ಸೇವೆಯ ಸೋಗಿನಲ್ಲಿ ಕ್ರೈಸ್ತ ಮಿಶನರಿಗಳಿಂದ ಮತಾಂತರ: ಮ.ಪ್ರ. ಮುಖ್ಯಮಂತ್ರಿ ಆರೋಪ

Update: 2020-11-28 17:14 GMT

ಭೋಪಾಲ್,ನ.28: ತಥಾಕಥಿತ ‘ಲವ್‌ ಜಿಹಾದ್’ ಪ್ರಕರಣಗಳನ್ನು ತಡೆಗಟ್ಟುವ ಹೆಸರಿನಲ್ಲಿ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕವನ್ನು ಮಧ್ಯಪ್ರದೇಶ ಸರಕಾರವು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವಂತೆಯೇ, ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಅವರು ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಮತಾಂತರ ಮಾಡುತ್ತಿವೆ ಎಂದು ಆರೋಪಿಸತೊಡಗಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ಬುಡಕಟ್ಟು ಪ್ರಾಬಲ್ಯದ ಉಮಾರಿಯಾ ಹಾಗೂ ಬದ್ವಾನ್ ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿದ್ದ ಶಿವರಾಜ್‌ಸಿಂಗ್ ಚೌಹಾಣ್ , ಕ್ರೈಸ್ತ ಮಿಶನರಿಗಳು ಬಲವಂತವಾಗಿ ಬುಡಕಟ್ಟು ಪಂಗಡದಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಬದ್ವಾನ್ ಜಿಲ್ಲೆಯಲ್ಲಿ ಶುಕ್ರವಾರ ಭಾಷಣ ಮಾಡಿದ ಚೌಹಾಣ್ ಅವರು, ಕ್ರೈಸ್ತಮಿಶನರಿಗಳು ಜನರಿಗೆ ಸೇವೆಗಳನ್ನು ಸಲ್ಲಿಸುವುದರಲ್ಲಿ ತಪ್ಪಿಲ್ಲ, ಆದರೆ ಫಲಾನುಭವಿಯನ್ನು ಮತಾಂತರಗೊಳಿಸುವ ಉದ್ದೇಶವನ್ನು ಅವರು ಹೊಂದಿರಕೂಡದು ಎಂದರು. ಬಲವಂತದಿಂದ ಅಥವಾ ಆಮಿಷದ ಮೂಲಕ ನಡೆಸಲಾಗುವ ಯಾವುದೇ ಮತಾಂತರ ಯತ್ನಗಳಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಲಾಗುವುದು ಎಂದವರು ಎಚ್ಚರಿಕೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಭೋಪಾಲ್‌ನ ಆರ್ಚ್‌ ಬಿಷಪ್ ಲಿಯೊ ಕೊರ್ನೆಲಿಯೊ ಅವರು, ಶಿವರಾಜ್‌ ಸಿಂಗ್‌ ಚೌಹಾಣ್ ಅವರ ಆರೋಪಗಳು ಬಿಜೆಪಿಯ ರಾಜಕಾರಣದ ಭಾಗವಾಗಿದೆ ಎಂದು ಹೇಳಿದರು.

‘‘ ಇದು ರಾಜಕೀಯವೇ ಹೊರತು ಧರ್ಮವಲ್ಲ. ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸಲು ಹಾಗೂ ರಾಜಕಾರಣಿಗಳು ಕಾನೂನುಗಳನ್ನು ರೂಪಿಸುತ್ತಾರೆ ಹಾಗೂ ತಮಗೆ ಚುನಾವಣೆಯಲ್ಲಿ ಲಾಭವಾಗುವಂತೆ ನೋಡಿಕೊಳ್ಳುತ್ತಾರೆ. ಆದರೆ ಈ ಕಾನೂನುಗಳನ್ನು ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗಗಳ ವಿರುದ್ಧ ಬಳಸುವ ಸಾಧ್ಯತೆಯ ಬಗ್ಗೆ ನನಗೆ ಭಯವಾಗುತ್ತದೆ ಎಂದು ಕೊರ್ನೆಲಿಯೋ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News