ಕರ್ತವ್ಯ ಲೋಪ ಆರೋಪ: ಪಿಎಸ್ಸೈ ಸೇರಿ 11 ಪೊಲೀಸ್ ಪೇದೆಗಳ ಅಮಾನತು

Update: 2020-11-28 16:30 GMT
ಅಕ್ಷಯ್ ಮಚೀಂದ್ರ

ಚಿಕ್ಕಮಗಳೂರು, ನ.28: ಕರ್ತವ್ಯ ಲೋಪದ ಆರೋಪದಡಿ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಜಿಲ್ಲೆಯ ಓರ್ವ ಪಿಎಸ್ಸೈ ಸೇರಿದಂತೆ 11 ಮಂದಿಯನ್ನು ಪೋಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಲ್ಲೇನಹಳ್ಳಿ ಮೂಲದ ವ್ಯಕ್ತಿಯೊಬ್ಬನನ್ನು ಪ್ರಕರಣವೊಂದರಲ್ಲಿ ಬಂಧಿಸಿ ಆತನ ಎಟಿಎಂ, ಪೆಟಿಯಂ ಮತ್ತು ಆತನ ಸಂಬಂಧಿಕರಿಂದ 3.40 ರೂ. ಪಡೆದುಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಸುಕೇಶ್, ಪೊಲೀಸ್ ಕಾನ್‍ಸ್ಟೇಬಲ್ಗಳಾದ ಲಕ್ಷ್ಮಣ, ಯುವರಾಜ, ಪ್ರದೀಪ ಎಂಬವರನ್ನು ಎಸ್ಪಿ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಹಲಸುಮನೆ ಗ್ರಾಮದ ದಲಿತ ಯುವಕರನ್ನು ಅನಧಿಕೃತವಾಗಿ ಠಾಣೆಯಲ್ಲಿ ಕೂರಿಸಿ ಅವರ ಮೇಲೆ ದೌರ್ಜನ್ಯ ನಡೆಸಿರುವ ಆರೋಪದಡಿಯಲ್ಲಿ ಆಲ್ದೂರು ಠಾಣೆಯ ಪೋಲೀಸ್ ಕಾನ್‍ಸ್ಟೇಬಲ್ಗಳಾದ ಸ್ವಾಮಿ, ಶಿವಕುಮಾರ್, ಅರುಣ್ ಕುಮಾರ್ ಹಾಗೂ ಚಾಲಕ ಅರುಣ್ ಎಂಬವರನ್ನು ಕರ್ತವ್ಯಲೋಪದಡಿಯಲ್ಲಿ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇನ್ನು ಶೃಂಗೇರಿಯ ಪೋಲಿಸ್ ಠಾಣೆಯ ನಾಗಪ್ಪ ತುಕ್ಕಣನವರ ಎಂಬ ಪೋಲಿಸ್ ಪೇದೆ ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಪೋಲಿಸ್ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಬೇರೊಬ್ಬ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಕೇಂಗೇರಿ ಪೋಲಿಸರು ಆತನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ಚಿಕ್ಕಮಗಳೂರು ವರಿಷ್ಠಾಧಿಕಾರಿಗಳಿಗೆ ನೀಡಿದ ವರದಿಯನ್ನಾಧರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಕೈಮರ ತನಿಖಾ ಠಾಣೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗ್ರಾಮಾಂತರ ಪೋಲಿಸ್ ಠಾಣೆಯ ಕಾನ್‍ಸ್ಟೇಬಲ್ ರಾಜಾನಾಯ್ಕ ಹಾಗೂ ಹಾಲೇನಹಳ್ಳಿ ತನಿಖಾ ಠಾಣೆಗೆ ಕರ್ತವ್ಯಕ್ಕೆ ನಿಯೋಜನೆಗೊಳಿಸಿದ್ದ ಮಂಗಲ್ ದಾಸ್ ಎಂಬ ಪೇದೆಯನ್ನು ಕರ್ತವ್ಯಲೋಪದಡಿಯಲ್ಲಿ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News