ಧರ್ಮಾಧಾರಿತ ರಾಜಕಾರಣದಿಂದ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ: ಎಚ್.ಎಂ.ರೇಣುಕಾರಾಧ್ಯ

Update: 2020-11-26 17:23 GMT

ಚಿಕ್ಕಮಗಳೂರು, ನ.26: ಕೇಂದ್ರದ ಬಿಜೆಪಿ ಸರಕಾರ ಕೊರೋನ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ರೈತ ಕಾರ್ಮಿಕರಿಗೆ ಮಾರಕವಾದ ಕಾನೂನುಗಳನ್ನು ಜಾರಿಗೊಳಿಸಿದ್ದು, ಇದು ಪ್ರಜಾತಂತ್ರ ವಿರೋಧಿ ಧೋರಣೆಯಾಗಿದೆ. ಬಿಜೆಪಿ ಸರಕಾರದ ಧರ್ಮಾಧಾರಿತ ರಾಜಕಾರಣ, ಆಡಳಿತದಿಂದಾಗಿ ದೇಶದ ಜನರನ್ನು ಸಂಕಷ್ಟದ ಬದುಕಿಗೆ ದೂಡಲಾಗಿದೆ. ದೇಶದ ಅರ್ಥವ್ಯವಸ್ಥೆ ಅತಂತ್ರಗೊಂಡಿದೆ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ ಟೀಕಿಸಿದ್ದಾರೆ.

ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ ಕಾರ್ಮಿಕ ಸಂಘಟನೆ ಜಂಟಿ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿರುವ ಪರಿಣಾಮ ದೇಶದ ರೈತ, ಕಾರ್ಮಿಕರ ಸಮುದಾಯ ಸೇರಿದಂತೆ ಎಲ್ಲ ವರ್ಗಗಳ ಜನತೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ನೋಟುಗಳ ಅಮಾನ್ಯೀಕರಣ, ಜಿಎಸ್‍ಟಿಯಂತಹ ತೆರಿಗೆ ನೀತಿಯಿಂದಾಗಿ ದೇಶದ ಜನರಿಗೆ ಯಾವುದೇ ಲಾಭವಾಗಿಲ್ಲ. ಕಪ್ಪು ಹಣ ಹೊರಬಂದಿಲ್ಲ, ಭ್ರಷ್ಟಾಚಾರವೂ ನಿಂತಿಲ್ಲ. ನಿರುದ್ಯೋಗ ಪ್ರಮಾಣವೂ ಕಡಿಮೆಯಾಗಿಲ್ಲ. ಬೆಲೆ ಏರಿಕೆ ನಿಯಂತ್ರಣವೂ ಸಾಧ್ಯವಾಗಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಬೇಕಾದ ಮೋದಿ ಸರಕಾರ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಾ ಜನರನ್ನು ಈ ಬಗ್ಗೆ ಧ್ವನಿ ಎತ್ತದಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ಕೊರೋನ ಸೋಂಕು ದೇಶದ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಕೊರೋನ ಸಂಕಷ್ಟಕ್ಕೆ ಸಿಲುಕಿರುವ ದೇಶದ ರೈತರು, ಕಾರ್ಮಿಕರು ಹಾಗೂ ಸಾಮಾನ್ಯ ಜನರಿಗೆ ಯಾವುದೇ ಪರಿಹಾರದ ಪ್ಯಾಕೇಜ್ ನೀಡದೇ ಬರೀ ಸುಳ್ಳುಗಳ ಆಶ್ವಾಸನೆಯನ್ನೇ ನೀಡಲಾಗುತ್ತಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳದೇ ಲಾಕ್‍ಡೌನ್ ಘೋಷಿಸಿದ ಕೇಂದ್ರ ಸರಕಾರ ಕೊರೋನ ಸಂದಿಗ್ಧ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ರೈತರು ಕಾರ್ಮಿಕರ ಪರವಾಗಿದ್ದ ಜನಪರ ಕಾನೂನು ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ರೈತರು ಕಾರ್ಮಿಕರ ಬದುಕನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎಂದ ಅವರು, ಕಾರ್ಮಿಕರ ಪರವಾಗಿದ್ದ ಸುಮಾರು 46 ಕಾನೂನುಗಳನ್ನು ತಿದ್ದುಪಡಿ ಮಾಡಿ ಸಂಹಿತೆಗಳನ್ನಾಗಿ ರೂಪಿಸಲಾಗಿದೆ. ಇದರೊಂದಿಗೆ ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆಗಳಿಗೂ ತಿದ್ದುಪಡಿ ಮಾಡಿ ಅವುಗಳನ್ನೂ ಕಾರ್ಪೊರೆಟ್ ಸಂಸ್ಥೆಗಳ ಪರವಾಗಿ ರೂಪಿಸಲಾಗಿದೆ. ಈ ತಿದ್ದುಪಡಿಯಿಂದಾಗಿ ಭವಿಷ್ಯದಲ್ಲಿ ಕಾರ್ಮಿಕರು, ರೈತರು ಬಂಡವಾಳಶಾಹಿಗಳ ಗುಲಾಮರಂತೆ ಬದುಕಬೇಕಾಗುತ್ತದೆ. ಇಂತಹ ಜೀವವಿರೋಧಿ ಕಾನೂನುಗಳ ವಿರುದ್ಧ ಜನರು ಧ್ವನಿ ಎತ್ತಬೇಕೆಂದು ಕರೆ ನೀಡಿದರು.

