"ಅವರಿಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಅತಿಕ್ರಮಿಸುವುದಿಲ್ಲ"

Update: 2020-11-24 15:41 GMT

►'ಲವ್ ಜಿಹಾದ್' ಚರ್ಚೆಗಳ ನಡುವೆ ಮಹತ್ವದ ತೀರ್ಪು ನೀಡಿದ ನ್ಯಾಯಾಲಯ

ಲಕ್ನೋ,ನ.24: ತಥಾಕಥಿತ ‘ಲವ್ ಜಿಹಾದ್’ನ ವಿರುದ್ಧ ಕಾನೂನನ್ನು ತರಲು ಉತ್ತರ ಪ್ರದೇಶ,ಮಧ್ಯಪ್ರದೇಶ ಮತ್ತು ಹರ್ಯಾಣದಂತಹ ಬಿಜೆಪಿ ಆಡಳಿತದ ರಾಜ್ಯಗಳು ಮುಂದಾಗಿರುವ ಈ ಸಂದರ್ಭದಲ್ಲಿ ಅವುಗಳಿಗೆ ಆಘಾತವನ್ನುಂಟು ಮಾಡುವ ಮಹತ್ವದ ತೀರ್ಪನ್ನು ನೀಡಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು,ಮುಸ್ಲಿಂ ವ್ಯಕ್ತಿಯೋರ್ವನ ಪತ್ನಿಯ ಹೆತ್ತವರು ಆತನ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದೆ. ದಂಪತಿಯ ಪುತ್ರಿ ಕಳೆದ ವರ್ಷ ತಾನು ಪ್ರೀತಿಸಿದ್ದ ಮುಸ್ಲಿಂ ಯುವಕನನ್ನು ಮದುವೆಯಾಗಲು ಇಸ್ಲಾಮ್‌ಗೆ ಮತಾಂತರಗೊಂಡಿದ್ದಳು. ವೈಯಕ್ತಿಕ ಸಂಬಂಧದಲ್ಲಿ ಹಸ್ತಕ್ಷೇಪವು ಇಬ್ಬರು ವ್ಯಕ್ತಿಗಳ ಆಯ್ಕೆಯ ಸ್ವಾತಂತ್ರ್ಯದ ಹಕ್ಕಿನ ಗಂಭೀರ ಅತಿಕ್ರಮಣವಾಗುತ್ತದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

‘ಪ್ರಿಯಾಂಕಾ ಖರ್ವರ್ ಮತ್ತು ಸಲಾಮತ್ ಅನ್ಸಾರಿ ಅವರನ್ನು ಹಿಂದು ಮತ್ತು ಮುಸ್ಲಿಂ ಆಗಿ ನಾವು ನೋಡುವುದಿಲ್ಲ,ಬದಲಿಗೆ ತಮ್ಮ ಸ್ವಂತ ಇಚ್ಛೆ ಮತ್ತು ಆಯ್ಕೆಯಿಂದ ಕಳೆದೊಂದು ವರ್ಷದಿಂದಲೂ ಸುಖದಿಂದ ಬಾಳುತ್ತಿರುವ ಇಬ್ಬರು ವಯಸ್ಕ ವ್ಯಕ್ತಿಗಳನ್ನಾಗಿ ನೋಡುತ್ತೇವೆ. ನ್ಯಾಯಾಲಯಗಳು,ನಿರ್ದಿಷ್ಟವಾಗಿ ಸಾಂವಿಧಾನಿಕ ನ್ಯಾಯಾಲಯಗಳು ಭಾರತದ ಸಂವಿಧಾನದ ವಿಧಿ 23ರಡಿ ವ್ಯಕ್ತಿಗೆ ಖಾತರಿ ಪಡಿಸಲಾಗಿರುವ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಎತ್ತಿ ಹಿಡಿದಿವೆ ’ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಅಗರವಾಲ್ ಮತ್ತು ಪಂಕಜ್ ನಕ್ವಿ ಅವರ ಪೀಠವು ಹೇಳಿದೆ.

ಪೂರ್ವ ಉತ್ತರ ಪ್ರದೇಶದ ಖುಷಿ ನಗರ ನಿವಾಸಿ ಸಲಾಮತ್ ಅನ್ಸಾರಿ ಮತ್ತು ಪ್ರಿಯಾಂಕಾ ಖರ್ವರ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಆಕೆಯ ಹೆತ್ತವರ ವಿರೋಧದ ನಡುವೆ ಮದುವೆಯಾಗಿದ್ದರು. ಮದುವೆಗೆ ಮುನ್ನ ಇಸ್ಲಾಮಿಗೆ ಮತಾಂತರಗೊಂಡಿದ್ದ ಪ್ರಿಯಾಂಕಾ ತನ್ನ ಹೆಸರನ್ನು ‘ಆಲಿಯಾ’ ಎಂದು ಬದಲಿಸಿಕೊಂಡಿದ್ದಳು.

