ಆದಿತ್ಯನಾಥ್‍ ಗೆ ‘ಬೆದರಿಕೆಯೊಡ್ಡಿದ' ಆರೋಪ: 15 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

Update: 2020-11-28 07:07 GMT

ಲಕ್ನೋ:  ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ‘ಸ್ಫೋಟಿಸುವುದಾಗಿ' ಬೆದರಿಕೆಯೊಡ್ಡಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಆಗ್ರಾದ 15 ವರ್ಷದ  ಬಾಲಕನೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ಪ್ರಕಾರ ಬಾಲಕ ಈ ಬೆದರಿಕೆಯನ್ನು ವಾಟ್ಸ್ಯಾಪ್ ಮೂಲಕ ರಾಜ್ಯದ 112 ಸಹಾಯವಾಣಿ ಸಂಖ್ಯೆಗೆ ಕಳುಹಿಸಿದ್ದಾನೆ. ಈ ಸಹಾಯವಾಣಿಯಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಅಂಜುಲ್ ಕುಮಾರ್ ಎಂಬವರು ಲಕ್ನೋದ ಸುಶಾಂತ್ ಗೋಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ  ಕ್ರಿಮಿನಲ್ ಬೆದರಿಕೆಯೊಡ್ಡಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸರ ಸೈಬರ್ ಘಟಕ  ಬೆದರಿಕೆಯೊಡ್ಡಿದ್ದ ಮೊಬೈಲ್ ಸಂಖ್ಯೆಯನ್ನು ಗುರುತಿಸಿ  ಬೆದರಿಕೆಯೊಡ್ಡಿದವ ಆಗ್ರಾದ 15 ವರ್ಷದ ಬಾಲಕ ಎಂದು ತಿಳಿದು  ಆತನನ್ನು ವಶಕ್ಕೆ ಪಡೆದು ಲಕ್ನೋದಲ್ಲಿನ ಬಾಲನ್ಯಾಯ ಮಂಡಳಿಯೆದುರು ಹಾಜರು ಪಡಿಸಿದ್ದಾರೆ. ಆತನನ್ನು  ಈಗ ಲಕ್ನೋದ ಬಾಲಾಪರಾಧಿಗಳ ಕೇಂದ್ರದಲ್ಲಿರಿಸಲಾಗಿದೆ.

ಪೊಲೀಸರು ಮನೆ ಬಾಗಿಲಿಗೆ ಬರುವ ತನಕ ಬಾಲಕನ ಕುಟುಂಬಕ್ಕೆ ಈ ಕುರಿತು ಗೊತ್ತೇ ಇರಲಿಲ್ಲ. “ಹತ್ತನೇ ತರಗತಿಯಲ್ಲಿರುವ ಬಾಲಕ ಏಕೆ ಈ ಸಂದೇಶವನ್ನು   ಕಳುಹಿಸಿದ್ದನೆಂದು ತಿಳಿದಿಲ್ಲ, ಆತ ಸಿಟ್ಟಿನಿಂದ ಅಥವಾ ತಮಾಷೆಗಾಗಿ  ಹಾಗೆ ಮಾಡಿರಬಹುದು, ಆದರೆ  ಆತ ದೊಡ್ಡ ಅಪರಾಧಿಯಂತೆ ಆತನನ್ನು ಕರೆದುಕೊಂಡು ಹೋಗಲಾಗಿದೆ'' ಎಂದು ಆತನ ಅಜ್ಜಿ ಅಲವತ್ತುಕೊಳ್ಳುತ್ತಾರೆ.

ತನ್ನಷ್ಟಕ್ಕೆ ತಾನೇ ಇರುವ ಬಾಲಕನಿಗೆ ವಾಲಿಬಾಲ್ ಆಟವೆಂದರೆ ಇಷ್ಟ, ಮುಂದೆ ಸರಕಾರಿ ಉದ್ಯೋಗ ಪಡೆಯಬೇಕೆಂಬ ಇಚ್ಛೆ ಹೊಂದಿದ್ದ ಎಂದು ಆತನ ಕುಟುಂಬ ಹೇಳುತ್ತಿದೆ.

ಬಾಲಾಪರಾಧಿಗಳ ಕೇಂದ್ರದಿಂದ ಆತ ಕುಟುಂಬಸ್ಥರ ಜತೆಗೆ ಒಮ್ಮೆ ಮಾತನಾಡಿದ್ದು  ಮನೆಗೆ ವಾಪಸಾಗಬೇಕು ಎಂದು  ಹೇಳಿದ್ದಾನೆನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸುಶಾಂತ್ ಗೋಲ್ಫ್ ಸಿಟಿಯ ಠಾಣಾಧಿಕಾರಿ ಸಚಿನ್ ಕುಮಾರ್ ಸಿಂಗ್, “ಸಂದೇಶದಲ್ಲಿ ಸಿಎಂ ಹೆಸರನ್ನು ಉಲ್ಲೇಖಿಸಲಾಗಿದ್ದರಿಂದ ಎಫ್‍ಐಆರ್ ದಾಖಲಾಗಿತ್ತು, ಬಾಲಕ ಯಾವುದೇ ರೀತಿಯಲ್ಲಿ ಬೆದರಿಕೆಯನ್ನು ಕಾರ್ಯಗತಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಹೊರನೋಟಕ್ಕೆ ತೋರುತ್ತಿದೆ. ವಿಚಾರಣೆ ಬಾಕಿಯಿದೆ'' ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News