ಕೆಆರ್‍ಎಸ್ ವತಿಯಿಂದ ಕಿತ್ತೂರಿನಿಂದ ಬಳ್ಳಾರಿವರೆಗೆ ‘ಚಲಿಸು ಕರ್ನಾಟಕ’ ಸೈಕಲ್ ಯಾತ್ರೆ

Update: 2020-11-28 12:48 GMT
ರವಿಕೃಷ್ಣಾರೆಡ್ಡಿ

ಬೆಂಗಳೂರು, ನ.28: ಸದೃಢ ಮತ್ತು ಉತ್ತಮ ಭವಿಷ್ಯದ ಕರ್ನಾಟಕಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನ.30ರಿಂದ ಡಿ.7ರವರೆಗೆ ಬೆಳಗಾವಿ ಜಿಲ್ಲೆ ಕಿತ್ತೂರಿನಿಂದ ಬಳ್ಳಾರಿವರೆಗೆ ‘ಚಲಿಸು ಕರ್ನಾಟಕ’ ಸೈಕಲ್ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಕಾರ್ಯದರ್ಶಿ ದೀಪಕ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಆರ್‍ಎಸ್‍ನ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ನ.30ರಿಂದ ಬೆಳಗಾವಿ ಜಿಲ್ಲೆಯ ಐತಿಹಾಸಿಕ ಸ್ಥಳವಾದ ಕಿತ್ತೂರಿನಿಂದ ಸೈಕಲ್‍ಯಾತ್ರೆ ಚಾಲನೆಗೊಳ್ಳಲಿದೆ. ನಂತರ ಗರಗ, ಧಾರವಾಡ, ಹುಬ್ಬಳ್ಳಿ, ಅಣ್ಣಿಗೇರಿ, ಗದಗ, ಲಕ್ಕುಂಡಿ, ಕೊಪ್ಪಳ, ಹೊಸಪೇಟೆ ಮೂಲಕ ಡಿ.7ರಂದು ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸೈಕಲ್ ಯಾತ್ರೆಗೆ ರಾಜ್ಯದ ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಚಾಲನೆ ನೀಡಿದ್ದಾರೆ. ಭವಿಷ್ಯದ ಕರ್ನಾಟಕವನ್ನು ಕಟ್ಟಲು ಹಾಗೂ ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದ ಅವಶ್ಯಕತೆಯನ್ನು ರಾಜ್ಯದ ಜನರಿಗೆ ತಿಳಿಸಲು ಮತ್ತು ಪ್ರಸ್ತುತ ರಾಜ್ಯದಲ್ಲಿನ ಜನರ ಪರಿಸ್ಥಿತಿಯನ್ನು ಅರಿಯಲು ಈ ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯವು ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಹಿನ್ನಡೆ ಅನುಭವಿಸಿದ್ದು, ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರ ಜತೆಗೆ ರಾಜ್ಯವು ನಿರಂತರವಾಗಿ ನೆರೆ ಮತ್ತು ಬರದಂತಹ ತೊಂದರೆಗೆ ಸಿಲುಕುತ್ತಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ನಿರುದ್ಯೋಗ, ಅಸಮಾನತೆ, ಭ್ರಷ್ಟಾಚಾರ ದಿನೇ ದಿನೇ ಹೆಚ್ಚಾಗುತ್ತಿದ್ದು. ಇವೆಲ್ಲಕ್ಕೂ ಪರಿಹಾರವೆಂದರೆ ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣ ಮಾತ್ರವಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಕೆಆರ್‍ಎಸ್ ಶ್ರಮಿಸಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News