ಕತ್ತು ಸೀಳಿದ ಸ್ಥಿತಿಯಲ್ಲಿ ನಾಲ್ಕು ಮಕ್ಕಳ ಮೃತದೇಹಗಳು ಪತ್ತೆ: ಶಂಕಿತೆ ಯಾರು ಗೊತ್ತಾ?

Update: 2020-11-28 07:42 GMT

ಗುರುಗ್ರಾಮ: ನಾಲ್ಕು ಮಂದಿ ಸೋದರಿಯರ ಮೃತದೇಹಗಳು ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಪಿಪ್ರೋಲಿ ಜಿಲ್ಲೆಯ ನುಹ್ ಎಂಬಲ್ಲಿ ನಡೆದಿದೆ.

ಮಕ್ಕಳ ತಾಯಿಯೇ ಈ ಕೊಲೆಗಳನ್ನು ನಡೆಸಿದ್ದಾಳೆಂದು ಶಂಕಿಸಲಾಗಿದೆ. ಈ ಸೋದರಿಯರ ಪೈಕಿ ಹಿರಿಯವಳ ವಯಸ್ಸು ಏಳು ವರ್ಷವಾಗಿದ್ದರೆ, ಕಿರಿಯ ಮಗುವಿಗೆ ಕೇವಲ ಎಂಟು ತಿಂಗಳಾಗಿತ್ತು. ಮಕ್ಕಳ ಸಾವಿಗೆ ಕಾರಣವಾದ ಅದೇ ಚೂರಿ ಬಳಸಿ ತನ್ನ ಕತ್ತನ್ನು ಸೀಳಿಕೊಂಡ ಈ ಸೋದರಿಯರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಫಾತಿಮಾ (35) ಮೆಕ್ಯಾನಿಕ್ ಆಗಿರುವ ಪತಿ ಖುರ್ಷೀದ್ ಅಹ್ಮದ್ ಜತೆ ವಾಸಿಸುತ್ತಿದ್ದಾಳೆ. ತನ್ನ ಮೊದಲ ಪತಿಯಿಂದ ಪ್ರತ್ಯೇಕಗೊಂಡ ನಂತರ 2012ರಲ್ಲಿ ಆತನನ್ನು ಆಕೆ ವಿವಾಹವಾಗಿದ್ದಳು.

ಶುಕ್ರವಾರ ಗ್ರಾಮದ ಗರ್ಭಿಣಿ ಮಹಿಳೆಯೊಬ್ಬಳು ಸೇರಿದಂತೆ ಒಂದೇ ಕುಟುಂಬದ ಮೂವರು ಸದಸ್ಯರು ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರಿಂದ ಎಲ್ಲರೂ ಅವರ ಮನೆಗೆ ತೆರಳಿದ್ದ ಸಂದರ್ಭ ಫಾತಿಮಾ ಈ ಘೋರ ಕೃತ್ಯವೆಸಗಿದ್ದು ಬೆಳಕಿಗೆ ಬಂದಿತ್ತು. ಆದರೆ ತನ್ನ ಮಕ್ಕಳನ್ನೇ ಸಾಯಿಸಲು ಆಕೆ ಏಕೆ ನಿರ್ಧರಿಸಿದ್ದಳೆಂದು ಇನ್ನೂ ತಿಳಿದು ಬಂದಿಲ್ಲ. ಆಕೆ ಚೇತರಿಸಿಕೊಂಡ ನಂತರ ಆಕೆ ನೀಡುವ ಹೇಳಿಕೆಯಿಂದಷ್ಟೇ ನಿಜ ವಿಚಾರ ತಿಳಿಯಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News