ಅನ್ನವಿಕ್ಕಿದವರ ಮನೆಗೆ ಕನ್ನ

Update: 2020-11-28 05:26 GMT

ರೈತರ ಗದ್ದೆಗೆ ಬಳಸ ಬೇಕಾದ ನೀರನ್ನು ಸರಕಾರ ರೈತರ ವಿರುದ್ಧ ಜಲಫಿರಂಗಿಗೆ ಬಳಸಿದೆ. ತನ್ನ ಅರೆಬರೆ ಸೌಲಭ್ಯಗಳನ್ನು ಬಳಸಿ ಈ ದೇಶಕ್ಕೆ ಉಣಿಸುತ್ತಿರುವ ರೈತರ ವಿರುದ್ಧವೇ ಅಶ್ರುವಾಯು, ಲಾಠಿಗಳನ್ನು ಬಳಸಿದೆ. ಒಂದೆಡೆ ರೈತ ವಿರೋಧಿ ಕೃಷಿ ವಿಧೇಯಕವನ್ನು ಜಾರಿಗೊಳಿಸಿ ಸಣ್ಣ ರೈತರನ್ನು ನಿವಾರಿಸುವ ಪ್ರಯತ್ನದಲ್ಲಿರುವ ಸರಕಾರ, ಮಗದೊಂದೆಡೆ ಅದರ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಸಾರಸಗಟಾಗಿ ಪೊಲೀಸ್ ಬಲದಿಂದ ಬಗ್ಗು ಬಡಿಯಲು ಮುಂದಾಗಿದೆ. ಈ ಬಾರಿಯ ಸಂವಿಧಾನ ದಿನಾಚರಣೆಯನ್ನು ರೈತರ ಮೇಲೆ ದೌರ್ಜನ್ಯ ಎಸಗುವ ಮೂಲಕ ಆಚರಿಸಿದ್ದು ಪ್ರಜಾಸತ್ತೆಯ ಅತಿ ದೊಡ್ಡ ವಿಡಂಬನೆಯಾಗಿದೆ. ಇನ್ನೇನು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಉಗ್ರವಾದಿಗಳು, ನಕ್ಸಲರು ಎಂದು ಜೈಲಿಗೆ ತಳ್ಳುವುದಷ್ಟೇ ಬಾಕಿ ಉಳಿದಿದೆ.

ಲೋಕಸಭೆಯಲ್ಲಿ ಅಂಗೀಕರಿಸಲಾಗಿರುವ ಕೃಷಿ ವಿಧೇಯಕದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರ ದೌರ್ಜನ್ಯವನ್ನು ಅನ್ನ ತಿಂದು ಬದುಕುವವರೆಲ್ಲ ಖಂಡಿಸಬೇಕಾಗಿದೆ. ಸಂಸತ್‌ನಲ್ಲಿ ಸಮರ್ಪಕವಾದ ಚರ್ಚೆ ನಡೆಸದೆಯೇ ಈ ವಿಧೇಯಕವನ್ನು ಅಂಗೀಕರಿಸಲಾಗಿರುವುದನ್ನು ಖಂಡಿಸಿ ರೈತರು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದರು. ಈ ವಿಧೇಯಕಗಳು ದೇಶದ ಕೃಷಿಕ್ಷೇತ್ರವನ್ನು ಕಾರ್ಪೊರೇಟೀಕರಣಗೊಳಿಸುವುದಕ್ಕೆ ದಾರಿ ಮಾಡಿಕೊಡಲಿವೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಕೃಪಾಶ್ರಯಕ್ಕೆ ತಮ್ಮನ್ನು ಒಪ್ಪಿಸಲಿವೆ ಎಂಬ ಆತಂಕ ರೈತರನ್ನು ಕಾಡತೊಡಗಿದೆ. ಕೇಂದ್ರ ಸರಕಾರವು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸದೆ ಇದ್ದಲ್ಲಿ ತಾವು ಕಾರ್ಪೊರೇಟ್ ಶಕ್ತಿಗಳ ಗುಲಾಮರಾಗುವುದು ಖಚಿತವೆಂಬ ಭೀತಿಯೂ ನಮ್ಮ ದೇಶದ ಅನ್ನದಾತರನ್ನು ಕಾಡುತ್ತಿದೆ. ನಿರ್ದಿಷ್ಟವಾಗಿ ಪಂಜಾಬ್ ಹಾಗೂ ಹರ್ಯಾಣ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕೃಷಿ ವಿಧೇಯಕದ ವಿರುದ್ಧ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.