ಅದೇ ತಿಂಗಳು ಪ್ರಿಯಾಂಕಾಳ ಹೆತ್ತವರು ಸಲಾಮತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಮದುವೆಯ ಸಂದರ್ಭದಲ್ಲಿ ತಮ್ಮ ಪುತ್ರಿ ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು ದೂರಿನಲ್ಲಿ ಹೇಳಿದ್ದ ಅವರು ಸಲಾಮತ್ ವಿರುದ್ಧ ಬಲವಂತದಿಂದ ಮದುವೆಯಾಗುವ ಉದ್ದೇಶದಿಂದ ಅಪಹರಣದ ಮತ್ತು ಪೋಕ್ಸೊ ಕಾಯ್ದೆಯಡಿ ಆರೋಪಗಳನ್ನು ಹೊರಿಸಿದ್ದರು.

 ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲಾಮತ್ ಅರ್ಜಿಯನ್ನು ಸಲ್ಲಿಸಿದ್ದು,ಅಲಹಾಬಾದ್ ಉಚ್ಚ ನ್ಯಾಯಾಲಯವು ನ.11ರಂದು ಆತನ ಪರವಾಗಿ ತೀರ್ಪು ನೀಡಿದೆ.

  ಉತ್ತರ ಪ್ರದೇಶ ಸರಕಾರ ಮತ್ತು ಪ್ರಿಯಾಂಕಾಳ ಹೆತ್ತವರ ವಾದಗಳನ್ನು ತಿರಸ್ಕರಿಸಿದ ಉಚ್ಚ ನ್ಯಾಯಾಲಯವು,ತಮ್ಮಿಬ್ಬರ ಧರ್ಮಗಳನ್ನು ಪರಿಗಣಿಸದೆ ತನ್ನ ಆಯ್ಕೆಯ ವ್ಯಕ್ತಿಯೊಡನೆ ಬಾಳುವ ಹಕ್ಕು ಆತನ/ಆಕೆಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳಲ್ಲಿ ಅಂತರ್ಗತವಾಗಿದೆ ಎಂದು ತನ್ನ 14 ಪುಟಗಳ ತೀರ್ಪಿನಲ್ಲಿ ಹೇಳಿದೆ.

ಎಫ್‌ಐಆರ್‌ನ್ನು ಪ್ರಶ್ನಿಸಿದ್ದ ಸಲಾಮತ್ ಮತ್ತು ಪ್ರಿಯಾಂಕಾ,ಅದು ವೈವಾಹಿಕ ಸಂಬಂಧವನ್ನು ಕೊನೆಗಾಣಿಸಲು ದುರುದ್ದೇಶ ಹಾಗೂ ಕುಚೇಷ್ಟೆಯಿಂದ ಕೂಡಿದೆ ಮತ್ತು ಯಾವುದೇ ಅಪರಾಧವನ್ನು ಉಲ್ಲೇಖಿಸಿಲ್ಲ ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಉತ್ತರ ಪ್ರದೇಶ ಸರಕಾರ ಮತ್ತು ಪ್ರಿಯಾಂಕಾಳ ಹೆತ್ತವರ ಪರ ವಕೀಲರು,ಮದುವೆಯಾಗಲು ಧಾರ್ಮಿಕ ಮತಾಂತರವನ್ನು ನಿಷೇಧಿಸಲಾಗಿದೆ ಮತ್ತು ಇಂತಹ ಮದುವೆಗೆ ಕಾನೂನಿನ ಒಪ್ಪಿಗೆಯಿಲ್ಲ,ಆದ್ದರಿಂದ ಈ ನ್ಯಾಯಾಲಯವು ಇಂತಹ ದಂಪತಿಗಳ ಪರವಾಗಿ ತೀರ್ಪು ನೀಡಬಾರದು ಎಂದು ವಾದಿಸಿದ್ದರು.

