ಹಿಂದೂ ರಾಷ್ಟ್ರೀಯವಾದದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸೋಲಿಗೆ ಹೆದರದ ಪಕ್ಷ: ಮಾಜಿ ಸಭಾಪತಿ ಶಂಕರಮೂರ್ತಿ

Update: 2020-11-28 11:07 GMT

ಶಿವಮೊಗ್ಗ, ನ.28: ಹಿಂದೂ ರಾಷ್ಟ್ರೀಯ ವಾದದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷ ಸೋಲಿಗೆ ಎಂದೂ ಹೆದರಲಿಲ್ಲ. ಆದ್ದರಿಂದಲೇ ಇಂದು ಗೆಲುವು ಪಡೆದಿದ್ದೇವೆ ಎಂದು ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಹೇಳಿದರು.

ಅವರು ಶುಭಮಂಗಳ ಸಮುದಾಯ ಭವನದಲ್ಲಿ ಬಿಜೆಪಿ ನಗರ ಸಮಿತಿ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಿಜೆಪಿ ಒಂದು ವಿಭಿನ್ನ ರಾಜಕೀಯ ಪಕ್ಷವಾಗಿದೆ. ಸಂಸತ್‌ನಲ್ಲಿ ಒಂದೇ ಒಂದು ಸ್ಥಾನ ಇಲ್ಲದಿದ್ದರೂ ಕೂಡ ಹೆದರಲಿಲ್ಲ. ಸೋಲಿಗೆ ಎಂದೂ ಭಯಪಡದ ಪಕ್ಷವಿದು. ಅಧಿಕಾರಕ್ಕಾಗಿಯೇ ನಾವು ಜೋತುಬೀಳಲಿಲ್ಲ. ರಾಜಕೀಯಕ್ಕೆ ಬರುವವರೆಲ್ಲ ಅಧಿಕಾರ ಬೇಕು ಎಂದು ಬಯಸುವುದೂ ಅಲ್ಲ. ಆದರೆ ಪ್ರಯತ್ನ ಮಾತ್ರ ಬಿಡಬಾರದು. ಇಂತಹ ಪ್ರಯತ್ನದಿಂದ ಬಿಜೆಪಿ ಇಂದು ಇಡೀ ದೇಶಾದ್ಯಂತ ಸಂಘಟನೆಯನ್ನು ಕಟ್ಟಿ ಅಧಿಕಾರ ಹಿಡಿದು ಬಲಿಷ್ಠ ಭಾರತ ಕಟ್ಟುವತ್ತ ಸಾಗಿದೆ ಎಂದರು.

