ನಾನು ಗುಂಪುಗಾರಿಕೆ ಮಾಡುವುದನ್ನು ಬಿಟ್ಟಿದ್ದೇನೆ: ರಮೇಶ್ ಜಾರಕಿಹೊಳಿ

Update: 2020-11-28 15:44 GMT

ಬೆಂಗಳೂರು, ನ.28: ನಾನು ಸಾಮೂಹಿಕ ನಾಯಕತ್ವದಿಂದಲೇ ಬಿಜೆಪಿಗೆ ಬಂದಿದ್ದೇನೆ, ನಾನು ನಾಯಕನಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ಹೇಳಿದ್ದಾರೆ.

ಶನಿವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ತಮ್ಮ ವಿರುದ್ಧದ ಪ್ರತ್ಯೇಕ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ನಾಯಕ ಅಂತ ಎಲ್ಲಿಯೂ ಹೇಳಿಲ್ಲ. ಸಾಮೂಹಿಕ ನಾಯಕತ್ವದಲ್ಲೇ ನಾವು ಬಿಜೆಪಿಗೆ ಬಂದಿದ್ದು, ನಾನು 17 ಶಾಸಕರ ನಾಯಕ ನಾನಲ್ಲ. ಸಭೆಯಲ್ಲಿ ನನ್ನ ಬಗ್ಗೆ ಚರ್ಚೆ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಸಭೆ ನಡೆಸಿದವರೇ ಬಂದು ಹೇಳಲಿ. ನಾನು ಅವರ ಬಳಿ ಸಭೆ ಬಗ್ಗೆ ಕೇಳಿ ಸಣ್ಣನವನಾಗಲ್ಲ. ಅವರು ನನ್ನ ಬಗ್ಗೆ ಏನೇ ಹೇಳಿದರೂ ನಾನು ಅವರ ಪರ ಹೋರಾಟ ನಡೆಸುವುದನ್ನು ಬಿಡುವುದಿಲ್ಲ ಎಂದು ನುಡಿದರು.

ಅನಗತ್ಯವಾಗಿ ನಮ್ಮ ವಿರುದ್ಧದ ಸಭೆಗಳು ನಡೆಸುವುದು ನಿಲ್ಲಬೇಕು. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಇಲ್ಲಿ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಪರ್ಯಾಯ ಸಭೆಗಳು ನಡೆಯುವುದು ನಿಲ್ಲಬೇಕು ಎಂಬುದು ನನ್ನ ಆಗ್ರಹ ಎಂದು ಮಿತ್ರ ಮಂಡಳಿ ಸಹವರ್ತಿಗಳಿಗೆ ಸಚಿವರು ತಿರುಗೇಟು ನೀಡಿದರು.

ಸಮ್ಮಿಶ್ರ ಸರಕಾರದಿಂದ ಬೇಸತ್ತು ರಾಜೀನಾಮೆ ನೀಡಿ, ವಾಪಸ್ ಗೆದ್ದು ಬಂದಿರುವ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನನ್ನ ಒತ್ತಾಯವಾಗಿದೆ. ಕೆಲವೊಂದು ವಿಚಾರವನ್ನು ನಾನು ಬಹಿರಂಗವಾಗಿ ಹೇಳಿಕೆ ನೀಡಲಾಗಲ್ಲ. ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಜತೆ ಚರ್ಚೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ನಾನು ಗುಂಪುಗಾರಿಕೆ ಮಾಡುವುದನ್ನು ಬಿಟ್ಟಿದ್ದೇನೆ. ನನ್ನ ಇಲಾಖೆ ವತಿಯಿಂದ ಆಗಬೇಕಾದ ಕೆಲಸಗಳ ಕುರಿತು ಗಮನ ನೀಡುತ್ತೇನೆ. 2023ರ ಚುನಾವಣೆಗೆ ನಾನು ಇಲಾಖೆಯಲ್ಲಿ ಒಳ್ಳೆ ಕೆಲಸ ಮಾಡಿ ಹೆಸರು ಮಾಡಬೇಕು ಎಂದ ಅವರು, ದಿಲ್ಲಿಯಲ್ಲಿ ಸಿ.ಟಿ.ರವಿ ಕಚೇರಿ ಪೂಜೆಗೆ ಹೋಗಿದ್ದೇನೆ. ಈಗ ಊರಿಗೆ ಹೋಗ್ತಾ ಇದ್ದೇನೆ. ಅಧಿವೇಶನ ದಿನ ಬೆಂಗಳೂರಿಗೆ ಬರುತ್ತೇನೆ. ಇಂದು ಸಿಎಂ ಭೇಟಿ ಮಾಡಿ ದೆಹಲಿಯ ಭೇಟಿ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

ನಾವು ಬೆಳಗಾವಿಯವರು, ನೇರವಂತರು: ಇತ್ತೀಚೆಗೆ ದಿಲ್ಲಿಗೆ ಹೋದ ಸಚಿವರು ಎನ್.ಆರ್.ಸಂತೋಷ್ ವಿಡಿಯೋ ಸಿಡಿ ಪಕ್ಷದ ಹೈಕಮಾಂಡ್ ಗೆ ನೀಡಿದ್ದಾರೆ ಎಂಬುದರ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಡಿಕೆಶಿ ಯಾವ ಸಚಿವರ ಬಗ್ಗೆ ಹೇಳಿದ್ರೋ ಗೊತ್ತಿಲ್ಲ. ದಿಲ್ಲಿಗೆ ನಾನೊಬ್ಬನೇ ಹೋಗಿರಲಿಲ್ಲ. ಆರ್.ಅಶೋಕ್ ಸಹ ಹೋಗಿದ್ದರು ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News