನು ಮಾತ್ರವಲ್ಲದೇ ಪುಗಳಾಂಡಿ ಕೂಡಾ ಹಲವು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ತನಿಖೆ ವೇಳೆ ರಾಜೇಂದ್ರನ್ ಬಹಿರಂಗಪಡಿಸಿದ್ದ. "ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಅಪರಾಧವನ್ನು ವರದಿ ಮಾಡದ್ದಕ್ಕೆ ಪ್ರತಿಫಲವಾಗಿ ಇನ್‌ಸ್ಪೆಕ್ಟರ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಾಲಕಿಯ ತಾಯಿ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಈ ವೇಶ್ಯಾವಾಟಿಕೆ ದಂಧೆಯನ್ನು ಬಯಲಿಗೆಳೆದಿದ್ದರು.

ಬಾಲಕಿ ಐದನೇ ತರಗತಿಯಲ್ಲಿ ಶಾಲೆ ಬಿಟ್ಟು ಒಬ್ಬಂಟಿ ತಾಯಿಗೆ ಸಹಾಯ ಮಾಡುತ್ತಿದ್ದಳು. ಬಾಲಕಿ ಋತುಮತಿಯಾದ ಬಳಿಕ ಬಾಲಕಿಯ ಪಾಲಿಗೆ ನೆರೆಹೊರೆಯವರು ಸುರಕ್ಷಿತವಲ್ಲ ಎಂಬ ಭಾವನೆಯಿಂದ ಉತ್ತರ ಚೆನ್ನೈನಲ್ಲಿದ್ದ 22 ವರ್ಷದ ಸೊಸೆ ಮನೆಯಲ್ಲಿ ಬಾಲಕಿಯನ್ನು ಬಿಟ್ಟಿದ್ದಳು. ಸೊಸೆಯ ಸ್ನೇಹಿತ ಮತ್ತು ಇತರ ಹಲವರು ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿ, ಪ್ರತಿ ದಿನ 8-10 ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟಿದ್ದರು. ಬಾಲಕಿಯನ್ನು ಹಲವು ತಿಂಗಳ ಕಾಲ ಮನೆಗೆ ಹೋಗಲು ಅವಕಾಶ ನೀಡದ ಹಿನ್ನೆಲೆಯಲ್ಲಿ ತಾಯಿಗೆ ಸಂಶಯ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News