ಮಾಡೆಲಿಂಗ್ ತೊರೆಯಲು ನಿರ್ಧರಿಸಿದ ‘ಹಿಜಾಬ್ ಧರಿಸಿದ್ದ ಮೊದಲ ರೂಪದರ್ಶಿ’ ಹಲೀಮಾ ಏಡೆನ್

Update: 2020-11-27 08:12 GMT

ನ್ಯೂಯಾರ್ಕ್: ಅಮೆರಿಕನ್ ರೂಪದರ್ಶಿ  ಹಲೀಮಾ ಏಡೆನ್ (23) ತಾನು ಮಾಡೆಲಿಂಗ್ ಜಗತ್ತನ್ನು ತೊರೆಯುತ್ತಿರುವುದಾಗಿ ಘೋಷಿಸಿದ್ದಾರೆ. ಈ  ಕ್ಷೇತ್ರವು ತನ್ನ ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಯಾಗಿದೆ ಎಂದೂ ಅವರು  ಹೇಳಿಕೊಂಡಿದ್ದಾರೆ.

ಪ್ರತಿಷ್ಠಿತ ಮ್ಯಾಗಝಿನ್ ಗಳ ಮುಖಪುಟದಲ್ಲೂ ಕಾಣಿಸಿಕೊಂಡಿರುವ ಹಲೀಮಾ ಅವರು  ತಮ್ಮ ನಿರ್ಧಾರದ ಕುರಿತಂತೆ ಇನ್‍ ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಬರೆದುಕೊಂಡಿದ್ದಾರೆ.

ಒಬ್ಬ ಮುಸ್ಲಿಂ ಮಹಿಳೆಯಾಗಿ ತಾನು ಅನುಸರಿಸಬೇಕಾದ ಮೌಲ್ಯಗಳ ಕುರಿತಂತೆ ಚಿಂತಿಸಲು ಕೋವಿಡ್ ಸಾಂಕ್ರಾಮಿಕವು ಸಮಯ ಒದಗಿಸಿದೆ ಎಂದು ಹಿಜಾಬ್ ಅಥವಾ ಶಿರವಸ್ತ್ರ ಧರಿಸಿದ ಮೊದಲ ಮಾಡೆಲ್ ಎಂದು ತಿಳಿಯಲ್ಪಟ್ಟಿರುವ ಹಲೀಮಾ ತಮ್ಮ ಇನ್‍ ಸ್ಟಾಗ್ರಾಂ ಪೋಸ್ಟ್‍ ನಲ್ಲಿ  ಹೇಳಿಕೊಂಡಿದ್ದಾರೆ.

ತಮ್ಮ ವೃತ್ತಿಯಿಂದಾಗಿ ಹಲವಾರು ಬಾರಿ ನಮಾಝ್ ನಿರ್ವಹಿಸುವುದು ತಪ್ಪಿತ್ತು ಹಾಗೂ ಮಾಡೆಲಿಂಗ್ ಮಾಡುವಾಗ ಹಿಜಾಬ್ ಬದಲು ತಲೆಯನ್ನು ಮುಚ್ಚಲು ಬೇರೆ ಶೈಲಿಯಲ್ಲಿ  ಬಟ್ಟೆ ಧರಿಸಿರುವ ಕುರಿತು ಕೂಡ ಅವರು  ತಮ್ಮ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದ್ದ ಮಾಡೆಲಿಂಗ್  ಕೆಲಸಗಳನ್ನು ಒಪ್ಪಿಕೊಂಡಿದ್ದರ ಕುರಿತು  ಬರೆದಿರುವ ಅವರು, “ನಿಜವಾಗಿಯೂ ಯಾವುದನ್ನು ಬಲಿಗೊಡುತ್ತಿದ್ದೇನೆ ಎಂದು ಯೋಚಿಸದೆ ಅವಕಾಶದ ಕುರಿತಾಗಿಯೇ ಹೆಚ್ಚು ಚಿಂತಿಸಿದ್ದಕ್ಕೆ ನಾನು ನನ್ನನ್ನೇ ದೂರುತ್ತೇನೆ'' ಎಂದಿದ್ದಾರೆ.

ಹಿಜಾಬ್ ಧರಿಸುವುದು ಎಷ್ಟು  ಮಹತ್ವದ್ದು ಎಂಬುದರ ಕುರಿತು ಅರಿವು ಹೊಂದಿರುವ `ಮುಸ್ಲೀಂ ಮಹಿಳಾ ಸ್ಟೈಲಿಸ್ಟ್‍ ಗಳ' ಕೊರತೆಯಿರುವ ಈ ಕ್ಷೇತ್ರದಲ್ಲಿ ಸಮಸ್ಯೆಗಳು ಬಂದವು ಎಂದು ಅವರು ಹೇಳಿದ್ದಾರೆ.

ಆದರೆ ತಮಗೆ ಆನ್ ಲೈನ್ ‍ನಲ್ಲಿ ರೂಪದರ್ಶಿ ಸೋದರಿಯರಾದ ಬೆಲ್ಲಾ ಮತ್ತು ಗಿಗಿ ಹದೀದ್ ಹಾಗೂ ಖ್ಯಾತ ಗಾಯಕಿ ರಿಹಾನ್ನ ಅವರಿಂದ ಬೆಂಬಲ ದೊರಕಿತ್ತು ಎಂದು ಅವರು ಬರೆದಿದ್ದಾರೆ.

ಕೆನ್ಯಾದ ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿದ್ದ ಹಲೀಮಾ  ಆರು ವರ್ಷದವರಿರುವಾಗ ಅಮೆರಿಕಾಗೆ ವಲಸೆ ಬಂದಿದ್ದರು. ಮಿಸ್ ಮಿನ್ನೆಸೊಟಾ ಯುಎಸ್‍ಎ ಸೌಂದರ್ಯ ಸ್ಪರ್ಧೆಯಲ್ಲಿ  18 ವರ್ಷದವರಿರುವಾಗ ಹಿಜಾಬ್ ಧರಿಸಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News