ಬಿಎಸ್‌ವೈ ಸಿಎಂ ಆಗಿ ಮುಂದುವರಿದರೆ ಸುವರ್ಣಸೌಧ ಮಹಾರಾಷ್ಟ್ರಕ್ಕೆ ಮಾರುತ್ತಾರೆ: ವಾಟಾಳ್ ನಾಗರಾಜ್

Update: 2020-11-28 16:18 GMT

ಬೆಂಗಳೂರು, ನ.28: ಮರಾಠ ಅಭಿವೃದ್ಧಿ ನಿಗಮವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ.5 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಅನ್ನು ತಾಕತ್ತಿದ್ದಲ್ಲಿ ನಿಲ್ಲಿಸಿ ಎಂದು ಮುಖ್ಯಮಂತ್ರಿಗೆ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರಂನಲ್ಲಿನ ಐಟಿಐ ಬಸ್ ನಿಲ್ದಾಣದಿಂದ ಬಿಬಿಎಂಪಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿ, ರಸ್ತೆ ತಡೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 5 ಕರ್ನಾಟಕ ಬಂದ್ ನಡೆಯುತ್ತದೆ. ತಾಕತ್ತಿದ್ದರೆ ಬಂದ್ ನಿಲ್ಲಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಸವಾಲು ಹಾಕಿದರು.

ಇದುವರೆಗೂ ನಡೆಯದ ರೀತಿಯಲ್ಲಿ ಬಂದ್ ನಡೆಯತ್ತದೆ, ಸಿನಿಮಾ ಆಟೋ ರಿಕ್ಷಾ, ಹೋಟೆಲ್ ಅಂಗಡಿ ಮುಂಗಟ್ಟು ಖಾಸಗಿ ಶಾಲಾ ಕಾಲೇಜುಗಳು ಎಲ್ಲ ಸಂಪೂರ್ಣ ಬಂದ್ ಆಗಿರುತ್ತದೆ. ಬಂದ್‍ಗೆ 1,400 ಕನ್ನಡ ಪರ ಸಂಘಟನೆಗಳ ಬೆಂಬಲ ಸೂಚಿಸಿದ್ದಾರೆ. ಮನೆಯಿಂದ ಯಾರು ಹೊರಗೆ ಬರಬೇಡಿ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡವನ್ನು ಹಾಳು ಮಾಡುವುದರಲ್ಲಿ ಮೊದಲಿಗರಾಗಿದ್ದಾರೆ. ಯಾವ ಜಾತಿಯವರೂ ಅವರನ್ನು ನಂಬಬೇಡಿ. ತಿರುವಳ್ಳುವರ್ ಪ್ರತಿಮೆ ತಂದು ತಮಿಳರ ಪರವಾಗಿ ನಿಂತಿರುವ ಅವರು ಈಗ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವ ಮೂಲಕ ಮರಾಠಿ ಭಾಷಿಕರ ಪರವಾಗಿ ನಿಂತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿದರೆ ಬೆಳಗಾವಿ ಸುವರ್ಣ ಸೌಧ ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಾರೆ ಎಂದು ಹೇಳಿದರು.

ಕಾರವಾರ, ನಿಪ್ಪಾಣಿಗೆ, ಬೆಳಗಾವಿ ಮಹರಾಷ್ಟ್ರದ ಪಾಲಾಗುತ್ತದೆ. ಈಗಾಗಲೇ ಬಳ್ಳಾರಿ ಜಿಲ್ಲೆಯನ್ನು ಎರಡು ಭಾಗಗಳಾಗಿ ವಿಭಜಿಸಿದ್ದಾರೆ. ಬಸವಕಲ್ಯಾಣ ಉಪ ಚುನಾವಣೆ ಗೆಲ್ಲಲು ಮಂತ್ರಿ ಮಂಡಲ, ಶಾಸಕರ ಸಭೆಯನ್ನು ಕರೆಯದೆ ಪ್ರಾಧಿಕಾರ ರಚನೆ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಂದ್‍ಗೆ ಬೆಂಬಲ ಸೂಚಿಸಿ ಬಹಿರಂಗವಾಗಿ ಬಂದು ಪ್ರತಿಭಟನೆಗೆ ಇಳಿದು ಹೋರಾಟ ನಡೆಸಬೇಕು. ಅದೆ ರೀತಿ ಬಂದ್ ನಂತರವೂ ಮರಾಠ ಅಭಿವೃದ್ಧಿ ಪ್ರಾಧಿಕಾರ ಮುಂದುವರಿಸಿದರೆ ಜೈಲ್ ಭರೋ ಚಳುವಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಿಬಿಎಂಪಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ ತಡೆದಿದ್ದ ವಾಟಾಳ್ ನಾಗರಾಜ್ ಹಾಗೂ ಪ್ರತಿಭಟನಾಕಾರರನ್ನು ಬಂಧಿಸಿದರು. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದ್ ಬಸ್ತ್ ಆಯೋಜಿಸಲಾಗಿತ್ತು. ಹೆದ್ದಾರಿ ತಡೆದಿದ್ದರಿಂದ ಕೆಲಕಾಲ ಹೆದ್ದಾರಿಯ ಎರಡೂ ಕಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News