ಬಂಡವಾಳಶಾಹಿ, ಬ್ರಾಹ್ಮಣಶಾಹಿ ವ್ಯವಸ್ಥೆ ಟಿಪ್ಪುವಿನ ನೈಜ ಇತಿಹಾಸ ತಿರುಚುತ್ತಿದೆ: ಚಿಂತಕ ಶಿವಸುಂದರ್

Update: 2020-11-28 13:01 GMT

ಚಿಕ್ಕಮಗಳೂರು, ನ.28: ಕಸೂತಿ ಬಟ್ಟೆಗಳ ಮೇಲೆ ಬ್ರಿಟಿಷರು ತೆರಿಗೆ ವಿಧಿಸಿದ್ದರಿಂದ ದೇಶದಲ್ಲಿ ಅಂದಿನ ಜವಳಿ ಉದ್ಯಮ ವಿನಾಶದ ಅಂಚಿನಲ್ಲಿತ್ತು. ಈ ಉದ್ಯಮವನ್ನು ರಕ್ಷಿಸಲು ಜವಳಿ ಉದ್ಯಮ ನೀತಿಯನ್ನು ಟಿಪ್ಪು ಸುಲ್ತಾನ್ ಅಂದೇ ರೂಪಿಸಿದ್ದ. ಈ ನೀತಿ ಭಾರತ ಸರಕಾರಕ್ಕೆ ಇಂದಿಗೂ ಮಾದರಿಯಾಗಿದೆ ಎಂದು ಪ್ರಗತಿಪರ ಚಿಂತಕ, ಲೇಖಕ ಶಿವಸುಂದರ್ ಅಭಿಪ್ರಾಯಿಸಿದ್ದಾರೆ.

ನಗರದ ಫುರ್ಖಾನಿಯಾ ಶಾದಿಮಹಲ್‍ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತ ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿದ ಅವರು, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಶೋಷಿತರ, ದಮನಿತರ ನಾಯಕ. ದೇಶದ ಬಗ್ಗೆ ಅಪಾರ ಕನಸುಗಳನ್ನು ಕಂಡಿದ್ದ ಟಿಪ್ಪು ಅಪ್ಪಟ ದೇಶಪ್ರೇಮಿ ಎಂಬುದರಲ್ಲಿ ಎರಡು ಮಾತಿಲ್ಲ. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ದೇಶವನ್ನು ವಿಮೋಚನೆಗೊಳಿಸಲು ಪ್ರಯತ್ನಿಸಿ ದೇಶದ್ರೋಹಿಗಳ ಸಂಚಿಗೆ ಬಲಿಯಾಗಿ ಹುತಾತ್ಮನಾದ ನಿಜವಾದ ದೇಶ ಪ್ರೇಮಿಯಾಗಿದ್ದಾನೆ ಎಂದರು.

ಟಿಪ್ಪು ಸುಲ್ತಾನ್ ಸ್ವದೇಶಿ ನೀತಿಯನ್ನು ಆಗಲೇ ಪ್ರತಿಪಾದಿಸಿದ್ದ ಉತ್ತಮ ಆಡಳಿತಗಾರನಾಗಿದ್ದ. ಬ್ರಿಟಿಷರ ಕಾಲಾವಧಿಯಲ್ಲಿ ಮುಸ್ಲಿಮರು ಧರಿಸುತ್ತಿದ್ದ ಕಸೂತಿಯಿಂದ ತಯಾರಿಸಿದ ಬಟ್ಟೆಗಳ ಮೇಲೆ ತೆರಿಗೆಯನ್ನು ವಿಧಿಸಲಾಗಿತ್ತು. ಪರಿಣಾಮ ಅಂದಿನ ಜವಳಿ ಉದ್ಯಮ ಕುಸಿಯುವಂತಾಯಿತು. ಉದ್ಯಮ ರಕ್ಷಿಸಲು ಜವಳಿ ಉದ್ಯಮ ನೀತಿಯನ್ನು ರೂಪಿಸಿದ ಕೀರ್ತಿ ಟಿಪ್ಪು ಸುಲ್ತಾನ್‍ಗೆ ಸಲ್ಲುತ್ತದೆ. ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ನೀತಿಯು ದೇಶದ ಬಹುದೊಡ್ಡ ಶತ್ರು ಎಂದು ಟಿಪ್ಪು ಬಲವಾಗಿ ನಂಬಿದ್ದರಿಂದ ಅವರುಗಳ ಮೂಲೋತ್ಪಾಟನೆಗೆ ಟೊಂಕ ಕಟ್ಟಿದ್ದನಾದರೂ ಅನ್ಯಧರ್ಮಗಳ ಸಹಿಷ್ಣುವಾಗಿದ್ದ. ಈ ಕಾರಣಕ್ಕಾಗಿಯೇ ಟಿಪ್ಪು ಸುಲ್ತಾನ್ ಹೆಸರನ್ನು ಜನರ ಮನಸ್ಸಿನಿಂದ ಅಳಿಸಿ ಹಾಕಲು ಸಾಧ್ಯವಾಗಿಲ್ಲ ಎಂದರು.

ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳ ನಿರ್ಮೂಲನೆಗೆ ಅಂದು ಟಿಪ್ಪು ಭಾರೀ ಪೆಟ್ಟು ನೀಡಿದ್ದರಿಂದ ಆತನ ವಿರುದ್ಧ ಅಂದು ನಡೆದ ಸಂಚು ಇಂದಿಗೂ ಮುಂದುವರಿದಿದೆ. ಇತಿಹಾಸದ ಪುಟಗಳಿಂದ ಆತನ ಹೆಸರನ್ನು ಕಿತ್ತುಹಾಕಲು ಬ್ರಾಹ್ಮಣಶಾಹಿ ವ್ಯವಸ್ಥೆ ಪ್ರಸಕ್ತ ಭಾರೀ ಕಸರತ್ತು ಮಾಡುತ್ತಿದೆ ಎಂದು ಟೀಕಿಸಿದ ಶಿವಸುಂದರ್, ಟಿಪ್ಪುವಿನ ಬಗ್ಗೆ ಅಪಾರ ಮಾಹಿತಿ ಈ ದೇಶದಲ್ಲಿ ಲಭ್ಯವಾಗದಿದ್ದರೂ ಪ್ರಾನ್ಸ್, ಅಮೇರಿಕಾ ಮತ್ತು ಇಂಗ್ಲೆಂಡ್ ಮತ್ತಿತರ ದೇಶಗಳಲ್ಲಿ ಆತನ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಿದೆ. ಫ್ರಾನ್ಸ್ ನಲ್ಲಿ ಕ್ರಾಂತಿಯಾದಾಗ ಹೆಚ್ಚು ಸಂಭ್ರಮಿಸಿದ್ದ ಟಿಪ್ಪು ಸುಲ್ತಾನ್ ಕೊನೆಗೆ ರಣರಂಗದಲ್ಲಿ ಸಾಮಾನ್ಯ ಸೈನಿಕನಂತೆ ಅಸು ನೀಗಬೇಕಾಯಿತು. ಟಿಪ್ಪು ಸುಲ್ತಾನ್‍ನನ್ನು ಸಂಚು ಮಾಡಿ ಹತ್ಯೆ ಮಾಡಲಾಯಿತು. ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಗಳು ಟಿಪ್ಪು ಆಡಳಿತಕ್ಕೆ ಅಂತ್ಯ ಹಾಡಲು ಬ್ರಿಟಿಷರಿಗೆ ನೆರವಾಗಿದ್ದರು ಎಂದು ದೂರಿದರು.

