ವಿವಾಹವಾಗಲು ನಿರಾಕರಿಸಿದ ನಾದಿನಿಗೆ ಚೂರಿ ಇರಿದು ಆತ್ಮಹತ್ಯೆಗೆ ಶರಣಾದ ಭಾವ

Update: 2020-11-28 11:42 GMT

ಬೆಂಗಳೂರು, ನ.28: ವಿವಾಹವಾಗಲು ನಿರಾಕರಿಸಿದ ನಾದಿನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ ಭಾವ, ಬಳಿಕ ತಾನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಲಹಂಕದ ಕಟ್ಟಿಗೇನಹಳ್ಳಿಯ ಫುಡ್ ಡೆಲಿವರಿ ಬಾಯ್ ನಾಗರಾಜ್(32) ಆತ್ಮಹತ್ಯೆ ಮಾಡಿಕೊಂಡ ಭಾವ ಎಂದು ಪೊಲೀಸರು ತಿಳಿಸಿದ್ದು, ಚೂರಿ ಇರಿತಕ್ಕೆ ಒಳಗಾದ ನಾದಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಪ್ರೇಮಾ ಎಂಬಾಕೆಯನ್ನು ವಿವಾಹವಾಗಿದ್ದ ನಾಗರಾಜ್‍ಗೆ ಇಬ್ಬರು ಮಕ್ಕಳಿದ್ದು, ಕಟ್ಟಿಗೇನಹಳ್ಳಿಯಲ್ಲಿ ಪತ್ನಿ, ಆಕೆಯ ತಾಯಿ, ನಾದಿನಿ ಜೊತೆಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ನಾದಿನಿ ಇತ್ತೀಚೆಗೆ ಕಾಲೇಜು ಬಿಟ್ಟು ಮನೆಯಲ್ಲೇ ಇದ್ದು ಆಕೆ ಒಂಟಿಯಾಗಿದ್ದಾಗ ನಾಗರಾಜ್ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ.

ತನ್ನನ್ನು ವಿವಾಹವಾಗುವಂತೆ ಆತ ಮಾನಸಿಕ ಕಿರುಕುಳ ನೀಡುತ್ತಿದ್ದ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ ಆಕ್ರೋಶಗೊಂಡ ನಾಗರಾಜ್, ನ.25ರಂದು ಬೆಳಗ್ಗೆ 10.30ರಲ್ಲಿ ನಾದಿನಿಯೊಬ್ಬಳೇ ಮನೆಯಲ್ಲಿದ್ದಾಗ ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ. ನಂತರ ತಾನೂ ವಿಷ ಸೇವಿಸಿ ಮನೆಯಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ತದನಂತರ, ನಾಗರಾಜ್ ಯಲಹಂಕದ ರೈತರ ಸಂತೆ ಬಳಿ ಬಿದ್ದು ಮೃತಪಟ್ಟಿದ್ದ. ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಅಪರಿಚಿತ ಶವದ ಬಗ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಯಲಹಂಕ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News