ಕಾಶ್ಮೀರ ಭಾರತದೊಳಗೆ ಸಂಪೂರ್ಣವಾಗಿ ಸೇರಿಸಿದ ಕೀರ್ತಿ, 370ನೇ ವಿಧಿ ತೆಗೆದು ಹಾಕಿದ್ದು, ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ಗುಲಾಮಗಿರಿಯ ಕಟ್ಟಡ ಕೆಡವಿದ್ದು, ಇವೆಲ್ಲವೂ ನನ್ನಂತಹ ಹಿರಿಯ ಬಿಜೆಪಿಗರಿಗೆ ಅತ್ಯಂತ ಖುಷಿಯ ವಿಚಾರಗಳು. ಇಂತಹ ದಿನವೊಂದು ಬರುತ್ತದೆ ಎಂದು ನಾವು ಅಂದು ಕೊಂಡಿರಲಿಲ್ಲ. ರಾಜಕೀಯದಲ್ಲಿ ಹಿಂದೂ ಆಶಯಗಳನ್ನು ಇಟ್ಟುಕೊಂಡೇ ಬೆಳೆದು ಬಂದ ನಮ್ಮಂತಹವರಿಗೆ ಸಂಘಟನೆಯೇ ಮುಖ್ಯವಾಗಿತ್ತು. ಈಗಲೂ ಅಷ್ಟೇ ಬಿಜೆಪಿ ಒಂದು ಸಂಘಟನಾತ್ಮಕ ಪಕ್ಷವಾಗಿದೆ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಜಗತ್ತಿನಲ್ಲಿ ಎರಡು ಪ್ರಮುಖ ಆರ್ಥಿಕ ನೀತಿಗಳಿದ್ದವು. ಒಂದು ವ್ಯಕ್ತಿ ಕೇಂದ್ರಿತ ಮತ್ತೊಂದು ಸಮಾಜ ಕೇಂದ್ರಿತ. ಈ ಎರಡೂ ಕೂಡ ಪ್ರತ್ಯೇಕವಾಗಿ ನೋಡಿದರೆ ಅಪಾಯಕಾರಿಯಾಗಿಯೆ ಇದ್ದವು. ಅಮೇರಿಕಾ, ಚೀನಾ, ರಷ್ಯ ಮುಂತಾದವೆಲ್ಲ ಇಂತಹ ಆರ್ಥಿಕನೀತಿಗಳನ್ನು ಬಳಸಿಕೊಂಡಿದ್ದವು. ಅಂದಿನ ಕಾಂಗ್ರೆಸ್ ಕೂಡ ಸಮಾಜವಾದವನ್ನು ಕಟ್ಟಲು ಹೊರಟು ಸೋತಿತ್ತು. ಆಗ ಒಂದು ಹೊಸ ವಾದವನ್ನೇ ದೀನದಯಾಳು ಅವರು ಹುಟ್ಟುಹಾಕಿದ್ದರು. ಅದು ಭಾರತೀಯ ಜೀವನ ಪದ್ದತಿಯ ಬೇರಿನಿಂದ ಹುಟ್ಟಿದ್ದು, ಏಕತಾ ಮಾನವವಾದವೇ ಆಗಿತ್ತು. ಇದು ಎರಡಕ್ಕೂ ಭಿನ್ನವಾದ ಆರ್ಥಿಕ ನೀತಿಯಾಗಿದೆ. ಪ್ರಧಾನಿ ಮೋದಿಯವರು ಇದರ ಅಡಿಯಲ್ಲೇ ಭಾರತದ ಹೊಸ ಆರ್ಥಿಕ ನೀತಿಯನ್ನೇ ಅನುಸರಿಸುತ್ತಿದ್ದಾರೆ ಎಂದರು.

ಬಿಜೆಪಿಗೆ ಹೊಸದಾಗಿ ಸೇರುವವರು, ಈಗಾಗಲೇ ಸೇರಿದವರು, ನಿಷ್ಟಾವಂತರು ಈ  ತತ್ವ ಸಿದ್ದಾಂತದ ಅಡಿಯಲ್ಲಿಯೇ ಕೆಲಸ ಮಾಡಬೇಕು. ಹಿಂದು ರಾಷ್ಟ್ರೀಯವಾದದ ಮೂಲಕ ಪಕ್ಷವನ್ನು ಸಂಘಟನೆ ಮಾಡಿ ಬಲಿಷ್ಟ ಭಾರತವನ್ನು ಕಟ್ಟುವತ್ತ ಯೋಚಿಸಬೇಕು. ಎಲ್ಲದಕ್ಕೂ ಮುಖ್ಯವಾಗಿ ಸಂಘಟನೆ ಬೇಕೇ ಬೇಕು. ಇಂತಹ ಸಂಘಟನಾ ಶಕ್ತಿಯನ್ನು ಪ್ರಶಿಕ್ಷಣ ವರ್ಗ ಕಲಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮೇಯರ್ ಸುವರ್ಣ ಶಂಕರ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಎನ್.ಜೆ.ನಾಗರಾಜ್, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಎಸ್.ಎನ್.ಚನ್ನಬಸಪ್ಪ, ಸ್ಪೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಮೋಹನ್, ರಮೇಶ್, ಮೋಹನ್ ರೆಡ್ಡಿ ಸೇರಿದಂತೆ ಹಲವರಿದ್ದರು. ಬಳ್ಳೆಕೆರೆ ಸಂತೋಷ್ ಸ್ವಾಗತಿಸಿದರು. ಸುನಿತಾ ಕೆ.ವಿ.ಅಣ್ಣಪ್ಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News