ನಾಡಿನ ರಕ್ಷಣೆಗಾಗಿ ಹೋರಾಟ ನಡೆಸಿದ ಟಿಪ್ಪು ಸುಲ್ತಾನ್ ತಮ್ಮ ಕುಟುಂಬಕ್ಕಾಗಿ ಏನನ್ನು ಮಾಡಿಕೊಳ್ಳಲಿಲ್ಲ. ರೈತರ ಉದ್ಧಾರಕ್ಕಾಗಿ ತನ್ನ ರಾಣಿಯ ಒಡವೆಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದ. ತನ್ನ ಕುಟುಂಬಕ್ಕಾಗಿ ಏನನ್ನೂ ಮಾಡಿಡದ ಕಾರಣಕ್ಕೆ ಟಿಪ್ಪು ವಂಶಸ್ಥರು ಇಂದಿಗೂ ಕೊಲ್ಕತ್ತಾದಲ್ಲಿ ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆಂದು ಶಿವಸುಂದರ್ ಹೇಳಿದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿ, ಜನಪರ ಆಡಳಿತ ನಡೆಸಿದ ಟಿಪ್ಪು ಸುಲ್ತಾನ್ ತನ್ನ ಆಡಳಿತ ಅವಧಿಯಲ್ಲಿದ್ದ ಅಮಾನುಷ ಆಚರಣೆಗಳನ್ನು ರದ್ದು ಮಾಡಿದ್ದ. ತಾರತಮ್ಯ ನೀತಿಯನ್ನು ಕೊನೆಗಾಣಿಸಲು ಮಾಡಿದ ಹೋರಾಟ, ಪರಿಶ್ರಮ ಸ್ಮರಣೀಯ. ಜನಸಾಮಾನ್ಯರಿಗೆ ಸಮಾನ ಹಕ್ಕುಗಳನ್ನು ನೀಡಲು ಪ್ರಯತ್ನಿಸಿರುವುದು ಆತನ ಆಡಳಿತದಿಂದ ತಿಳಿದು ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಇಂದು ಸಂಪತ್ಭರಿತರಾಗಿದ್ದರೆ ಅದಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಕಾರಣ ಎಂದರು.

ಆತನ ಆಡಳಿತ ಅವಧಿಯಲ್ಲಿ ಮಾನವೀಯತೆಯ ಸಂದೇಶವನ್ನು ಸಾರಿದ್ದು, ಮನವಾದಿಗಳಿಗೆ ಆತ ಸಿಂಹಸ್ವಪ್ನವಾಗಿದ್ದ ಪರಿಣಾಮ ಮನುವಾದಿಗಳು ಇಂದಿಗೂ ಟಿಪ್ಪುವನ್ನು ಶತ್ರು ಎಂಬಂತೆ ಕಾಣುತ್ತಿದ್ದಾರೆ. ಟಿಪ್ಪುವಿನ ಆದರ್ಶ, ಕೊಡುಗೆಗಳು ಇಂದಿಗೂ ಕಣ್ಣ ಮುಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಟಿಪ್ಪುವನ್ನು ಜನರೆದುರು ಅಪರಾಧಿಯನ್ನಾಗಿ ಬಿಂಬಿಸುವ ಹುನ್ನಾರ ನಡೆಯುತ್ತಿದೆ ಎಂದ ಅವರು, ಟಿಪ್ಪು ನೈಜ ಚರಿತ್ರೆಯನ್ನು ಸಾರ್ವಜನಿಕರ ಮುಂದೆ ತೆರೆದಿಡಬೇಕಾಗಿದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಗೌಸ್‍ ಮೊಹಿಯುದ್ದೀನ್, ವೀರ ರಾಜನಾದ ಟಿಪ್ಪು ಸುಲ್ತಾನ್ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ದೇಶಕಾಯುವ ಮಹಾನ್ ಸೈನಿಕನಾಗಿದ್ದ ಟಿಪ್ಪುವನ್ನು ಇಂದಿಗೂ ಜನರು ತಮ್ಮ ಮನೆಯ ಮಗನಂತೆ ಜನರು ಕಾಣುತ್ತಿದ್ದಾರೆ. ಇದನ್ನು ಸಹಿಸದ ಮನವಾದಿಗಳು ಆತನ ಚರಿತ್ರೆಯನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಟಿ.ಎಲ್.ಗಣೇಶ್, ಗೌಸ್‍ಮುನೀರ್, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಜ್ಮತ್ ಪಾಶ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದ ವೇಳೆ ಉಪಸ್ಥಿತರಿದ್ದರು.

