ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೋಡೆ, ಕಂಬ, ಕಿಟಕಿ ಗ್ಲಾಸ್‌ಗಳೇ ನೋಟಿಸ್ ಬೋರ್ಡ್!

Update: 2020-11-28 10:31 GMT

ಶಿವಮೊಗ್ಗ, ನ.28: ಜಿಲ್ಲೆಯ ಆಡಳಿತ ಸೌಧವಾದ ಜಿಲ್ಲಾಧಿಕಾರಿಗಳ ಕಚೇರಿಯ ಕಂಬಗಳು, ಕಿಟಕಿಗಳು, ಗ್ಲಾಸ್‌ಗಳು ನೋಟಿಸ್ ಬೋರ್ಡ್‌ಗಳಾಗಿವೆ. ಕಟ್ಟಡದ ಕೆಲವು ಕಂಬಗಳು, ಕಿಟಕಿ ಗ್ಲಾಸ್‌ಗಳ ಮೇಲೆ ಸರಕಾರದ ಯೋಜನಗಳ ಭಿತ್ತಿ ಚಿತ್ರಗಳು ರಾರಾಜಿಸುತ್ತಿವೆ.

ನೋಟಿಸ್ ಬೋರ್ಡ್ ಇದ್ದರೂ ಇಲ್ಲದಂತಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಒಳಗಡೆ ಹೋದವರಿಗೆ ಮೊದಲು ಸ್ವಾಗತಿಸುವುದು ಗೋಡೆ, ಕಂಬಗಳ ಮೇಲಿರುವ ಪೋಸ್ಟರ್‌ಗಳು. ಪ್ರವೇಶದ್ವಾರದ ಮುಂಭಾಗದಲ್ಲಿರುವ ಎರಡು ಕಂಬಗಳ ಮೇಲೆ ಸರಕಾರದ ಯೋಜನೆಗಳ  ಭಿತ್ತಿ ಪತ್ರಗಳು ಕಣ್ಣಿಗೆ ರಾಚುತ್ತಿವೆ.

ಜಿಲ್ಲಾಧಿಕಾರಿಗಳ ಕಚೇರಿ ಒಳಗಡೆ ಇರುವ ಕಂಬಗಳ ಮೇಲೆ ಆರೋಗ್ಯ ಇಲಾಖೆಯ ಕೊರೋನ ಜಾಗೃತಿಯ ಭಿತ್ತಿ ಚಿತ್ರ, ಗೋಡೆಯ ಮೇಲೆ ಕೋವಿಡ್ ಕರೆ ಸೆಂಟರ್‌ನ ಸಹಾಯವಾಣಿ ಸಂಖ್ಯೆ ಪೋಸ್ಟರ್, ಗೋಡೆಯ ಮೇಲೆ ಮಹಿಳಾ ಮತ್ತು ಮಕ್ಕಳ ಇಲಾಖೆಯ 'ನನ್ನ ಪೋಷಣೆಯ ಕತೆ' ಭಿತ್ತಿಚಿತ್ರ ಮತ್ತು ಕೃಷಿ ಇಲಾಖೆಯ ಭಿತ್ತಿ ಚಿತ್ರಗಳು ಹಾಗೂ ಆಹಾರ ಇಲಾಖೆಯ ಪೋಸ್ಟರ್‌ಗಳುನ್ನು ಹಾಕಲಾಗಿದೆ.

ಜೊತೆಗೆ ಜಿಲ್ಲಾಧಿಕಾರಿ ಕಚೇರಿಯ ಪ್ರತಿ ಕಿಟಕಿಗಳು ಸರಕಾರದ ಯೋಜನೆಗಳನ್ನು ಪ್ರಚರಪಡಿಸುತ್ತಿವೆ. ಅಲ್ಲದೇ ಕಿಟಕಿಗಳ ಮೇಲೆ ಕರಪತ್ರಗಳನ್ನು ಅಂಟಿಸಿ ಕಿತ್ತು ಹಾಕಿದ ಕುರುಹುಗಳು ಇವೆ. ಇದರಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಂದವನ್ನೇ ಹಾಳುಗೆಡವಿದೆ.

ನೋಟಿಸ್ ಬೋರ್ಡ್ ಯಾಕಿಲ್ಲ:
ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಹುಡುಕಿದರೇ ಎರಡೂ ಅಥವಾ ಮೂರು ನೋಟಿಸ್ ಬೋರ್ಡ್ ಸಿಗಬಹುದು. ಜಿಲ್ಲಾಧಿಕಾರಿ ಕೊಠಡಿ ಮತ್ತು ಅಪರ ಜಿಲ್ಲಾಧಿಕಾರಿ ಕಚೇರಿ ಬಳಿಗೊಂದು ಸಣ್ಣ ನೋಟಿಸ್ ಬೋರ್ಡ್  ಇದೆ. ಇದರಲ್ಲಿ ಕೆಲವು ಮಾಹಿತಿಗಳನ್ನು ಮಾತ್ರ ಪ್ರಕಟಿಸಲಾಗಿದೆ. ಉಳಿದ ಕಡೆಯು ಗೋಡೆ, ಕಿಟಕಿ ಗ್ಲಾಸ್‌ಗಳ ಮೇಲೆ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ.

ಹಾಗಾಗಿ ಜಿಲ್ಲಾಧಿಕಾರಿಗಳು ಕೊಡಲೇ ಕಚೇರಿ ಗೋಡೆಗಳ ಮೇಲೆ ಸರಕಾರಿ ಜಾಗೃತಿ ಭಿತ್ತಿ ಪತ್ರಗಳನ್ನು ಅಂಟಿಸದೆ ನೋಟಿಸ್ ಬೋರ್ಡ್‌ನಲ್ಲಿ ಮಾತ್ರ ಹಾಕಲು ಸೂಚಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News