ಶಾಲೆ ಪುನರಾರಂಭಕ್ಕೆ ಗೊಂದಲ ಏಕೆ?

Update: 2020-11-25 04:35 GMT

ಜಾತಿ ಮತಗಳ ಹೆಸರಿನಲ್ಲಿ ದೇವರು ಮತ್ತು ಧರ್ಮಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರುವ ಪಕ್ಷ ಸಂವಿಧಾನಾತ್ಮಕ ಆಡಳಿತ ನಿರ್ವಹಣೆಯಲ್ಲಿ ಹೇಗೆ ವಿಫಲಗೊಳ್ಳುತ್ತದೆ ಎಂಬುದಕ್ಕೆ ಈಗ ದೇಶವನ್ನು ಮತ್ತು ಕರ್ನಾಟಕವನ್ನು ಆಳುತ್ತಿರುವ ಭಾರತೀಯ ಜನತಾ ಪಕ್ಷ ಪ್ರತ್ಯಕ್ಷ ಉದಾಹರಣೆಯಾಗಿದೆ. ಬೇರೆ ವಿಷಯಗಳು ಒತ್ತಟ್ಟಿಗಿರಲಿ, ಕೊರೋನ ನಿಭಾಯಿಸುವಲ್ಲಿ ಈ ಸರಕಾರಗಳು ಎಲ್ಲೆಲ್ಲಿ ಎಡವಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಶಾಲಾಕಾಲೇಜುಗಳ ಪುನರಾರಂಭದ ಪ್ರಶ್ನೆಯಲ್ಲಿ ಕರ್ನಾಟಕದ ಬಿಜೆಪಿ ಸರಕಾರ ಗೊಂದಲದಲ್ಲಿದೆ. ಒಮ್ಮೆ ಶಾಲಾಕಾಲೇಜುಗಳನ್ನು ಆರಂಭಿಸುವುದಾಗಿ, ಇನ್ನೊಮ್ಮೆ ಇಲ್ಲ ಎಂದು ಹೇಳುತ್ತ್ತಾ ವಿದ್ಯಾರ್ಥಿಗಳನ್ನು ಮತ್ತು ಅವರ ಪಾಲಕರನ್ನು ಅತಂತ್ರ ಸ್ಥಿತಿಗೆ ದೂಡುತ್ತಾ ಬಂದಿದೆ. ಈಗ ಡಿಸೆಂಬರ್ ಮೂರನೇ ವಾರದವರೆಗೆ ಶಾಲಾಕಾಲೇಜುಗಳನ್ನು ತೆರೆಯದಿರಲು ತೀರ್ಮಾನಿಸಿದೆ. ಕೋವಿಡ್ ಕಾರಣದಿಂದ ಕಳೆದ ಎಂಟು ತಿಂಗಳಿಂದ ಮುಚ್ಚಿರುವ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಾಲೋಚನೆ ಮಾಡಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೆಲ ತಜ್ಞರ ಸಲಹೆಯಂತೆ ಈ ಕ್ರಮ ಕೈಗೊಂಡಿದ್ದರೆ ಅಭ್ಯಂತರವಿಲ್ಲ. ಆದರೆ ಶಾಲಾಕಾಲೇಜು ಪುನರಾರಂಭದ ಬಗ್ಗೆ ವೈದ್ಯಕೀಯ ಮತ್ತು ಶೈಕ್ಷಣಿಕ ಪರಿಣಿತರಲ್ಲೇ ವಿವಿಧ ಅಭಿಪ್ರಾಯಗಳಿವೆ. ಡಾ. ಶ್ರೀನಿವಾಸ ಕಕ್ಕಿಲ್ಲಾಯರಂತಹ ವೈದ್ಯಕೀಯ ಪರಿಣಿತರು ಶಾಲಾಕಾಲೇಜುಗಳ ಆರಂಭಕ್ಕೆ ಒಲವು ತೋರಿಸಿದ್ದಾರೆ. ‘‘ಅತ್ಯಂತ ಜನ ಸಂದಣಿಯ ಮಾರುಕಟ್ಟೆ ಮತ್ತು ಅಂಗಡಿಗಳು ಹಾಗೂ ಚಲನಚಿತ್ರ ಮಂದಿರಗಳು ಮುಂತಾದವುಗಳು ತೆರೆದಿರುವಾಗ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯವಾದ ಶಾಲಾಕಾಲೇಜುಗಳನ್ನು ತೆರೆದರೆ ತಪ್ಪಿಲ್ಲ’’ ಎಂದು ಡಾ. ಕಕ್ಕಿಲ್ಲಾಯರು ಹೇಳಿದ್ದಾರೆ. ನಾಡಿನ ಶಿಕ್ಷಣ ತಜ್ಞರಲ್ಲೊಬ್ಬರಾದ ಪ್ರೊ.ವಿ.ಪಿ.ನಿರಂಜನಾರಾಧ್ಯ ಅವರು ಮಕ್ಕಳ ಹಿತದೃಷ್ಟಿಯಿಂದ ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲಾಕಾಲೇಜುಗಳನ್ನು ಪುನರಾರಂಭಿಸುವಂತೆ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಇವರಿಬ್ಬರು ಮಾತ್ರವಲ್ಲ ಅನೇಕ ಪರಿಣಿತರ ಅಭಿಪ್ರಾಯ ಕೂಡ ಇದೇ ಆಗಿದೆ.

