ದಿಲ್ಲಿ ಗಡಿಯಲ್ಲಿ ರೈತರನ್ನು ತಡೆಯಲು ಅಶ್ರುವಾಯ, ಲಾಠಿ ಪ್ರಯೋಗಿಸಿದ ಪೊಲೀಸರು

Update: 2020-11-27 06:25 GMT

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿ ಚಲೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ನೂರಾರು ರೈತರ ಮೇಲೆ ಇಂದು ಮುಂಜಾನೆ  ಹರ್ಯಾಣ-ದಿಲ್ಲಿ ಗಡಿಯಲ್ಲಿ  ಪೊಲೀಸರು ಅಶ್ರುವಾಯು ಸಿಡಿಸಿದ್ದು, ರೈತರನ್ನು ತಡೆಯುವ ಉದ್ದೇಶದಿಂದ  ಲಾಠಿ ಚಾಜ್ ನಡೆಸಿದ್ದಾರೆ.

ಟ್ರ್ಯಾಕ್ಟರುಗಳಲ್ಲಿ ಹಾಗೂ ನಡೆದುಕೊಂಡು ಸಾಗುತ್ತಿರುವ ನೂರಾರು ರೈತರು ತಮ್ಮೊಂದಿಗೆ ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ತಂದಿದ್ದು ರಾಜಧಾನಿಯನ್ನು ವಿವಿಧ ಕಡೆಗಳಿಂದ ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ರೈತರನ್ನು ತಡೆಯಲು ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಗೂ ಬೇಲಿಗಳನ್ನು ಅಳವಡಿಸಿದ್ದಾರೆ. ಅತ್ತ ಹರ್ಯಾಣ ಪೊಲೀಸರು ವಿವಿಧ ಕಡೆಗಳಲ್ಲಿ ಗುಂಡಿಗಳನ್ನು ತೋಡಿಯೂ ರೈತರನ್ನು ತಡೆಯಲು ಯತ್ನಿಸಿದ್ದಾರೆ.

ರೈತರನ್ನು ತಡೆಯುತ್ತಿರುವ ಪೊಲೀಸರು ಕೋವಿಡ್ 19 ಕಾರಣಗಳನ್ನು ಮುಂದಿಟ್ಟಿದ್ದಾರೆ. ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದುಕೊಂಡು ಇರಿಸಲು ರಾಜಧಾನಿಯ ಒಂಬತ್ತು ಮೈದಾನಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಪರಿವರ್ತಿಸಲೂ ಪೊಲೀಸರು ಸಂಬಂಧಿತ ಪ್ರಾಧಿಕಾರಗಳಿಗೆ ಮನವಿ ಮಾಡಿದ್ದಾರೆ.

ಪಂಜಾಬ್ ಹೊರತಾಗಿ ಹರ್ಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಕೇರಳ ರಾಜ್ಯಗಳ ರೈತರೂ ದಿಲ್ಲಿಗೆ ಆಗಮಿಸಿ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸುವ ಉದ್ದೇಶ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News