ಒಕ್ಕಲಿಗರ ಅಭಿವೃದ್ಧಿ ನಿಗಮ‌ ಸ್ಥಾಪನೆಗೆ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘ ಒತ್ತಾಯ

Update: 2020-11-26 06:00 GMT

ಶಿವಮೊಗ್ಗ, ನ.26: ಕರ್ನಾಟಕ ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮ‌ ಸ್ಥಾಪನೆ ಮಾಡುವಂತೆ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘ ಸರಕಾರವನ್ನು ಒತ್ತಾಯಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕಡಿದಾಳ್ ಗೋಪಾಲ್, ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ‌ ಬಹಳ‌ ಹಿಂದುಳಿದಿದ್ದಾರೆ. ಶೇ.80 ರಷ್ಟು ಜನ‌ ಕೃಷಿಯನ್ನು ಅವಲಂಬಿಸಿ ಹಳ್ಳಿಗಳಲ್ಲಿ‌ ಜೀವನ‌ ಸಾಗಿಸುತ್ತಿದ್ದಾರೆ ಎಂದು‌ ಹೇಳಿದರು.

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡುವುದರಲ್ಲೂ ಅನ್ಯಾಯವಾಗಿದೆ. ಇತರ ಜಾತಿಯವರನ್ನು ಸೇರಿಸಿ ಶೇ.4 ರಷ್ಟು ಮೀಸಲಾತಿ‌ ನೀಡಲಾಗಿದೆ. ಒಕ್ಕಲುತನವನ್ನೇ ಮುಖ್ಯ ಉದ್ಯೋಗವನ್ನಾಗಿ‌ ಮಾಡಿಕೊಂಡು‌ ಸಂಕಷ್ಟದ  ಬದುಕನ್ನು‌ ಸಾಗಿಸುತ್ತಿರುವ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರ ಸಮುದಾಯದವರಿಗಾಗಿ  ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮ‌ ರಚನೆ ಮಾಡುವಂತೆ ಅವರು ಆಗ್ರಹಿಸಿದರು.

ಇತ್ತೀಚೆಗೆ ರಾಜ್ಯ ಸರಕಾರವು ಜಾತಿ‌ ಜನಾಂಗದವರ ಅಭಿವೃದ್ಧಿಗೆ ನಿಗಮಗಳನ್ನು ರಚಿಸಿ, ಸಾಕಷ್ಟು‌ಹಣ ಮೀಸಲಿಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.

ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮ‌ ಸ್ಥಾಪನೆ ಮಾಡಿ ಒಂದು ಸಾವಿರ‌ ಕೋಟಿ‌ ರೂ.ವನ್ನು‌ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಶೀಘ್ರದಲ್ಲೇ ಮುಖ್ಯಮಂತ್ರಿಯನ್ನು ಭೇಟಿ‌ ಮಾಡಿ ಮನವಿ‌ ಸಲ್ಲಿಸಲಿದ್ದೇವೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂದು ನಂಬಿದ್ದೇವೆ. ಇಲ್ಲವಾದಲ್ಲಿ ಒಕ್ಕಲಿಗ ಸಮುದಾಯ ತೀವ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಉಂಬ್ಳೆಬೈಲು‌ ಮೋಹನ್, ಪ್ರಮುಖರಾದ  ಶ್ರೀಕಾಂತ್, ವನಮಾಲಾ, ಎನ್.ಎ. ಮಾದೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News