ಮಕ್ಕಳು ಶಾಲೆಗೆ ಹೋಗದೆ ಈಗಾಗಲೇ ಎಂಟು ತಿಂಗಳು ದಾಟಿತು. ಕ್ರಮೇಣ ಮಕ್ಕಳಲ್ಲಿ ವಿದ್ಯಾಭ್ಯಾಸದ ಆಸಕ್ತಿ ಕಡಿಮೆಯಾಗತೊಡಗಿದೆ. ಸದ್ಯ ಆನ್‌ಲೈನ್ ಶಿಕ್ಷಣ ಲಭ್ಯವಿದ್ದರೂ ಅದು ಎಲ್ಲ ಮಕ್ಕಳಿಗೂ ಸಿಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಹೀಗಾಗಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರಲ್ಲೂ ಆತಂಕ ಶುರುವಾಗಿದೆ. ಈ ಆತಂಕವನ್ನು ನಿವಾರಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಈ ಎಲ್ಲ ದೃಷ್ಟಿಕೋನದಿಂದಲೂ ಪರಾಮರ್ಶೆ ನಡೆಸಿ ಸರಕಾರ ಈಗಲೇ ಒಂದು ತೀರ್ಮಾನಕ್ಕೆ ಬರುವುದು ಅಗತ್ಯವಿದೆ. ಶಾಲೆ ಪುನರಾರಂಭಿಸುವ ಕುರಿತ ತೀರ್ಮಾನವನ್ನು ಡಿಸೆಂಬರ್ ಮೂರನೇ ವಾರದವರೆಗೆ ಮುಂದೂಡುವುದರಲ್ಲಿ ಅರ್ಥವಿಲ್ಲ.

