ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ

Update: 2020-11-26 17:08 GMT

ಮಂಡ್ಯ, ನ.26: ಕೇಂದ್ರ ಮತ್ತು ವಿವಿಧ ರಾಜ್ಯಗಳ ಜನವಿರೋಧಿ, ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳನ್ನು ವಿರುದ್ಧ ಅಖಿಲ ಭಾರತ  ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲೂ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಕಾರ್ಮಿಕರು, ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಬಿಜೆಪಿ ಸರಕಾರ ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಅದಕ್ಕೆ ಸಂಬಂಧಪಟ್ಟ ಸಮುದಾಯದವರ ಜತೆ ಚರ್ಚಿಸಿ ಸಮಾಲೋಚಿಸಿ ಅವರಿಂದ ಬರುವ ಸಲಹೆ, ತಿದ್ದುಪಡಿ ಮತ್ತು ವಿಚಾರಗಳನ್ನು ಪರಿಗಣಿಸುವಂತಹ ಪ್ರಜಾತಾಂತ್ರಿಕ ರೂಢಿಯನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಕಿಡಿಕಾರಿದರು.

ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿಯ ಷರತ್ತುಗಳನ್ನು ವಿಧಿಸಲು ವಿನ್ಯಾಸಗೊಳಿಸಲಾಗಿದೆ. ರೈತ ವಿರೋಧಿಯಾದ ಮೂರು ಕೃಷಿ ಮಸೂದೆಗಳನ್ನು ಅಂಗೀಕರಿಸಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ದವಾಗಿ ಖಾತರಿಪಡಿಸದೆ, ಅಗತ್ಯ ಸರಕುಗಳ ಕಾಯ್ದೆಯನ್ನು ನಿಗ್ರಹಿಸಿದ್ದಾರೆ ಎಂದು ಅವರು ಆರೋಪಿಸಿದರು.

7 ಅಂಶಗಳ ಬೇಡಿಕೆಗಳು:
ಕಾರ್ಮಿಕ ವಿರೋಧಿಯಾಗಿ ಕೇಂದ್ರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಾಗೂ ರೈತ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಇದೇ ರೀತಿ ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಾಪಸ್ಸಾಗಬೇಕು.

ಶಿಕ್ಷಣ, ಆರೋಗ್ಯ, ರೈಲ್ವೆ, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್, ಮೈಷುಗರ್ ಮುಂತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ಆರ್ಡಿನೆನ್ಸ್ ಕಾರ್ಖಾನೆಗಳು, ಬಂದರುಗಳು ಮುಂತಾದ ಸರಕಾರಿ ಉತ್ಪಾದನಾ ಮತ್ತು ಸೇವಾ ಸಂಸ್ಥೆಗಳ ಸಾಂಸ್ಥೀಕರಣ ನಿಲ್ಲಿಸಬೇಕು.

ಆದಾರ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಗಳಿಗೆ ಮಾಸಿಕ 7,500 ರೂ. ನೆರವನ್ನು ಆರು ತಿಂಗಳ ಕಾಲ ನೀಡಬೇಕು. ಪ್ರತಿ ಸದಸ್ಯರಿಗೆ ಮಾಸಿಕ ತಲಾ ಹತ್ತು ಕೆ.ಜಿ. ಆಹಾರ ಪದಾರ್ಥ ವಿತರಿಸಬೇಕು.

ಉದ್ಯೋಗ ಕೇಳುವ ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಉದ್ಯೋಗ ನೀಡಬೇಕು. ನಗರ ಪ್ರದೇಶಗಳಿಗೆ ಉದ್ಯೋಗ ಖಾತರಿ ಯೋಜನೆ ವಿಸ್ತರಿಸಬೇಕು. ಕನಿಷ್ಠ ಕೂಲಿಯನ್ನು 600 ರೂ.ಗೆ ಹೆಚ್ಚಿಸಬೇಕು.

ಸರಕಾರಿ ಮತ್ತು ಸಾರ್ವಜನಿಕ ರಂಗದ ಘಟಕಗಳ ನೌಕರರ ಒತ್ತಾಯದ ಅಕಾಲಿಕ ನಿವೃತ್ತಿಯ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕು.
ಎಲ್ಲಾ ಕಾರ್ಮಿಕರಿಗೆ ಪಿಂಚಣಿ ಒಂದಗಿಸಬೇಕು. ಎನ್‍ಪಿಎಸ್ ಅನ್ನು ರದ್ದುಮಾಡಿ ಹಿಂದಿನ ಪಿಂಚಣಿ ಯೋಜನೆ ಪುನರ್ ಸ್ಥಾಪಿಸಬೇಕು. ಇಪಿಎಸ್-95ನ್ನು ಸುಧಾರಿಸಬೇಕು.

21 ಸಾವಿರ ರೂ. ಸಮಾನ ಕನಿಷ್ಠ ವೇತನ ನಿಗದಿಪಡಿಸಬೇಕು. ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಗೆ ಶಾಸನ ರೂಪಿಸಬೇಕು. ಗುತ್ತಿಗೆ ಕಾರ್ಮಿಕರ ಖಾಯಂಗೆ ಅಸ್ಸಾಂ, ತಮಿಳುನಾಡು ಮಾದರಿಯಲ್ಲಿ ಶಾಸನ ರೂಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿಗೆ ಶಾಸನ ರೂಪಿಸಿ ಜಾರಿಗೊಳಿಸಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಸ್ಕೀಮ ನೌಕರರ ಸಂರಕ್ಷಣೆ ಮಾಡಬೇಕು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಚಂದ್ರಶೇಖರ್, ರೈತಸಂಘದ ಸುನಂದಾ ಜಯರಾಂ, ಕೆ.ಬೋರಯ್ಯ, ಮುದ್ದೇಗೌಡ,  ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್, ಅಂಗನವಾಡಿ ನೌಕರರ ಸಂಘದ ಪ್ರಮೀಳಾಕುಮಾರಿ, ಪುಟ್ಟಮ್ಮ, ಲಕ್ಷ್ಮಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News