ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಪ್ರಕ್ರಿಯೆಗೆ ತಡೆ

Update: 2020-11-28 16:49 GMT

ಬೆಂಗಳೂರು, ನ.28: 2020-25 ನೇ ಸಾಲಿನ ಅವಧಿಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ಸಂಬಂಧ ನಿಗದಿಪಡಿಸಿದ್ದ ಚುನಾವಣೆಯನ್ನು ಜಿಲ್ಲಾ ನೋಂದಣಾಧಿಕಾರಿಯ ನಿರ್ದೇಶನದ ಮೇರೆಗೆ ರಾಜ್ಯ ಚುನಾವಣಾಧಿಕಾರಿ ತಡೆ ಹಿಡಿದಿದ್ದು, ಮುಂದಿನ ಆದೇಶದವರೆಗೂ ಚುನಾವಣೆ ನಡೆಸಿದಂತೆ ಸ್ಥಗಿತಗೊಳಿಸಿ ಆದೇಶಿಸಿದ್ದಾರೆ.

ಸಂಘದ ತಾಲೂಕು ಕಾರ್ಯಕಾರಿ ಸಮಿತಿಗೆ ನ. 26ರಿಂದ ಡಿ. 6ರವರೆಗೆ ಹಾಗೂ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಡಿ.9ರಿಂದ 20ರವರೆಗೆ ಚುನಾವಣೆ ನಿಗದಿಯಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಸಿ.ಬಿ. ಜಯರಂಗ ಅವರನ್ನು ರಾಜ್ಯ ಚುನಾವಣಾಧಿಕಾರಿಯಾಗಿ ನೇಮಿಸಲಾಗಿತ್ತು.

ಚುನಾವಣೆ ತಡೆಗೆ ಕಾರಣ: ಚುನಾವಣಾ ಪ್ರಕ್ರಿಯೆಯನ್ನು ಕರಡು ಮತದಾರರ ಪಟ್ಟಿ ಪ್ರಕಟಿಸದೇ ಆರಂಭಿಸಲಾಗಿದೆ. ಸದಸ್ಯತ್ವ ಶುಲ್ಕವನ್ನು ಪಾವತಿ ಮಾಡಿದರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿಲ್ಲ. ಇದರಿಂದಾಗಿ ಅರ್ಹ ಮತದಾರರಿಗೆ ಅನ್ಯಾಯ ಮಾಡಲಾಗಿದೆ. ಆದರೆ, ವರ್ಗಾವಣೆ, ನಿವೃತ್ತ, ಮರಣ ಹೊಂದಿದ ಮತ್ತು ಮುಂಬಡ್ತಿ ಹೊಂದಿದ ಸದಸ್ಯರ ಹೆಸರು ಪಟ್ಟಿಯಲ್ಲಿದೆ ಎಂದು ದೂರಲಾಗಿದೆ.

ಇನ್ನು, ಸರಕಾರ ಘೋಷಿಸಿದ ಹೊಸ ತಾಲೂಕುಗಳ ಪೈಕಿ ಕೆಲವು ಕಡೆಗಳಲ್ಲಿ ಮಾತ್ರ ವಿಭಜಿಸಿದ್ದು, ಕೆಲವು ಕಡೆ ವಿಭಜನೆಯಾಗಿಲ್ಲ. ಎಲ್ಲ ತಾಲೂಕು, ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳು ಇನ್ನೂ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ನಿವೃತ್ತ ಹಾಗೂ ಖಾಸಗಿ ವ್ಯಕ್ತಿಗಳಿಂದ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಚುನಾವಣೆ ಸ್ಥಳ ಮತ್ತು ಚುನಾವಣಾ ಅಧಿಕಾರಿಗಳು ಯಾರೆಂದು ಗೊತ್ತಾಗದೆ ಗೊಂದಲ ಉಂಟಾಗಿದೆ. ಸಾಮಾನ್ಯ ಚುನಾವಣಾ ಪ್ರಕ್ರಿಯೆಯ ನಿಯಮಗಳನ್ನೂ ಅನುಸರಿಸಿಲ್ಲ. ಒಟ್ಟಿನಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂಬ ಕಾರಣಕ್ಕೆ ಚುನಾವಣೆ ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News