ದೇವೇಗೌಡರು ಬದುಕಿರುವಾಗಲೇ ಜೆಡಿಎಸ್ ಅಧಿಕಾರಕ್ಕೆ ಬರಬೇಕು: ಕುಮಾರಸ್ವಾಮಿ

Update: 2020-11-28 13:48 GMT

ಬೆಂಗಳೂರು, ನ. 28: ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಅವರು ಬದುಕಿರುವಾಗಲೇ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಚುನಾವಣೆಗೆ ಹಣವೇ ಮುಖ್ಯ ಎನ್ನುವುದಾದರೆ ನನ್ನ ಮನೆ ಮಾರಾಟ ಮಾಡಿ ಹಣ ತರುತ್ತೇನೆ. ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಬೀದಿಯಲ್ಲಿ ನಿಲ್ಲಿಸುವುದಿಲ್ಲ ಎಂದು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ಇಲ್ಲಿನ ಜೆ.ಪಿ.ಭವನದಲ್ಲಿ ಏರ್ಪಡಿಸಿದ್ದ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಇನ್ನೂ ಎರಡು ವರ್ಷ ಕಾಯುವುದಿಲ್ಲ. ಇನ್ನೂ ಎರಡು-ಮೂರು ತಿಂಗಳಲ್ಲಿ ಪಕ್ಷದಲ್ಲಿ ಬದಲಾವಣೆಗಳನ್ನು ಮಾಡಲಿದ್ದೇವೆ ಎಂದು ಹೇಳಿದರು.

ಸಿಎಂ ಆಸೆ ನನಗಿಲ್ಲ: ನಾನು ಮತ್ತೆ ಮುಖ್ಯಮಂತ್ರಿ ಆಗಲು ಪಕ್ಷ ನೂರು ಮೂವತ್ತು ಸ್ಥಾನ ಗೆಲ್ಲಬೇಕಿಲ್ಲ. ಮತ್ತೆ ಮುಖ್ಯಮಂತ್ರಿ ಆಗಿ ಏನೂ ಸಾಧನೆ ಮಾಡಬೇಕಿಲ್ಲ. ವೈಯಕ್ತಿಕ ಆಸೆ- ಆಕಾಂಕ್ಷೆಗಳು ನನಗಿಲ್ಲ ಎಂದ ಸ್ಪಷ್ಟಪಡಿಸಿದ ಅವರು, ಪಕ್ಷ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎಂದರು.

ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷ ಸೋತಿರಬಹುದು. ಆದರೆ, ನಮ್ಮ ಶಕ್ತಿ ಕುಂದಿಲ್ಲ. ಉಪಚುನಾವಣೆಗಳ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಚುನಾವಣೆ ಎಂದರೆ ಸೋಲು-ಗೆಲುವು ಸಹಜ ಎಂದ ಅವರು, ಪಕ್ಷ ಸಂಘಟನೆಗೆ ಒತ್ತು ನೀಡುವ ಮೂಲಕ ಚುನಾವಣೆ ಗೆಲ್ಲಬೇಕು. ಇಲ್ಲದೆ ಇದ್ದರೆ ನಮ್ಮ ಸ್ಥಾನವನ್ನು ತ್ಯಜಿಸೋಣ ಎಂದು ಸಲಹೆ ಮಾಡಿದರು.

ಬಹಳ ಜನ ಜೆಡಿಎಸ್ ಕತೆ ಮುಗಿದು ಹೋಗಿದೆ ಎಂದು ಭಾವಿಸಿದ್ದಾರೆ. ಇದನ್ನು ನಾವು ಹೋಗಲಾಡಿಸಬೇಕು. ಸಭೆಯಲ್ಲಿ ಹಲವು ಮುಖಂಡರು ಉತ್ತಮ ಸಲಹೆ ನೀಡಿದ್ದಾರೆ ಎಂದ ಕುಮಾರಸ್ವಾಮಿ, ಪಕ್ಷದ ಕಾರ್ಯಕರ್ತರ ಮೇಲೆ ವಿಶ್ವಾಸ ಇರಿಸಬೇಕು. ಗೆಲ್ಲುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದರು.

ಪಕ್ಷಕ್ಕೆ 37 ಸ್ಥಾನಗಳು ಬಂದಾಗ ನಾವು ಯಾರ ವಿರುದ್ಧ ಹೋರಾಟ ಮಾಡಿದ್ದೆವೋ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಯಿತು. ಮುಖ್ಯಮಂತ್ರಿ ಆಗಿ ನಾನು ಕಣ್ಣೀರು ಹಾಕಬೇಕಾಯಿತು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸ್ಥಿತಿಯನ್ನು ಗಮನಿಸುತ್ತಿದ್ದೇನೆ ಎಂದು ಹೇಳಿದರು.

ಹಣ ಎಲ್ಲಿದೆ: ಒಂದು ಕಡೆ ಪ್ರವಾಹ, ಮತ್ತೊಂದು ಕಡೆ ಕೋವಿಡ್-19, ಇದರ ನಡುವೆ ನಿಗಮಗಳ ನೇಮಕಾತಿ. ಕೆಲವು ನಿಗಮಗಳಲ್ಲಿ ಹಣವೇ ಇಲ್ಲ. ಯಡಿಯೂರಪ್ಪ ಮಾಡಿದ್ದು ಸರಿ ಎಂದು ಅವರ ಕಾರ್ಯಕರ್ತರು ಹೇಳುತ್ತಾರೆ. ಆದರೆ, ನಾನು ಅವರಂತೆ ಮಾಡಲು ಆಗಲಿಲ್ಲ. ಏಕೆಂದರೆ ನಾನು ಮೈತ್ರಿ ಸರಕಾರದ ಸಿಎಂ ಆಗಿದ್ದೆ ಎಂದು ಸ್ಪಷ್ಟನೆ ನೀಡಿದರು.

