ಒಡಿಶಾ ವಿಧಾನಸಭೆಯ ಸಮೀಪ ತಾಯಿ-ಮಗನ ಆತ್ಮಾಹುತಿ ಯತ್ನ

Update: 2020-11-28 16:14 GMT
ಸಾಂದರ್ಭಿಕ ಚಿತ್ರ

ಭುವನೇಶ್ವರ,ನ.28: ತಾಯಿ ಮತ್ತು ಮಗ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಹಾಲಿ ಅಧಿವೇಶನದಲ್ಲಿರುವ ಒಡಿಶಾ ವಿಧಾನಸಭೆಯ ಬಳಿ ನಡೆದಿದೆ. ಇದು ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ಸರಕಾರದ ಗಮನವನ್ನು ಸೆಳೆಯಲು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಇಂತಹ ಮೂರನೇ ಘಟನೆಯಾಗಿದೆ.

ಜಗತಸಿಂಗ್‌ಪುರ ಜಿಲ್ಲೆಯ ಕುಜಂಗ್ ನಿವಾಸಿಗಳಾದ ಸುಲೋಚನಾ ದಾಸ್ ಮತ್ತು ಆಕೆಯ ಪುತ್ರ ಸುಬ್ರತ್ ದಾಸ್ ವಿಧಾನಸಭೆಗೆ ಸಮೀಪದ ಐಜಿ ಪಾರ್ಕ್ ಬಳಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದು,ಕರ್ತವ್ಯನಿರತ ಭದ್ರತಾ ಸಿಬ್ಬಂದಿಗಳು ಅವರು ಬೆಂಕಿ ಹಚ್ಚಿಕೊಳ್ಳುವುದನ್ನು ತಡೆದಿದ್ದಾರೆ.

ಜಗತಸಿಂಗ್‌ಪುರ ಪೊಲೀಸರಿಂದ ನ್ಯಾಯ ಪಡೆಯಲು ವಿಫಲರಾದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಪೊಲೀಸರ ವಶದಲ್ಲಿರುವ ಸುಲೋಚನಾ ಮತ್ತು ಸುಬ್ರತ್ ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಸುಲೋಚನಾರ ಇನ್ನೋರ್ವ ಪುತ್ರ ಅಮೃತ ದಾಸ್ 2019,ಜು.20ರಂದು ಕೊಲ್ಲಲ್ಪಟ್ಟಿದ್ದರು. ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ತನಿಖೆಯನ್ನು ಸಮಾಪನಗೊಳಿಸಿದ್ದರು.

‘ನನ್ನ ಸೋದರ ಕೊಲ್ಲಲ್ಪಟ್ಟಿದ್ದಾನೆ ಎನ್ನುವುದು ನನಗೆ ಗೊತ್ತು,ಆದರೆ ನ್ಯಾಯವನ್ನು ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ. ನಾವು ಹಲವಾರು ವೇದಿಕೆಗಳನ್ನು ಸಂಪರ್ಕಿಸಿದ್ದೆವು,ಆದರೆ ನಮಗೆ ಸಿಕ್ಕಿದ್ದು ಹತಾಶೆ ಮಾತ್ರ ’ಎಂದು  ಪೊಲೀಸರು ತನ್ನನ್ನು ಕರೆದೊಯ್ಯುವ ಮುನ್ನ ಸುಬ್ರತ್ ಸುದ್ದಿಗಾರರಿಗೆ ತಿಳಿಸಿದರು.

ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಹೆಸರಿನಲ್ಲಿ ಸಹಕಾರ ಸಂಘದಿಂದ ಸಾಲವನ್ನು ಪಡೆದುಕೊಂಡು ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ನ್ಯಾಯ ದೊರಕಿಲ್ಲ ಎಂದು ಆರೋಪಿಸಿ ಮೂವರು ರೈತರು ಶುಕ್ರವಾರ ವಿಧಾನಸಭೆಯ ಪ್ರವೇಶದ್ವಾರದ ಬಳಿ ಆತ್ಮಾಹುತಿಗೆ ಯತ್ನಿಸಿದ್ದರು. ಇದಕ್ಕೂ ಮುನ್ನ ಮಂಗಳವಾರ ನಾರಾಯಣಗಢ ಜಿಲ್ಲೆಯ ದಂಪತಿ ಜು.14ರಂದು ಅಪಹರಿಸಲ್ಪಟ್ಟು ಕೊಲೆಯಾಗಿರುವ ತಮ್ಮ ಅಪ್ರಾಪ್ತವಯಸ್ಕ ಪುತ್ರಿಗೆ ನ್ಯಾಯವನ್ನು ಕೋರಿ ವಿಧಾನಸಭೆಯ ಎದುರು ಮೈಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಇವೆರಡು ಘಟನೆಗಳ ಹಿನ್ನೆಲೆಯಲ್ಲಿ ವಿಧಾನಸಭಾ ಆವರಣದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಕಾರಣದಿಂದ ವಿಧಾನಸಭೆಯ ಪ್ರವೇಶದ್ವಾರದ ಬಳಿ ತಲುಪಲು ಸಾಧ್ಯವಾಗದೆ ಸುಲೋಚನಾ ಮತ್ತು ಸುಬ್ರತ್ ಸಮೀಪದ ಪಾರ್ಕ್‌ನಲ್ಲಿ ಆತ್ಮಾಹುತಿಗೆ ಯತ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News