ಕೃಷಿ ವಿಧೇಯಕದ ವಿರುದ್ಧ ದಿಲ್ಲಿಗೆ ಜಾಥಾ ನಡೆಸಿದ ಪಂಜಾಬ್‌ನ ರೈತರನ್ನು ಬರ್ಬರವಾಗಿ ಬಲಪ್ರಯೋಗಿಸಿ ಹರ್ಯಾಣಗಡಿಯಲ್ಲಿ ತಡೆದು ನಿಲ್ಲಿಸಲಾಯಿತು. ಆದರೂ ಎದೆಗುಂದದೆ ರ್ಯಾಲಿಯನ್ನು ಮುಂದುವರಿಸಿದ ಅವರನ್ನು ದಿಲ್ಲಿ ಗಡಿಯಲ್ಲಿ ಮುಂದೆ ಸಾಗದಂತೆ ಬಲವಂತದಿಂದ ನಿಲ್ಲಿಸಲಾಯಿತು. ಆದರೆ ಎಲ್ಲ ಅಡೆತಡೆಗಳನ್ನು ಮೀರಿ ರೈತರು ಸಾಗುತ್ತಿದ್ದಾರೆ. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಭಾರತ ಸರಕಾರ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳು ಅನುಸರಿಸುತ್ತಿರುವ ಮಾರ್ಗದ ಬಗ್ಗೆ ಹಲವಾರು ಪ್ರಶ್ನೆಗಳು ಮೂಡುತ್ತವೆ. ಒಂದು ವೇಳೆ ವಿಧೇಯಕದ ಬಗ್ಗೆ ರೈತರ ಆಕ್ಷೇಪಗಳಿದ್ದಲ್ಲಿ , ಅದರ ಬಗ್ಗೆ ಗಂಭೀರವಾದ ರ್ಚೆಗಳು ನಡೆಯಬೇಕಾದ ಅಗತ್ಯವಿದೆ ಹಾಗೂ ರೈತರ ಸಂಘಟನೆಗಳನ್ನು ವಿಭಜಿಸಲು ಈ ವಿಧೇಯಕವನ್ನು ಅಸ್ತ್ರವಾಗಿ ಬಳಸುವ ಹೇಯ ಪ್ರಯತ್ನವನ್ನು ಆಳುವ ಶಕ್ತಿಗಳು ಮಾಡಕೂಡದು. ಈಗೀಗ ರೈತರ ಸಂಘಟನೆಗಳು ಕೂಡಾ ರಾಜಕೀಕರಣಗೊಂಡಿರುವುದನ್ನು ಯಾರೂ ಅಲ್ಲಗಳೆಯಲಾರರು. ಪ್ರತಿಯೊಂದು ಪಕ್ಷವೂ ಈಗ ತನ್ನದೇ ಆದ ರೈತರ ಘಟಕವನ್ನು ಹೊಂದಿದೆ. ಆದಾಗ್ಯೂ, ತಮ್ಮ ಬಗ್ಗೆ ಸರಕಾರದ ಪಕ್ಷಪಾತದ ನಿಲುವಿನಿಂದ ದೇಶಾದ್ಯಂತ ರೈತ ಸಮುದಾಯದಲ್ಲಿ ವ್ಯಾಪಕವಾದ ಅಶಾಂತಿ ಹಾಗೂ ಅಸಮಾಧಾನ ಹೊಗೆಯಾಡುತ್ತಿರುವುದಂತೂ ವಾಸ್ತವ.

