​ಮುಂಬೈ ಪ್ರವಾಸಿ ಸಂಸ್ಥೆಯಿಂದ ಕೋವಿಡ್-19 ನಿರೋಧಕ ಲಸಿಕೆ ಪ್ರವಾಸೋದ್ಯಮ !

Update: 2020-11-24 04:18 GMT

ಮುಂಬೈ: ಕೊರೋನ ವೈರಸ್ ನಿರೋಧಕ ಲಸಿಕೆ ಪ್ರಯೋಗ ವಿಶ್ವಾದ್ಯಂತ ಅಂತಿಮ ಹಂತದಲ್ಲಿರುವ ನಡುವೆಯೇ, ಮುಂಬೈ ಮೂಲದ ಪ್ರವಾಸಿ ಸಂಸ್ಥೆಯೊಂದು ಲಸಿಕೆ ಪ್ರವಾಸೋದ್ಯಮ ಎಂಬ ಹೊಸ ಪರಿಕಲ್ಪನೆಯನ್ನು ತೇಲಿ ಬಿಟ್ಟಿದೆ.

ಕೋವಿಡ್-19 ವಿರುದ್ಧದ ಲಸಿಕೆ ಪಡೆಯಲು ಬಯಸುವವರನ್ನು ಅಮೆರಿಕೆಗೆ ಕರೆದೊಯ್ದು 4 ದಿನಗಳ ಕಾಲ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಲಸಿಕೆ ಹಾಕಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ. ಈ ಒಟ್ಟು ಸೌಲಭ್ಯಕ್ಕೆ 1.75 ಲಕ್ಷ ರೂ. ದರ ನಿಗದಿಪಡಿಸಿದೆ.

"ಕೊರೋನ ಲಸಿಕೆ ಪಡೆಯುವವರಲ್ಲಿ ಮೊದಲಿಗರಾಗಿ" ಎಂದು ಸಂಸ್ಥೆ ಮಾಡುತ್ತಿರುವ ಪ್ರಚಾರ ಸಾಹಿತ್ಯ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. "ಪಿಫಿಝರ್ ಲಸಿಕೆಯನ್ನು ಅಮೆರಿಕದಲ್ಲಿ ಅಧಿಕೃತವಾಗಿ ಮಾರಾಟ ಮಾಡಲು ಅವಕಾಶ ಸಿಕ್ಕಿದ ತಕ್ಷಣ (ಬಹುಶಃ ಡಿಸೆಂಬರ್ 11), ಕೆಲ ಆಯ್ದ ವಿವಿಐಪಿ ಗ್ರಾಹಕರಿಗೆ ಲಸಿಕೆ ಕೊಡಿಸಲು ನಾವು ಸಜ್ಜಾಗಿದ್ದೇವೆ" ಎಂದು ಸಂಸ್ಥೆ ಹೇಳಿಕೊಂಡಿದೆ.

ವೆಚ್ಚದಲ್ಲಿ ಮುಂಬೈನಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುವ ವಿಮಾನಯಾನದ ವೆಚ್ಚ, ಮೂರು ರಾತ್ರಿ ಮತ್ತು ನಾಲ್ಕು ಹಗಲಿನ ವಾಸ್ತವ್ಯ, ಉಪಾಹಾರ ಮತ್ತು ಒಂದು ಲಸಿಕೆ ಡೋಸ್‌ನ ವೆಚ್ಚ ಈ ಪ್ಯಾಕೇಜ್‌ನಲ್ಲಿ ಸೇರಿದೆ. ಈ ಸಂದೇಶದಲ್ಲಿ ನಮೂದಿಸಲಾಗಿದ್ದ ಸಂಪರ್ಕ ಸಂಖ್ಯೆ ಸೋಮವಾರವಿಡೀ ’ಬ್ಯುಸಿ’ ಇತ್ತು.

"ನಾವು ಲಸಿಕೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುತ್ತಿದ್ದೇವೆ" ಎಂದು ಸಂಸ್ಥೆ ಸಂದೇಶ ನೀಡಿದೆ. ಆರಂಭದಲ್ಲಿ ಜೀವನ ಶೈಲಿ ರೋಗಗಳಿಂದ ಬಳಲುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ, 65 ವರ್ಷ ಮೇಲ್ಪಟ್ಟವರಿಗೆ ಮತ್ತು ಆ ಬಳಿಕ ಆಸ್ಪತ್ರೆಗಳಲ್ಲಿ ವಾಣಿಜ್ಯ ಬಳಕೆಗಾಗಿ ಈ ಲಸಿಕೆ ಲಭ್ಯವಾಗಲಿದೆ ಎಂದು ಅಮೆರಿಕ ಈಗಾಗಲೇ ಪ್ರಕಟಿಸಿದೆ.

ನಾವು ಲಸಿಕೆ ಹೊಂದಿಲ್ಲ ಅಥವಾ ಖರೀದಿಸುತ್ತಿಲ್ಲ. ಪ್ರತಿಯೊಂದನ್ನೂ ಅಮೆರಿಕದ ಕಾನೂನು ಚೌಕಟ್ಟಿನಲ್ಲೇ ವ್ಯವಸ್ಥೆ ಮಾಡಲಿದ್ದೇವೆ. ನಿಮ್ಮ ಅಗತ್ಯತೆಯನ್ನು ನಾವು ಸಂಸ್ಕರಿಸಲಿದ್ದು, ಸದ್ಯಕ್ಕೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಇದಕ್ಕಾಗಿ ಮುಂಗಡ ಹಣವನ್ನು ಸಂಗ್ರಹಿಸುತ್ತಿಲ್ಲ. ನೀವು ನಿಮ್ಮ ಹೆಸರು, ಇ-ಮೇಲ್, ಮೊಬೈಲ್ ಸಂಖ್ಯೆ, ವಯಸ್ಸು ಮತ್ತು ದೈಹಿಕ ಅನಾರೋಗ್ಯದ ಬಗೆಗಿನ ಮಾಹಿತಿ ಮತ್ತು ಪಾಸ್‌ಪೋರ್ಟ್ ಪ್ರತಿಯನ್ನು ನೀಡಿ ನೋಂದಾಯಿಸಬಹುದು ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News