ಮುಂದಿನ ಚುನಾವಣೆಗಳಲ್ಲಿ ನಾವು ನಮ್ಮ ಶಕ್ತಿ ತೋರಿಸಬೇಕಿದೆ. ಹಲವು ಕ್ಷೇತ್ರಗಳಲ್ಲಿ ನಾವು ಕೇವಲ ಎರಡರಿಂದ ಮೂರು ಸಾವಿರ ಮತಗಳಲ್ಲಿ ಸೋತಿದ್ದೇವೆ. ಇದು ಕಾಂಗ್ರೆಸ್‍ನವರ ಕುತಂತ್ರದಿಂದ. ನಮ್ಮನ್ನು ಬಿಜೆಪಿಯ 'ಬಿ' ಟೀಮ್ ಎಂದು ಬಿಂಬಿಸಲಾಯಿತು ಎಂದು ಟೀಕಿಸಿದರು.

ಶಿರಾ ಕ್ಷೇತ್ರದಲ್ಲಿ ಪಕ್ಷದ ಸೋಲನ್ನು ನಾನು ಇವತ್ತಿಗೂ ಒಪ್ಪಿಕೊಳ್ಳುವುದಿಲ್ಲ. ನಮ್ಮಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಶಕ್ತಿ ಏನಿದೆ ಎಂದು ನನಗೆ ಅರಿವಿದೆ. ಕೋವಿಡ್ ಕಾರಣದಿಂದ ನಾನು ಕೆಲವು ಕಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದರು.

ಮುಂದಿನ ದಿನಗಳನ್ನು ಪಕ್ಷದ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಬೇಕು. ಎರಡು ಬಾರಿ ಸಿಎಂ ಆಗಿದ್ದೇನೆ. ಸಂಸದ ಪ್ರಜ್ವಲ್ ಮತ್ತು ನಿಖಿಲ್ ಯುವಕರಿಗೆ ಆದ್ಯತೆ ಕೊಡಿ ಎಂದು ಕೋರಿದ್ದಾರೆ. ಅದಕ್ಕೂ ನಾನು ತಯಾರಿದ್ದೇನೆ. ಮೂವತ್ತು ಜಿಲ್ಲೆಗಳ ಯುವ ಜನತಾದಳ ಅಧ್ಯಕ್ಷರ ಸಭೆ ಕರೆದರೆ ನಾನು ಬರುತ್ತೇನೆ. ಹೊಸಬರಿಗೆ ಅವಕಾಶ ನೀಡೋಣ ಎಂದು ಹೇಳಿದರು.

ಬಿಜೆಪಿ ಲೂಟಿ: ನಾನು ಸಿಎಂ ಆಗಿದ್ದಾಗ ನನ್ನ ಮಗ ನಿಖಿಲ್ ಒಮ್ಮೆಯೂ ವಿಧಾನಸೌಧಕ್ಕೆ ಬರಲಿಲ್ಲ. ಆದರೆ, ಇದೀಗ ಬಿಜೆಪಿ ವರ್ಗಾವಣೆ ಹೆಸರಲ್ಲಿ ಹಣ ಲೂಟಿ ಮಾಡುತ್ತಿದೆ. ಯಾವ ಪಕ್ಷವೂ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಹೋದರರ ಸಮಾಗಮ: ಇದೇ ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಪಕ್ಷದ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕೂತು ಕಾರ್ಯಕರ್ತರ ಗಮನ ಸೆಳೆದರು. "ಯುವಕರಿಗೆ ಪಕ್ಷದಲ್ಲಿ ಆದ್ಯತೆ ನೀಡಬೇಕು. ಆ ಮೂಲಕ ಗ್ರಾಮ ಪಂಚಾಯತ್ ಸೇರಿದಂತೆ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಆಸ್ಥೆ ವಹಿಸಬೇಕು' ಎಂದು ತಿಳಿಸಿದರು.

ನಮ್ಮ ಕೈ-ಕಾಲು ಇನ್ನೂ ಗಟ್ಟಿಯಾಗಿವೆ. ಇನ್ನೂ ಸುಮ್ಮನೆ ಕೂರುವುದಿಲ್ಲ. ಪಕ್ಷದ ಮುಖಂಡರು ನಾವೇನು ಮಾಡಬೇಕು ಎಂದು ಸಲಹೆ ಮಾಡಿದರೆ ಪಕ್ಷ ಸಂಘಟನೆಗೆ ಕೆಲಸ ಮಾಡುತ್ತೇವೆ. ನೂರಾ ಐವತ್ತು ಸ್ಥಾನಗಳನ್ನು ಗೆಲ್ಲುವ ಶಕ್ತಿ ನಮಗಿದೆ. ಅನ್ಯ ಪಕ್ಷದವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಅಗತ್ಯವಿಲ್ಲ.

-ಪ್ರಜ್ವಲ್ ರೇವಣ್ಣ, ಸಂಸದ ಹಾಗೂ ಜೆಡಿಎಸ್ ಯುವ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News