ಭಾರತವು ಗುರುವಾರವನ್ನು ಸಂವಿಧಾನ ದಿನವಾಗಿ ಆಚರಿಸಿದೆ. ಅಂದು ಸಂವಿಧಾನದ ಮುನ್ನುಡಿಯನ್ನು ಓದಿಸುವ ಮೂಲಕ ಪ್ರಜೆಗಳಲ್ಲಿ ಸಂವಿಧಾನದ ತತ್ವಗಳ ಬಗ್ಗೆ ಜಾಗೃತಿ ಮೂಡಿಸುವ ಚಿಂತನೆಯನ್ನು ನಮ್ಮ ಸರಕಾರ ಕೈಗೊಂಡಿತ್ತು. ರೈತರು ದಿಲ್ಲಿಗೆ ಬಂದು ಜಂತರ್‌ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ಸಂವಿಧಾನ ಕೊಟ್ಟಿರುವ ಹಕ್ಕು. ಹೀಗಿರುವಾಗ ಆ ಪ್ರತಿಭಟನೆಗೆ ಸರಕಾರವು ಭಯಪಡಲು ಕಾರಣವಾದರೂ ಏನಿದೆ?. ರಾಜಕೀಯ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಒಂದು ಭಾಗವಾಗಿದೆ. ಒಂದು ವೇಳೆ ತಮಗೆ ನ್ಯಾಯ ದೊರೆಯಲು ಇರುವ ಎಲ್ಲಾ ದಾರಿಗಳು ಮುಚ್ಚಿಹೋದಲ್ಲಿ ತಮ್ಮ ದೂರುಗಳು ಹಾಗೂ ಪ್ರತಿಭಟನೆಗಳನ್ನು ವ್ಯಕ್ತಪಡಿಸಲು ಜನರು ಎಲ್ಲಿಗೆ ತಾನೇ ಹೋಗಬೇಕು?. ಸರಕಾರವು ಈ ಪ್ರತಿಭಟನೆಗಳನ್ನು ಅಪರಾಧೀಕರಣಗೊಳಿಸಲು ಹೊರಟಲ್ಲಿ ಜನರು ಪ್ರಜಾಸತ್ತೆಯ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾ, ಸಂವಿಧಾನ ವಿರೋಧಿ ದಾರಿಗಳ ಕಡೆಗೆ ಹೊರಳುತ್ತಾರೆ. ಕೃಷಿ ವಿಧೇಯಕವನ್ನು ತಿದ್ದುಪಡಿಗೊಳಿಸುವ ಇಲ್ಲವೇ ವಾಪಸ್ ಪಡೆಯುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರವೇ ಇದೆಯೆಂದು ರೈತರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿಯೇ ಅವರು ಸರಕಾರದ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಅವರನ್ನು ಕರೆಸಿ, ಅವರೊಂದಿಗೆ ಮಾತುಕತೆ ನಡೆಸುವುದು ಸರಕಾರದ ಕರ್ತವ್ಯವಾಗಿದೆ.

ಭಾರತದ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಹಾಗೂ ಬಡತನವನ್ನು ನಿವಾರಣೆ ಗೊಳಿಸಲು ಕೃಷಿ ಕ್ಷೇತ್ರದ ಕಾರ್ಪೋರೇಟೀಕರಣವು ಪರ್ಯಾಯ ಮಾರ್ಗವಲ್ಲವೆಂಬುದನ್ನು ಅಧಿಕಾರದಲ್ಲಿರುವವರು ಅರಿತುಕೊಳ್ಳಬೇಕು. ಕಾರ್ಪೊರೇಟೀಕರಣವು ರೈತ, ಕಾರ್ಮಿಕ ಮತ್ತಿತರ ದುಡಿಯುವ ವರ್ಗಗಳಿಗೆ ವಿನಾಶಕಾರಿಯಾದುದಾಗಿದೆ ಮತ್ತು ಕೃಷಿ ಕಾರ್ಪೊರೇಟೀಕರಣದಿಂದ ನಾವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗದು. ಎಲ್ಲಕ್ಕಿಂತಲೂ ಮುಖ್ಯವಾದುದೆಂದರೆ ಸರಕಾರವು ನಮ್ಮ ಕೃಷಿ ಕ್ಷೇತ್ರವನ್ನು ಪ್ರಜಾತಾಂತ್ರೀಕರಣಗೊಳಿಸಬೇಕು ಹಾಗೂ ಭೂರಹಿತರಿಗೆ ಜಮೀನನ್ನು ಹಂಚಲು ಉತ್ತೇಜನ ನೀಡಬೇಕು. ಸಣ್ಣ ರೈತರು ಕೃಷಿಯಲ್ಲಿ ತೊಡಗಿಕೊಳ್ಳುವುದು ಬಡತನ ವಿರೋಧಿ ಕಾರ್ಯಕ್ರಮದ ಬೆನ್ನೆಲುಬು ಮಾತ್ರವಲ್ಲ, ಅದು ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಪ್ರಜಾಸತ್ತಾತ್ಮಕಗೊಳಿಸಲಿದೆ ಹಾಗೂ ಆಹಾರದಲ್ಲಿ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡಲಿದೆ.