ತೀರ್ಪಿನಲ್ಲಿ ಸಂವಿಧಾನವನ್ನು ಉಲ್ಲೇಖಿಸಿರುವ ಪೀಠವು,ಇಬ್ಬರು ಸಲಿಂಗಿಗಳು ಒಟ್ಟಿಗಿರಲು ಕಾನೂನು ಅನುಮತಿಯನ್ನು ನೀಡಿರುವಾಗ ಇಬ್ಬರು ವಯಸ್ಕ ವ್ಯಕ್ತಿಗಳು ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ಬದುಕುವುದಕ್ಕೆ ಯಾವುದೇ ವ್ಯಕ್ತಿ ಅಥವಾ ಕುಟುಂಬ ಅಥವಾ ಸರಕಾರ ಆಕ್ಷೇಪಿಸುವುದೇಕೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ಬದುಕುವ ಆತನ/ಆಕೆಯ ನಿರ್ಧಾರವು ಆತನ/ಆಕೆಯ ಹಕ್ಕು ಆಗಿದೆ. ಈ ಹಕ್ಕು ಅತಿಕ್ರಮಣಗೊಂಡಾಗ ಅದು ಸಂವಿಧಾನದ ವಿಧಿ 23ರಡಿ ಖಾತರಿಪಡಿಸಿರುವ ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.

ವಿವಾಹ/ಮತಾಂತರ ಆರೋಪಗಳ ಸಿಂಧುತ್ವದ ಬಗ್ಗೆ ತಾನು ಪ್ರತಿಕ್ರಿಯಿಸುತ್ತಿಲ್ಲ ಎಂದೂ ಸ್ಪಷ್ಟಪಡಿಸಿರುವ ನ್ಯಾಯಾಲಯವು,‘ಆದರೆ ಯಾವುದೇ ಅಪರಾಧವು ಸಾಬೀತಾಗದಿರುವುದರಿಂದ ಹಾಗೂ ತಮ್ಮ ಸ್ವಂತ ಇಚ್ಛೆ ಮತ್ತು ಆಯ್ಕೆಯಿಂದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಒಟ್ಟಿಗೆ ಬಾಳುತ್ತಿರುವ ವಯಸ್ಕ ವ್ಯಕ್ತಿಗಳು ನಮ್ಮ ಮುಂದಿರುವುದರಿಂದ ಪ್ರಕರಣವನ್ನು ರದ್ದುಗೊಳಿಸುತ್ತಿದ್ದೇವೆ ’ಎಂದು ತಿಳಿಸಿದೆ.

ಹಿಂದಿನ ಎರಡು ತೀರ್ಪುಗಳಿಗೆ ಅಸಮ್ಮತಿ

 ಈ ಹಿಂದೆ ಇದೇ ನ್ಯಾಯಾಲಯದಲ್ಲಿ ಇಂತಹುದೇ ಪ್ರಕರಣಗಳಲ್ಲಿ ವಿಭಿನ್ನ ನ್ಯಾಯಾಧೀಶರು ಹೊರಡಿಸಿದ್ದ ಎರಡು ಆದೇಶಗಳ ಬಗ್ಗೆಯೂ ಪೀಠವು ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು. ಈ ಪೈಕಿ ಒಂದು ಅರ್ಜಿಯನ್ನು ತಮ್ಮ ಅಂತರ್ ಧರ್ಮೀಯ ವಿವಾಹಗಳ ಬಳಿಕ ರಕ್ಷಣೆಯನ್ನು ಕೋರಿ ಐವರು ದಂಪತಿಗಳು ಸಲ್ಲಿಸಿದ್ದರು. ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇನ್ನೊಂದು ಪ್ರಕರಣದಲ್ಲಿ ಅಂತರ್ ಧರ್ಮೀಯ ವಿವಾಹವಾಗಿದ್ದ ದಂಪತಿ ಮೂರು ತಿಂಗಳ ಬಳಿಕ ರಕ್ಷಣೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದನ್ನು ಬೆಟ್ಟುಮಾಡಿದ್ದ ಏಕ ನ್ಯಾಯಾಧೀಶ ಪೀಠವು ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು.

ಈ ಎರಡೂ ತೀರ್ಪುಗಳು ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಇಬ್ಬರು ವಯಸ್ಕ ವ್ಯಕ್ತಿಗಳ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಅಥವಾ ತಾನು ಯಾರೊಂದಿಗೆ ಬದುಕಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವ ಆತನ/ಆಕೆಯ ಸ್ವಾತಂತ್ರ್ಯದ ಹಕ್ಕುಗಳನ್ನು ಪರಿಗಣಿಸಿರಲಿಲ್ಲ. ಇವೆರಡೂ ತೀರ್ಪುಗಳು ಉತ್ತಮ ಕಾನೂನಿನ ನಿದರ್ಶನಗಳಾಗಿರಲಿಲ್ಲ ಎಂದು ಪೀಠವು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News