ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ: ಸಚಿವ ಈಶ್ವರಪ್ಪ

Update: 2020-11-28 14:31 GMT

ಬೆಳಗಾವಿ, ನ.28: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಅನ್ನು ಕುರುಬರಿಗೆ ಕೊಡುತ್ತೇವೋ, ಲಿಂಗಾಯತರಿಗೆ ಕೊಡುತ್ತೇವೋ, ಒಕ್ಕಲಿಗರಿಗೆ ಕೊಡುತ್ತೇವೋ ಅಥವಾ ಬ್ರಾಹ್ಮಣರಿಗೆ ಕೊಡುತ್ತೇವೊ ಗೊತ್ತಿಲ್ಲ. ಆದರೆ, ಮುಸ್ಲಿಮರಿಗಂತೂ ಕೊಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಹಿಂದುತ್ವದ ಕೇಂದ್ರ. ಆದುದರಿಂದ, ಇಲ್ಲಿ ಹಿಂದುತ್ವವಾದಿಗಳಿಗೆ ಟಿಕೆಟ್ ಕೊಡುತ್ತೇವೆ. ರಾಯಣ್ಣನ ಶಿಷ್ಯಂದಿರಿಗೆ ಕೊಡುತ್ತೇವೋ, ಚೆನ್ನಮ್ಮನ ಶಿಷ್ಯಂದಿರಿಗೆ ಕೊಡುತ್ತೇವೋ, ಶಂಕರಾಚಾರ್ಯರ ಶಿಷ್ಯಂದಿರಿಗೆ ಕೊಡುತ್ತೇವೋ ಗೊತ್ತಿಲ್ಲ ನನಗೆ. ಆದರೆ, ಮುಸ್ಲಿಮರಿಗೆ ಬಿಜೆಪಿಯಿಂದ ಟಿಕೆಟ್ ಕೊಡುವ ಪ್ರಶ್ನೆಯೇ ಬರಲ್ಲ ಎಂದರು.

ಬಿಜೆಪಿಯಲ್ಲಿ ಕುರುಬ, ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಅಂತ ಪ್ರಶ್ನೆ ಇಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡುತ್ತೇವೆ. ಜನರ ಮಧ್ಯೆ ಇದ್ದು ಗೆಲ್ಲುವಂತಹವರನ್ನು ಹುಡುಕಿ ಅಭ್ಯರ್ಥಿಯನ್ನಾಗಿಸಿ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ. ಕಾಂಗ್ರೆಸ್ ಪಕ್ಷದವರು ಕುರುಬ ಸಮಾಜದವರಿಗೆ ಬಹಳ ಟಿಕೆಟ್‍ಗಳನ್ನು ಕೊಟ್ಟಿದ್ದರು. ಅದರಲ್ಲಿ ಎಷ್ಟು ಜನ ಗೆದ್ದಿದ್ದಾರೆ? ನಾನು ಕುರುಬರಿಗೆ ಮೂರು ಟಿಕೆಟ್ ಕೊಟ್ಟಿದ್ದೇನೆ. ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲು ಟಿಕೆಟ್ ಕೊಡಬೇಕೆ ಎಂದು ಅವರು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವರ್ಚಸ್ಸು ಎಲ್ಲಿದೆ ಎಂದು ಹುಡುಕಬೇಕಿದೆ. ಇತ್ತೀಚೆಗೆ ನಡೆದ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸೆ ಇಲ್ಲ. ಇನ್ನು ಪಾಪ ಸಿದ್ದರಾಮಯ್ಯ ಎಲ್ಲಿರುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಈಗಲೂ ಮುಖ್ಯಮಂತ್ರಿ, ಮುಂದಿನ ಚುನಾವಣೆ ಬಳಿಕವೂ ನಾನೇ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಈಗ ಎಲ್ಲಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಸಿದ್ದರಾಮಯ್ಯ ರಾಜಕಾರಣದಲ್ಲಿಯೆ ಇರುತ್ತಿರಲಿಲ್ಲ. ರಾಜಕೀಯವಾಗಿ ಇನ್ನು ನಾನು ಬದುಕಿದ್ದೇನೆ ಎಂದು ತೋರಿಸಿಕೊಳ್ಳೊಕೆ ಅವರು ಏನೇನೋ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News