ಕಂಗನಾ ರಾಣವತ್ ಬಂಗ್ಲೆ ನೆಲಸಮ ಆದೇಶ ರದ್ದುಪಡಿಸಿದ ಬಾಂಬೆ ಹೈಕೋರ್ಟ್ ಹೇಳಿದ್ದೇನು?

Update: 2020-11-27 09:08 GMT

ಮುಂಬೈ: ಮುಂಬೈನಲ್ಲಿರುವ ನಟಿ ಕಂಗನಾ ರಣಾವತ್‌ಗೆ ಸೇರಿರುವ ಕಚೇರಿಯ ಒಂದು ಭಾಗವನ್ನು ಮುಂಬೈ ಮಹಾನಗರ ಪಾಲಿಕೆ ನೆಲಸಮಗೊಳಿಸಿರುವುದು ದುರುದ್ದೇಶದಿಂದ ಕೂಡಿದೆ ಎಂದ ಬಾಂಬೆ ಹೈಕೋರ್ಟ್ ನೆಲಸಮ ಕುರಿತು ಬಿಎಂಸಿ ನೀಡಿದ ಆದೇಶವನ್ನು ರದ್ದುಪಡಿಸಿತು. ಬಿಎಂಸಿಯ ದುರುದ್ದೇಶಪೂರಿತ ಕ್ರಮದಿಂದಾಗಿ ಕಂಗನಾಗೆ ಪರಿಹಾರ ಪಡೆಯುವ ಅರ್ಹತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

  ಬೃಹನ್ಮುಂಬಯಿ ಮಹಾನಗರ ಪಾಲಿಕೆ ಅಥವಾ ಬಿಎಂಸಿ ಸೆಪ್ಟಂಬರ್ 19 ರಂದು ರಣಾವತ್ ಬಂಗ್ಲೆಯಲ್ಲಿದ್ದ ಕಚೇರಿಯ ಭಾಗವನ್ನು ಧ್ವಂಸಗೊಳಿಸಿತ್ತು. ಆಡಳಿತರೂಢ ಶಿವಸೇನೆ ಹಾಗೂ ಮಹಾರಾಷ್ಟ್ರ ಸರಕಾರದ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ ಎಂದು ನಟಿ ಆರೋಪಿಸಿದ್ದರು.

 ಅದೇ ಪಕ್ಷ ಬಿಎಂಸಿಯಲ್ಲೂ ಆಡಳಿತ ನಡೆಸುತ್ತಿದೆ ಎಂದು ತನ್ನ ಅರ್ಜಿಯಲ್ಲಿ ಶಿವಸೇನೆಯ ಹೆಸರು ಹೇಳದೆ ಕಂಗನಾ ಬರೆದಿದ್ದರು.

 ಎಂಸಿಜಿಎಂ(ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್)ನಾಗರಿಕರ ಹಕ್ಕುಗಳ ವಿರುದ್ಧ ತಪ್ಪು ನೆಲೆಯಲ್ಲಿ ಕ್ರಮ ಕೈಗೊಂಡಿದೆ. ಇದು ಕಾನೂನಿನ ದುರುಪಯೋಗವಲ್ಲದೆ ಬೇರೆನೂ ಅಲ್ಲ. ಯಾವುದೇ ನಾಗರಿಕನ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ಬಳಸುವುದನ್ನು ಒಪ್ಪಲಾಗದು ಎಂದು ಜಸ್ಟಿಸ್ ಎಸ್‌ಜೆ ಕಥವಾಲ್ಲಾ ಹಾಗೂ ಆರ್.ಐ. ಚಾಗ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

  ಕಟ್ಟಡ ಧ್ವಂಸ ಕಾನೂನು ಬಾಹಿರವಾಗಿದ್ದು,ಕಂಗನಾ ಮುನ್ಸಿಪಲ್ ಏಜೆನ್ಸಿಯಿಂದ 2 ಕೋಟಿ ರೂ. ಪರಿಹಾರ ಕೋರಿದ್ದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನ್ಯಾಯಾಲಯವು ಒಬ್ಬ ವೌಲ್ಯಮಾಪಕನನ್ನು ನೇಮಕ ಮಾಡುತ್ತಿದ್ದು ಇವರು ಬಿಎಂಸಿ ನಡೆಸಿರುವ ನೆಲಸಮ ಕಾರ್ಯದಿಂದ ಕಂಗನಾಗೆ ಆಗಿರುವ  ವಿತ್ತೀಯ ಹಾನಿಯ ಕುರಿತು ಆಲಿಸಲಿದ್ದಾರೆ. ವೌಲ್ಯಮಾಪಕರು ಮಾರ್ಚ್ 2021ರೊಳಗೆ ಪರಿಹಾರದ ಬಗ್ಗೆ ಸೂಕ್ತ ಆದೇಶವನ್ನು ರವಾನಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News