ಸಿಪಿಐ ಮುಖಂಡ ಬಿ.ಅಮ್ಜದ್ ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕರ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದರಿಂದ ಕಾರ್ಮಿಕರ ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಮತ್ತು ಔದ್ಯಮಿಕ ಭದ್ರತೆಗೆ ಸಂಚಕಾರವನ್ನುಂಟು ಮಾಡಲಿದೆ. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಸಂಘಗಳನ್ನು ರಚಿಸುವ, ಮುಷ್ಕರಗಳನ್ನು ನಡೆಸುವ ಹಕ್ಕುಗಳನ್ನು ಕಾರ್ಮಿಕ ಸಂಹಿತೆ ಕಿತ್ತುಕೊಳ್ಳಲಿವೆ. ಕಾರ್ಮಿಕ ಸಮೂಹವನ್ನು ನಿರಂತರವಾಗಿ ಶೋಷಣೆಗೊಳಪಡಿಸಲಿವೆ ಎಂದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಗುಣಶೇಖರ್ ಮಾತನಾಡಿ, ಕೇಂದ್ರದ ಮೋದಿ ಸರಕಾರಕ್ಕೆ ಕಾರ್ಮಿಕರು, ಬಡವರು, ರೈತರ ಮೇಲೆ ನಿಜವಾಗಿಯೂ ಕಾಳಜಿ ಇದ್ದಿದ್ದಲ್ಲಿ ಜನಪರ ಕಾಯ್ದೆಗಳಿಗೆ ಹಿಂಬಾಗಿಲ ಮೂಲಕ ತಿದ್ದುಪಡಿ ತರುತ್ತಿರಲಿಲ್ಲ. ಮೋದಿ ಸರಕಾರಕ್ಕೆ ದೇಶದ ಜನರ ಹಿತಕ್ಕಿಂತ ಬಂಡವಾಳಿಗರ ಹಿತ ಮುಖ್ಯವಾಗಿದೆ. ಈ ಕಾರಣಕ್ಕೆ ಕಾರ್ಮಿಕರು, ರೈತರ ಪರವಾಗಿದ್ದ ಕಾನೂನುಗಳನ್ನು ಬಂಡವಾಳಿಗರ ಪರ ಮಾಡಲಾಗಿದೆ. ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಾದ ರೈಲ್ವೆ, ಬಿಎಸ್ಸೆನೆಲ್, ಬ್ಯಾಂಕ್, ಎಲ್‍ಐಸಿಯಂತಹ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಇಂತಹ ಸರಕಾರದ ವಿರುದ್ಧ ಜನರು ಧ್ವನಿ ಎತ್ತದಿದ್ದಲ್ಲಿ ಇಡೀ ದೇಶ ಖಾಸಗಿ ಕಂಪೆನಿಗಳ ಪಾಲಾಗಲಿದೆ. ಕಾರ್ಮಿಕರು, ರೈತರ ಬದುಕು ಬೀದಿಗೆ ಬರಲಿದೆ ಎಂದು ಎಚ್ಚರಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯ್‍ಕುಮಾರ್ ಮತ್ತಿತರರು ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ಸಿಪಿಐ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ರಾಧಾ ಸುಂದರೇಶ್, ಓಬಯ್ಯ, ಅಬ್ದುಲ್ ಜಬ್ಬಾರ್, ಇಂದುಮತಿ, ಬ್ಯಾಂಕ್ ನೌಕರರ ಸಂಘದ ಬಸವರಾಜ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು. ಸಭೆ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. 

ಬೇಡಿಕೆಗಳು
ಕೇಂದ್ರ ಸರಕಾರ ರೂಪಿಸಿರುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವುದು, ಎಪಿಎಂಸಿ, ಭೂಸುಧಾರಣೆ ಸೇರಿದಂತೆ ಎಲ್ಲ ಕೃಷಿ ಮಸೂದೆಗಳನ್ನು ಹಿಂಪಡೆಯುವುದು, ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ನಿಲ್ಲಿಸುವುದು, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಖಾಯಂಗೊಳಿಸಿ 18 ಸಾವಿರ ಕನಿಷ್ಠ ವೇತನ ನಿಗದಿ ಮಾಡುವುದು, ಗ್ರಾಪಂ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳಲ್ಲಿರುವ ದಿನಗೂಲಿ ನೌಕರರನ್ನು ಖಾಯಂ ಮಾಡುವುದು. ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಎಲ್ಲ ನೌಕರರು, ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿ ಮಾಡುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವಹಿಸಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ, ವಿದ್ಯುತ್ ದರ ಏರಿಕೆ ಕೈಬಿಡುವುದು, ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಕೇಂದ್ರ ಸರಕಾರದ ಅಧೀನಕ್ಕೆ ಒಳಪಡಿಸುವುದನ್ನು ಕೈಬಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಇದೇ ವೇಳೆ ಮುಖಂಡರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News