ದುರದೃಷ್ಟವಶಾತ್ ಭಾರತದಲ್ಲಿ ರೈತರ ಸಮಸ್ಯೆಗಳು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಪಟ್ಟ ವಿಷಯಗಳಿಗಷ್ಟೇ ಸೀಮಿತಗೊಂಡಿವೆಯೇ ಹೊರತು ಅದರಾಚೆಗೆ ಚಿಂತಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ರೈತರ ಒಕ್ಕೂಟವು ಕೂಡಾ ಕೃಷಿ ಕಾರ್ಮಿಕರು ಹಾಗೂ ಸಣ್ಣ ಹಿಡುವಳಿದಾರರ ಬಗ್ಗೆ ಯೋಚಿಸುವ ತಂಟೆಗೆ ಹೋಗುತ್ತಿಲ್ಲ. ಪ್ರಭಾವಶಾಲಿ ರೈತ ಸಂಘಟನೆಗಳು ಕೃಷಿ ಕ್ಷೇತ್ರದ ವಿಷಯಗಳ ಬಗ್ಗೆ ಏಕತೆಯನ್ನು ಪ್ರದರ್ಶಿಸುತ್ತಿವೆಯಾದರೂ ಚುನಾವಣೆಗಳ ಸಂದರ್ಭದಲ್ಲಿ ಅವು ಜಾತಿ ರಾಜಕಾರಣದಲ್ಲಿ ಬಂದಿಗಳಾಗಿಬಿಡುತ್ತವೆ ಹಾಗೂ ಭೂರಹಿತ ದಲಿತರು ಮತ್ತಿತರ ದುರ್ಬಲ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡನಾರ್ಹ.

ರೈತರೊಂದಿಗೆ ಸಂಧಾನಕ್ಕೆ ಬರುವಂತೆ ಸರಕಾರವನ್ನು ಬಲವಾಗಿ ಆಗ್ರಹಿಸಬೇಕಾಗಿದೆ. ಇತ್ತ ರೈತರು ಮಾತ್ರವಲ್ಲದೆ ಕೃಷಿ ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ರೈತ ಸಂಘಟನೆಗಳು ಗಮನಹರಿಸಬೇಕಾಗಿದೆ. ಕುಟುಂಬ ಕೃಷಿಯನ್ನು ಸರಕಾರವು ಉತ್ತೇಜಿಸಬೇಕಾಗಿದೆ ಹಾಗೂ ಇದಕ್ಕಾಗಿ ಅದು ಕೃಷಿ ಭೂಮಿಯ ಮರುಹಂಚಿಕೆಗೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಭೂ ಸುಧಾರಣೆಗಳು ಸಾಮಾಜಿಕ ಸಮಾನತೆಯನ್ನು ತರಬಲ್ಲವು ಹಾಗೂ ಸಾಮಾಜಿಕ ಪ್ರಜಾಪ್ರಭುತ್ವವನ್ನು ಪ್ರಜಾಸತ್ತಾತ್ಮಕಗೊಳಿಸಬಲ್ಲವು ಎಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು 1949ರ ನವೆಂಬರ್ 26ರಂದು ಸಂವಿಧಾನ ರಚನಾ ಅಸೆಂಬ್ಲಿಯಲ್ಲಿ ಸಂವಿಧಾನದ ಮಂಡಿಸಿದ ಸಂದರ್ಭದಲ್ಲಿ ತಿಳಿಸಿದ್ದರು. ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಪ್ರಜಾಸತ್ತಾತ್ಮಕಗೊಳಿಸಲು ನಮ್ಮನ್ನು ನಾವೇ ಸಮರ್ಪಿಸಿಕೊಳ್ಳಬೇಕಿದೆ. ಅದಕ್ಕೆ ಭೂಸುಧಾರಣೆಯೇ ಪ್ರಮುಖ ಅಸ್ತ್ರವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲಿಸುವ ಅತ್ಯಂತ ಅರ್ಥಪೂರ್ಣವಾದ ಶ್ರದ್ಧಾಂಜಲಿ ಇದಾಗಿದೆ. ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ವಿಧಾನವೂ ಇದೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News