ದೇಶದಲ್ಲಿ ಮೊದಲ ಬಾರಿಗೆ ಕೆಳ ಸಮುದಾಯದ ಜನರಿಗೆ ಜಮೀನು ಹಂಚಿಕೆ ಮಾಡಿದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ. ಆತನ ಆಡಳಿತದ ವಿರುದ್ಧ ಸಂಚು ನಡೆಸುತ್ತಿದ್ದ ವ್ಯಕ್ತಿಗಳನ್ನು ರಾಜಕೀಯ ಕಾರಣಕ್ಕಾಗಿ ಆತ ಮತಾಂತರ ಮಾಡಿದ್ದಾನೆಯೇ ಹೊರತು ಸಾಮಾಜಿಕ ಕಾರಣಕ್ಕಾಗಿ ಅಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ. ಈಗ ಬಂಡವಾಳಶಾಹಿ, ಕಾರ್ಪೋರೇಟ್ ವಲಯಗಳಿಗೆ ಮಣೆ ಹಾಕುತ್ತಿರುವವರು ಟಿಪ್ಪುವಿನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಟಿಪ್ಪುವನ್ನು ನೆನಪು ಮಾಡಿಕೊಳ್ಳುತ್ತಿರುವವರ ಮೇಲೆ ಬಂಡವಾಳಶಾಹಿಗಳು, ಕಾರ್ಪೋರೇಟ್ ವಲಯಗಳು ಮತ್ತು ಬ್ರಾಹ್ಮಣಶಾಹಿಗಳು ಪರೋಕ್ಷವಾಗಿ ಯುದ್ಧ ಸಾರಿದ್ದಾರೆ. ಇದನ್ನು ಹಿಮ್ಮೆಟ್ಟಿಸಲು ನಮಗೆ ಟಿಪ್ಪುವಿನ ಹೋರಾಟ ಆದರ್ಶವಾಗಬೇಕಿದೆ.

- ಶಿವಸುಂದರ್, ಚಿಂತಕ

ಟಿಪ್ಪು ಸುಲ್ತಾನ್ ಶೋಷಿತರಿಗೆ, ಬಡವರಿಗೆ ಇಷ್ಟವಾಗುತ್ತಾರೆ. ಮೇಲ್ವರ್ಗದವರಿಗೆ ಶತ್ರುವಾಗುತ್ತಾರೆ. ಫ್ಯಾಸಿಸ್ಟ್ ಶಕ್ತಿಗಳ ಅಪವಿತ್ರ ಮೈತ್ರಿ ಟಿಪ್ಪು ಕಾಲದಲ್ಲೂ ಇತ್ತು. ಈಗಲೂ ದೇಶದಲ್ಲಿ ವಿಜೃಂಭಿಸುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಏಳುವ ಬಂಡಾಯಗಳನ್ನು ಸಂಚು ರೂಪಿಸಿ ಹೋರಾಟದ ಧ್ವನಿಗಳನ್ನು ಅಡಗಿಸಲಾಗುತ್ತಿದೆ. ಪ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಶೋಷಿತ ಸಮುದಾಯಗಳು ಒಗ್ಗೂಡಿ ಧ್ವನಿ ಎತ್ತದಿದ್ದಲ್ಲಿ ದೇಶ ಬಂಡವಾಳಿಗರ, ಬ್ರಾಹ್ಮಣಶಾಹಿಗಳ ಕೈಮೇಲಾಗುತ್ತದೆ. ಇಂದಿನ ಯುವಜನತೆ ಟಿಪ್ಪುವಿನ ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತಬೇಕಿದೆ.
- ಶಾಫಿ ಬೆಳ್ಳಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News