ಸರಕಾರವು ಪೊಲೀಸರ ಮೂಲಕ ಹಣ ವಸೂಲಿ ಮಾಡುತ್ತಿದೆ: ಶಾಸಕ ಸಾ.ರಾ.ಮಹೇಶ್ ಆರೋಪ

Update: 2020-11-28 09:47 GMT

ಮೈಸೂರು, ನ.28: ರಾಜ್ಯ ಸರಕಾರದಲ್ಲಿ ಹಣ ಇದೆಯೋ ಇಲ್ಲವೊ ಗೊತ್ತಿಲ್ಲ, ಒಟ್ಟಿನಲ್ಲಿ ಪೊಲೀಸರ ಮೂಲಕ ಹಣವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರದಲ್ಲಿ ಹಣ ಇದೆಯೋ ಇಲ್ಲವೊ ಗೊತ್ತಿಲ್ಲ, ಒಟ್ಟಿನಲ್ಲಿ ಪೊಲೀಸರ ಮೂಲಕ ಹಣ ವಸೂಲಿ‌ ಮಾಡಲಾಗುತ್ತಿದೆ. ಒಬ್ಬೊಬ್ಬ ಸಬ್ ಇನ್ ಸ್ಪೆಕ್ಟರ್, ಸರ್ಕಲ್ ಇನ್ ಸ್ಪೆಕ್ಟರ್ ಮತ್ತು ಡಿವೈಎಸ್ಪಿಗಳಿಗೆ ಇಂತಿಷ್ಟೇ ಹಣ ನೀಡಬೇಕು ಎಂದು ಟಾರ್ಗೆಟ್ ನೀಡಲಾಗಿದೆ. ಹಾಗಾಗಿ ಅವರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೈಸೂರು ನಗರ ಆಗಬಹುದು, ಗ್ರಾಮಾಂತರ ಪ್ರದೇಶಗಳಾಗಬಹುದು ಹೆಜ್ಜೆ ಹೆಜ್ಜೆಗೂ ಪೊಲೀಸ್ ನವರು ಪುಸ್ತಕ ಹಿಡಿದುಕೊಂಡು ರಸ್ತೆ ಬದಿಗಳಲ್ಲಿ ನಿಂತಿರುತ್ತಾರೆ. ದ್ವಿಚಕ್ರ ವಾಹನಗಳಲ್ಲಿ ಬರುವ ಪ್ರಯಾಣಿಕರುಗಳಿಗೆ ಹೆಲ್ಮೆಟ್, ಮಾಸ್ಕ್ ಎಂದೆಲ್ಲ ನೂರಾರು ರೂ. ದಂಡ ಹಾಕಲಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಹೆಚ್ಚು ಓಡಾಡುವವರು ಕೂಲಿ ಕೆಲಸಕ್ಕೆ ಹೋಗುವವರು, ಅವರು ದಿನಕ್ಕೆ ಐದು ನೂರು ಸಂಪಾದನೆ ಮಾಡಿದರೆ ಸಂಜೆ ಹೊತ್ತಿಗೆ ಪೊಲೀಸರು ಹಾಕುವ ದಂಡಕ್ಕೆ ಹಣ ನೀಡಿ ಬರಿಗೈಯಲ್ಲಿ ಮನೆಗೆ ಹೋಗಬೇಕಾದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ದೂರಿದರು.

ಕಾನೂನು ಉಲ್ಲಂಘಿಸಿದವರಿಗೆ ದಂಡ ಹಾಕಬೇಡಿ ಎಂದು ನಾನು ಹೇಳುತ್ತಿಲ್ಲ. ದಂಡ ಹಾಕುವ ಮೊದಲು ಎಚ್ಚರಿಕೆ ಕೊಡಿ. ಮತ್ತೂ  ಕಾನೂನು ಉಲ್ಲಂಘಿಸಿದರೆ ದಂಡ ಹಾಕಿ. ಅದು ಬಿಟ್ಟು ಸರಕಾರ ಟಾರ್ಗೆಟ್ ನೀಡಿದೆ ಎಂದು ಸಿಕ್ಕಾಪಟ್ಟೆ ದಂಡ ಹಾಕುವುದು ಬೇಡ‌. ಜನಪ್ರತಿನಿದಿಗಳಾದ ನಮ್ಮನ್ನು ಜನ ಕ್ಷೇತ್ರಕ್ಕೆ ಹೋದರೆ ಪೊಲೀಸರು ದಂಡ ಹಾಕುತ್ತಾರೆ ಅದನ್ನು ತಪ್ಪಿಸಿ ಎಂದು ಹೇಳುತ್ತಾರೆ ಎಂದರು.

ಪೊಲೀಸ್ ನವರನ್ನು ಯಾಕಪ್ಪ ಇಷ್ಟೊಂದು ದಂಡ ಹಾಕುತ್ತಿದ್ದೀರಿ ಎಂದರೆ ಸರಕಾರ ನಮಗೆ ಟಾರ್ಗೆಟ್ ನೀಡಿದೆ, ನಾವೇನು ಮಾಡುವುದು ಸಾರ್ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹಾಗಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಪೊಲೀಸ್ ನವರ ಮೂಲಕ ಹಣ ವಸೂಲಿ ಮಾಡುವುದನ್ನು ತಪ್ಪಿಸಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News