ಶಾಲೆ ಅಂದರೆ ಬರೀ ಕಲಿಕೆ ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಬಡಮಕ್ಕಳ ಪಾಲಿಗೆ ಶಾಲೆ ಎಲ್ಲವೂ ಆಗಿದೆ. ಶಾಲೆಗಳಲ್ಲಿ ದೊರೆಯುವ ಮಧ್ಯಾಹ್ನದ ಬಿಸಿಯೂಟದಿಂದ ಮಕ್ಕಳು ಹಸಿವನ್ನು ಇಂಗಿಸಿಕೊಳ್ಳುತ್ತಾರೆ. ಮಾತ್ರವಲ್ಲ ಅದರಿಂದ ಅವರಿಗೆ ಪೌಷ್ಟಿಕಾಂಶವೂ ದೊರಕುತ್ತದೆ. ನಿರಂತರವಾಗಿ ಶಾಲೆಗಳು ಮುಚ್ಚಿದ ಪರಿಣಾಮವಾಗಿ ಮಕ್ಕಳು ಪೌಷ್ಟಿಕಾಹಾರದಿಂದ ವಂಚಿತರಾಗಿದ್ದಾರೆ.ಹಳ್ಳಿಗಾಡಿನಲ್ಲಂತೂ ಮನೆಗಿಂತ ಶಾಲೆಗಳೇ ಮಕ್ಕಳಿಗೆ ಸುರಕ್ಷಿತ ತಾಣಗಳಾಗಿವೆ.ಶಾಲೆಗಳು ಮುಚ್ಚಿದ ಪರಿಣಾಮವಾಗಿ ಬಾಲ್ಯ ವಿವಾಹಗಳು ಹೆಚ್ಚಾಗಿವೆ ಎಂದು ವರದಿಗಳು ತಿಳಿಸುತ್ತವೆ. ಆದ್ದರಿಂದ ಸರಕಾರ ಈ ಬಗ್ಗೆ ಇನ್ನೊಂದು ಆಯಾಮದಿಂದ ಯೋಚಿಸಿ ತೀರ್ಮಾನಿಸಬೇಕಾಗಿದೆ.

ಸರಕಾರ ಈಗಾಗಲೇ ಎಸೆಸೆಲ್ಸಿ, ಪಿಯುಸಿ, ಸಿಇಟಿ, ನೀಟ್ ಇತ್ಯಾದಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಕೊರೋನದಿಂದ ಆಸ್ಪತ್ರೆಗೆ ದಾಖಲಾದ ವರ, ಗುಣಮುಖರಾದವರ ಹಾಗೂ ಅಸು ನೀಗಿದವರ ವಿವರಗಳನ್ನು ಪೋಷಕರಿಗೆ ನೀಡಿ ಅವರ ಮನವೊಲಿಸುವುದು ಸರಕಾರದ ಅದರಲ್ಲೂ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ಹೊಣೆಗಾರಿಕೆಯಾಗಿದೆ. ಕೋವಿಡ್‌ಗಿಂತಲೂ ಬೇರೆ ಕಾಯಿಲೆಗಳಿಂದ ಮಕ್ಕಳ ಸಾವುಗಳು ಸಂಭವಿಸಿವೆ ಎಂದು ಅಧಿಕೃತ ವರದಿಗಳು ತಿಳಿಸುತ್ತವೆ. ಅಷ್ಟೇ ಅಲ್ಲದೆ ಕೋವಿಡ್ ನಿಯಂತ್ರಿಸುವಲ್ಲಿ ದೀರ್ಘಕಾಲೀನ ಲಾಕ್‌ಡೌನ್‌ನಿಂದ ಹೆಚ್ಚಿನ ಉಪಯೋಗವಾಗಿಲ್ಲ. ಈಗ ಅದರ ತೀವ್ರತೆಯೂ ಕಡಿಮೆಯಾಗಿದೆ. ಡಿಸೆಂಬರ್‌ನಲ್ಲಿ ಕೊರೋನದ ಎರಡನೇ ಅಲೆ ಬರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಒಂದು ವೇಳೆ ಬಂದರೂ ಅದನ್ನೆದುರಿಸಲು ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲಾಕಾಲೇಜುಗಳನ್ನು ಪುನರಾರಂಭ ಮಾಡುವುದು ಅಗತ್ಯವಾಗಿದೆ. ಸರಕಾರ ಈ ಬಗ್ಗೆ ಇನ್ನೊಮ್ಮೆ ಪರಿಣಿತರ ಸಭೆ ಕರೆದು ಸಮಾಲೋಚನೆ ಮಾಡಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನವನ್ನು ಕೈಗೊಳ್ಳುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News