ಅಕ್ರಮ ಕಲ್ಲಿದ್ದಲು ವ್ಯವಹಾರ ಪ್ರಕರಣ: 4 ರಾಜ್ಯಗಳಲ್ಲಿ ಸಿಬಿಐ ದಾಳಿ, ಶೋಧ ಕಾರ್ಯಾಚರಣೆ

Update: 2020-11-28 13:08 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ/ ಕೋಲ್ಕತಾ, ನ.28: ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಸ್ವಾಮ್ಯದ ಕಲ್ಲಿದ್ದಲು ಸಂಸ್ಥೆ ಈಸ್ಟರ್ನ್ ಕೋಲ್‌ಫೀಲ್ಡ್ ಲಿ(ಇಸಿಎಲ್)ನ ಕಲ್ಲಿದ್ದಲು ಗಣಿಯಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿ ನಾಲ್ಕು ರಾಜ್ಯಗಳ 45 ಪ್ರದೇಶಗಳಲ್ಲಿ ಸಿಬಿಐ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಿದೆ. 

ಇಸಿಎಲ್‌ಗೆ ಸೇರಿದ ಕುನುಸ್ತೋರಿಯಾ ಮತ್ತು ಕಜೋರಿಯಾ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಕಳ್ಳತನ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಸಂಸ್ಥೆಯ ಇಬ್ಬರು ಜನರಲ್ ಮ್ಯಾನೇಜರ್, ಇಬ್ಬರು ಸಿಬ್ಬಂದಿಗಳು ಹಾಗೂ ಮುಖ್ಯ ಭದ್ರತಾ ಅಧಿಕಾರಿಯ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಾಗಿದೆ. ಪಶ್ಚಿಮ ಬಂಗಾಳದ ಅರ್ಸನಾಲ್ ನಿವಾಸಿ ಅನೂಪ್ ಮಾಝಿ ಅಲಿಯಾಸ್ ಲಾಲಾ ಎಂಬಾತ ಕಲ್ಲಿದ್ದಲು ಗಣಿ ಮಾಫಿಯಾದ ಕಿಂಗ್‌ಪಿನ್ ಎನ್ನಲಾಗಿದೆ. ಈತ ಬಂಗಾಳ- ಜಾರ್ಖಂಡ್ ಗಡಿಭಾಗದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಈತನ ಸಂಸ್ಥೆಯ ವಿರುದ್ಧ ತನಿಖೆಗೆ ಆದೇಶಿಸಿದೆ. ಮಾಝಿ ವಿರುದ್ಧ ಇಸಿಎಲ್‌ಗೆ ಸೇರಿದ ಕಲ್ಲಿದ್ದಲು ಗಣಿಯಿಂದ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸಿರುವುದು ಹಾಗೂ ಕಲ್ಲಿದ್ದಲು ಕಳ್ಳತನ ನಡೆಸಿರುವ ಪ್ರಕರಣವೂ ದಾಖಲಾಗಿದೆ.

ಪಶ್ಚಿಮ ಬಂಗಾಳದ ಅರ್ಸನಾಲ್‌ನಲ್ಲಿ ಮಾಝಿಯ ಮನೆ ಹಾಗೂ ಕಚೇರಿ, ದುರ್ಗಾಪರ, ರಾಣಿಗಂಜ್, ಬಿಷ್ಣುಪುರದ ಹಲವು ಕಚೇರಿ ಮೇಲೆ ಸಿಬಿಐ ದಾಳಿ ನಡೆದಿದೆ. ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರದಲ್ಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾಝಿಯ ಅಕ್ರಮ ಗಣಿಗಾರಿಕೆಯ ವ್ಯವಹಾರದಲ್ಲಿ ಸ್ವಲ್ಪ ಅಂಶ ಪಶ್ಚಿಮ ಬಂಗಾಳದ ಕೆಲವು ರಾಜಕೀಯ ಪಕ್ಷಗಳಿಗೂ ಸಂದಾಯವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ತಿಂಗಳ ಆರಂಭದಲ್ಲಿ ಕೋಲ್ಕತಾಕ್ಕೆ ಭೇಟಿ ನೀಡಿದ್ದ ಸಂದರ್ಭ ಮಾಧ್ಯಮದವರ ಜೊತೆ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ , ಅನೂಪ್ ಮಾಝಿಯ ವಿರುದ್ಧ ತನಿಖಾ ಸಂಸ್ಥೆಗಳು ದಾಳಿ, ಶೋಧ ಕಾರ್ಯಾಚರಣೆ ನಡೆಸಿದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಿಂತೆಪಡುವುದೇಕೆ ? ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News