ವ್ಯಾಪಾರ ಮಾಡಿ ಪಕ್ಷ ಬಿಟ್ಟು ಹೋದವರ ಬಗ್ಗೆ ನಾನೇಕೆ ಮಾತನಾಡಲಿ: ಸಿದ್ದರಾಮಯ್ಯ ಪ್ರಶ್ನೆ

Update: 2020-11-28 11:30 GMT

ಬೆಂಗಳೂರು, ನ. 28: ‘ವ್ಯಾಪಾರ ಮಾಡಿಕೊಂಡು ಪಕ್ಷವನ್ನು ಬಿಟ್ಟು ಹೋಗಿರುವವರ ಬಗ್ಗೆ ನಾನೇಕೆ ಮಾತನಾಡಲಿ. ಬಿಜೆಪಿಯವರು ಅವರನ್ನು ಸಚಿವರನ್ನಾಗಿಯಾದರೂ ಮಾಡಲಿ ಅಥವಾ ಹೊರಗಾದರೂ ಹಾಕಲಿ, ಅವರ ಬಗ್ಗೆ ನಾನೇಕೆ ಮಾತನಾಡಲಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ನಾಯಕತ್ವ ಬದಲಾಗುತ್ತದೆಯೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ. ವಿಧಾನ ಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರನ್ನು ಸಚಿವರನ್ನಾಗಿ ಮಾಡಲಿ ಅಥವಾ ಬಿಡಲಿ. ಇದರಿಂದ ನನಗೇನು ಆಗಬೇಕಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಈ ಸರಕಾರದಿಂದ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಸಾಧ್ಯವಾಗಿಲ್ಲ. ಅಲ್ಲದೆ, ರೈತರು ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೊರೋನ ಲಾಕ್‍ಡೌನ್ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿಯೂ ಸರಕಾರ ವಿಫಲವಾಗಿದೆ. ಬಿಜೆಪಿ ಸರಕಾರ ಅದಷ್ಟು ಬೇಗ ತೊಲಗಿದರೆ ರಾಜ್ಯದ ಜನರಿಗೆ ಒಳ್ಳೆಯದು’ ಎಂದು ವಾಗ್ದಾಳಿ ನಡೆಸಿದರು.

‘ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೆ ಯಾವುದೇ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಕೆಲದಿನಗಳ ಹಿಂದೆಯಷ್ಟೇ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ’ ಎಂದು ತಿಳಿಸಿದರು.

‘ಯಾವುದೇ ಸಮುದಾಯವನ್ನು ಹಿಂದುಳಿದ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ಆಧಾರಗಳು ಬೇಕು. ಅಥವಾ ಈ ಬಗ್ಗೆ ವರದಿಗಳು ಇರಬೇಕಾಗುತ್ತದೆ’ ಎಂದ ಸಿದ್ದರಾಮಯ್ಯ, ‘ಯಾವುದೇ ಸಮುದಾಯದ ಪರ ಅಥವಾ ವಿರುದ್ಧವೂ ಅಲ್ಲ. ಅರ್ಹತೆ ಇರುವ ಎಲ್ಲ ಸಮುದಾಯಗಳಿಗೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಯಾಗಬೇಕು’ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News