ಸಂತೋಷ್ ಆತ್ಮಹತ್ಯೆ ಯತ್ನ ಕಾರಣ ನಿಗೂಢ: ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು

Update: 2020-11-28 12:20 GMT

ಬೆಂಗಳೂರು, ನ.28: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಕಾರಣ ನಿಗೂಢವಾಗಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದರು ಎನ್ನುವ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈಗಾಗಲೇ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 309 ಅಡಿ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಪ್ರಾಥಮಿಕವಾಗಿ ಸಂತೋಷ್ ಅವರ ಪತ್ನಿ ಜಾಹ್ನವಿ ಹಾಗೂ ಇತರರ ಹೇಳಿಕೆ ಪಡೆದರು.

ಇಂದು ಅಥವಾ ನಾಳೆ ವೈದ್ಯರ ಸಲಹೆ ಪಡೆದು ಸಂತೋಷ್ ಅವರ ಹೇಳಿಕೆ ಪಡೆಯಲಾಗುವುದು. ಆಗಲೇ ನಿಖರ ಕಾರಣ ತಿಳಿಯಲಿದೆ, ಮೇಲ್ನೋಟಕ್ಕೆ ಕೌಟುಂಬಿಕ ಹಾಗೂ ರಾಜಕೀಯ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿರುವ ಅನುಮಾನವಿದೆ. ಎರಡೂ ಆಯಾಮದಲ್ಲೂ ತನಿಖೆ ಮುಂದುವರಿದಿದೆ. ಸದ್ಯಕ್ಕೆ ಯಾವುದೇ ನಿಖರ ಪುರಾವೆಗಳು ಸಿಕ್ಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಂತೋಷ್ ಪತ್ನಿ ಜಾಹ್ನವಿ, ರಾಜ್ಯ ರಾಜಕೀಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂತೋಷ್ ಬಹಳ ಬೇಸರದಿಂದ ಇದ್ದರು. ಶುಕ್ರವಾರ ಬೆಳಗ್ಗೆಯಿಂದಲೇ ಅವರು ಸ್ವಲ್ಪ ಬೇಸರದಲ್ಲಿದ್ದರು. ಸಂಜೆ ಹೊರಗಡೆ ಹೋಗಿದ್ದರು. ಹೀಗೆ ಹೋದವರು ಸುಮಾರು 7 ಗಂಟೆಗೆ ಮನೆಗೆ ಬಂದರು. ಓದುತ್ತಾ ಇರುತ್ತೇನೆ ಎಂದು ಮನೆಯ ಮೇಲೆ ಹೋಗಿದ್ದರು ಎಂದರು.

ಈ ವೇಳೆ ನಾನು ಊಟದ ಕುರಿತು ಪ್ರಶ್ನಿಸಿದಾಗ ಅವರು ಏನು ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಅವರು ಪ್ರಜ್ಞೆ ಕಳೆದುಕೊಳ್ಳುತ್ತಾ ಇದ್ದರು. ಇದರಿಂದ ಗಾಬರಿಗೊಂಡ ನಾವು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದೆವು ಎಂದು ಹೇಳಿದರು.

ಎಲ್ಲ ರೀತಿಯಲ್ಲೂ ನಾವಿಬ್ಬರೂ ಚೆನ್ನಾಗಿದ್ದೇವೆ. ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡ ಕಾರಣ ಸ್ವಲ್ಪ ಅವರಿಗೆ ಪ್ರಜ್ಞೆ ಇಲ್ಲ. ಆದರೆ, ಶೀಘ್ರ ಸರಿಹೋಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಚೇತರಿಕೆ: ಸಂತೋಷ್ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ ಎಂದು ಎಂಎಸ್ ರಾಮಯ್ಯ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನಿದ್ದೆ ಮಾತ್ರೆ ತೆಗೆದುಕೊಂಡಿದ್ದಾರೆ. 8:30ಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದೆವು. ನಂತರ 10 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಲಾಯಿತು. ಅಲ್ಪ್ರಾಝೊಲಮ್ ನಿದ್ದೆ ಮಾತ್ರೆ ತೆಗೆದುಕೊಂಡಿರುವ ಸಂತೋಷ್, ಸದ್ಯ ಇದಕ್ಕೆ ಸಂಬಂಧಪಟ್ಟ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯ ಸಂತೋಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರಿನನ್ವಯ ಸದಾಶಿವನಗರ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಾರೆ.

-ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ

ಸಿಎಂ ದಿಢೀರ್ ಭೇಟಿ

ಸಂತೋಷ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಿಢೀರ್ ತಡರಾತ್ರಿ ಇಲ್ಲಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಅವರು, ಸಂತೋಷ್ ಚೆನ್ನಾಗಿ ಮಾತನಾಡುತ್ತಿದ್ದಾನೆ. ನಾನು ಅವನ ಪತ್ನಿ ಜೊತೆ ಮಾತನಾಡಿದ್ದು, ಬೆಳಗ್ಗೆ ಎದ್ದು ಓಡಾಡುತ್ತಾನೆ ಎಂದರು.

ಡೆತ್ ನೋಟ್‍ಗಾಗಿ ಹುಡುಕಾಟ?

ಆತ್ಮಹತ್ಯೆಗೂ ಮುನ್ನ ಸಂತೋಷ್ ಡೆತ್ ನೋಟ್ ಬರೆದಿದ್ದರು ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾದರು. ಆದರೆ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೂಚನೆ ಮೇರೆಗೆ ತನಿಖಾಧಿಕಾರಿಗಳು ಮರಳಿ ಠಾಣೆಯತ್ತ ಹೊರಟರು ಎಂದು ತಿಳಿದುಬಂದಿದೆ.

ಕೈ ತಪ್ಪಲಿದೆ ಕಾರ್ಯದರ್ಶಿ ಪಟ್ಟ?

ಆತ್ಮಹತ್ಯೆಗೆ ಯತ್ನಿಸಿದ ಎನ್.ಆರ್.ಸಂತೋಷ್‍ಗೆ ಹೊಸ ಸಂಕಷ್ಟ ಎದುರಾಗಿದ್ದು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನ ಕೈ ತಪ್ಪಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಐಪಿಸಿ ಸೆಕ್ಷನ್ 309ರ ಪ್ರಕಾರ ಆತ್ಮಹತ್ಯೆ ಯತ್ನ ಅಪರಾಧವಾಗಿದ್ದು, ಇದರ ಅಡಿಯಲ್ಲಿ ಗರಿಷ್ಠ ಒಂದು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.

ಅಷ್ಟೇ ಅಲ್ಲದೆ, ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂದು ಸ್ಪಷ್ಟಪಡಿಸಬೇಕಾಗುತ್ತದೆ. ಮಾನಸಿಕ, ದೈಹಿಕ ಕಿರುಕುಳ ಅಥವಾ ಯಾರಿಂದಲಾದರೂ ಪ್ರಚೋದನೆ ಇರುವ ಬಗ್ಗೆಯೂ ಹೇಳಬೇಕಾಗಿದೆ. ಒಂದು ವೇಳೆ ಮಾನಸಿಕ ಖಿನ್ನತೆ ಅಥವಾ ಮನೋಕಾಯಿಲೆಯ ನೆಪ ನೀಡಿದರೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಕುತ್ತು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಕಾನೂನು ತಜ್ಞರು.

ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ 2017ರ ಪ್ರಕಾರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದರೆ ಸರಕಾರವೇ ಚಿಕಿತ್ಸೆ ನೀಡುತ್ತದೆ. ಆದರೆ, ಖಿನ್ನತೆ ವಾಸಿಯಾಗುವವರೆಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಂತಹ ಗಂಭೀರ ಜವಾಬ್ದಾರಿ ನಿರ್ವಹಣೆ ಕಷ್ಟ.

ಇನ್ನು, ಈ ರೀತಿಯ ಮನೋ ದೌರ್ಬಲ್ಯ ಉಳ್ಳವರು ಸರಕಾರದ ಆಡಳಿತ ಯಂತ್ರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದೂ ಭಾರೀ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದ್ದು, ಹೀಗಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಕೈತಪ್ಪುವ ಸಾಧ್ಯತೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News