ವಕ್ಫ್ ಬೋರ್ಡ್ ಅವ್ಯವಹಾರ ಸಿಬಿಐ ತನಿಖೆಗೆ ವಹಿಸುವಂತೆ ಪ್ರಧಾನಿಗೆ ಅನ್ವರ್ ಮಾಣಿಪ್ಪಾಡಿ ಮನವಿ

Update: 2020-11-28 14:48 GMT

ಬೆಂಗಳೂರು, ನ.28: ರಾಜ್ಯ ವಕ್ಫ್ ಬೋರ್ಡ್‍ನಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ.ಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಹಲವಾರು ದೂರುಗಳು ಬರುತ್ತಿವೆ. ಆದುದರಿಂದ, ವಕ್ಫ್ ಬೋರ್ಡ್ ಅನ್ನು ಅಮಾನತ್ತಿನಲ್ಲಿಟ್ಟು, ಅವ್ಯವಹಾರಗಳ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮನವಿ ಮಾಡಿದ್ದಾರೆ.

ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಗೆ ಪತ್ರ ಬರೆದಿರುವ ಅನ್ವರ್ ಮಾಣಿಪ್ಪಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೀಂದ್ರ ಜೈನ್‍ಗೂ ಪತ್ರದ ಪ್ರತಿಗಳನ್ನು ಕಳುಹಿಸಿಕೊಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯ ಗಮನ ಸೆಳೆದಿದ್ದಾರೆ.

ಐತಿಹಾಸಿಕ ನಗರಿ ಮೈಸೂರಿನಲ್ಲಿ 1995ರ ಎಪ್ರಿಲ್ 1ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವ ಪ್ರಮುಖ ವಕ್ಫ್ ಆಸ್ತಿಯಾದ ಗೌಸಿಯಾ ಮಂಝಿಲ್, ಅಪ್ನಾ ಘರ್, ರಿಫಾಯಿ ಕಮರ್ಷಿಯಲ್ ಕಾಂಪ್ಲೆಕ್ಸ್, ಫುಲ್ವಾರಿ ಹಾಗೂ ಹೊಸ ಸಯ್ಯಾಜಿ ರಸ್ತೆಯಲ್ಲಿರುವ ಖಾಲಿ ಜಾಗ ಮತ್ತು ಅಕ್ಬರ್ ರಸ್ತೆಯಲ್ಲಿರುವ ಮಸ್ಜಿದೆ ಬಾಗ್ಬಾನ್ ಎದುರು ಇರುವ ಆಸ್ತಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಅಝೀಝ್ ಸೇಠ್ ಹಾಗೂ ಅವರ ಮಗ ಹಾಲಿ ಶಾಸಕ ತನ್ವೀರ್ ಸೇಠ್ ವಿರುದ್ಧ ಅವ್ಯವಹಾರದ ಆರೋಪಗಳು ಕೇಳಿ ಬಂದಿವೆ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ರಾಜ್ಯ ವಕ್ಫ್ ಬೋರ್ಡ್ ರಿಫಾ ಉಲ್ ಮುಸ್ಲಿಮೀನ್ ವಕ್ಫ್ ಸಂಸ್ಥೆಗೆ 2004ರ ಫೆ.7ರಂದು ಒಂದು ವರ್ಷದ ಅವಧಿಗೆ ಸೀಮಿತವಾಗಿ ಅಡಾಕ್ ಸಮಿತಿಯನ್ನು ರಚನೆ ಮಾಡಿತ್ತು. ಆದರೆ, ಕಾನೂನು ಉಲ್ಲಂಘಿಸಿ ಈ ಸಂಸ್ಥೆಗೆ ಚುನಾವಣೆಯನ್ನು ನಡೆಸದೆ ಅಡಾಕ್ ಸಮಿತಿಯ ಅಧಿಕಾರಾವಧಿಯನ್ನು 7 ವರ್ಷಕ್ಕೆ ವಿಸ್ತರಿಸಿತು. 2011ರ ಜ.31ರಂದು ಚುನಾವಣಾಧಿಕಾರಿ ನೇಮಕ ಮಾಡಿ, ಅದೇ ವರ್ಷ ಜೂ.26ರಂದು ತನ್ವೀರ್ ಸೇಠ್ ಅಧ್ಯಕ್ಷತೆಯಲ್ಲಿ ನೂತನ ಆಡಳಿತ ಸಮಿತಿ ರಚನೆಯಾಯಿತು ಎಂದು ಅವರು ವಿವರಿಸಿದ್ದಾರೆ.

ರಿಫಾ ಉಲ್ ಮುಸ್ಲಿಮೀನ್ ಸಂಸ್ಥೆಯು 2008ರಲ್ಲಿ ಕೆನರಾ ಬ್ಯಾಂಕಿನಿಂದ 8.50 ಕೋಟಿ ರೂ.ಗಳನ್ನು ಸಾಲವಾಗಿ ಪಡೆದುಕೊಂಡಿದೆ. ಈ ಮೊತ್ತಕ್ಕೆ ಯಾವುದೆ ಲೆಕ್ಕಗಳು ಇಲ್ಲ, ಬ್ಯಾಂಕಿಗೆ ಮರುಪಾವತಿಯನ್ನು ಮಾಡಿಲ್ಲ. ಇದೀಗ ಈ ಸಾಲದ ಮೊತ್ತವು 32 ಕೋಟಿ ರೂ.ಗಳಿಗೆ ತಲುಪಿದೆ. ಇದೀಗ ಬ್ಯಾಂಕ್ ವಕ್ಫ್ ಆಸ್ತಿಯನ್ನು(ಕಮರ್ಷಿಯಲ್ ಕಾಂಪ್ಲೆಕ್ಸ್, ಈದ್ಗಾ ಅಥವಾ ಮಸೀದಿಯ ಜಾಗ) ಹರಾಜು ಹಾಕಲು ನೋಟಿಸ್ ಜಾರಿ ಮಾಡಿದೆ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ರಾಜ್ಯ ವಕ್ಫ್ ಬೋರ್ಡ್‍ನ ನಿರ್ಲಕ್ಷತನ ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಸರಕಾರವು ರಾಜ್ಯದಲ್ಲಿ ನಡೆದಿರುವ ಸುಮಾರು 2.3 ಲಕ್ಷ ಕೋಟಿ ರೂ.ವಕ್ಫ್ ಹಗರಣದ ವರದಿಯನ್ನು ಪಡೆದುಕೊಂಡಿದೆ. ಈ ಎಲ್ಲ ಅವ್ಯವಹಾರಗಳಿಗೆ ವಕ್ಫ್ ಬೋರ್ಡ್ ಪ್ರಮುಖ ಕಾರಣವಾಗಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News