​ರೈತರ ಪ್ರತಿಭಟನೆ : ದೆಹಲಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ

Update: 2020-11-30 03:50 GMT

ಹೊಸದಿಲ್ಲಿ : ಬ್ಯಾರಿಕೇಡ್, ಸಂಘರ್ಷ ಮತ್ತು ಕೆಲ ರೈತರು ಹರ್ಯಾಣ- ದೆಹಲಿ ಗಡಿಯಲ್ಲಿ ರಸ್ತೆ ತಡೆ ನಡೆಸಿದ ಪರಿಣಾಮವಾಗಿ ರಾಜಧಾನಿಯಲ್ಲಿ ಇದೀಗ ಹಣ್ಣು ಮತ್ತು ತರಕಾರಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ ಸದ್ಯಕ್ಕೆ ಕೊರತೆ ಇಲ್ಲ ಎಂದು ವರ್ತಕರು ಹೇಳುತ್ತಿದ್ದಾರೆ.

ಆದರೆ ರೈತರ ಪ್ರತಿಭಟನೆ ಮುಂದುವರಿದಲ್ಲಿ ಗಂಭೀರ ಪರಿಣಾಮ ಎದುರಾಗಲಿದೆ ಎಂಬ ಎಚ್ಚರಿಕೆಯನ್ನು ವರ್ತಕರು ನೀಡಿದ್ದಾರೆ.

ನೂರಾರು ಟ್ರಕ್‌ಗಳು ನಗರಕ್ಕೆ ಪ್ರವೇಶಿಸಲು ಸಾಧ್ಯವಾಗದೇ ಸಗಟು ಪೂರೈಕೆಗೆ ಧಕ್ಕೆಯಾಗಿದೆ. ಅಝಾದ್‌ಪುರ ಎಪಿಎಂಸಿ ಮೂಲಗಳ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಪಂಜಾಬ್ ಹಾಗೂ ಹರ್ಯಾಣದಿಂದ ಟ್ರಕ್‌ಗಳು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಪೂರೈಕೆ ಶೇಕಡ 50-60ರಷ್ಟು ಕಡಿಮೆಯಾಗಿದೆ.

ಎಪಿಎಂಸಿ ಅಧ್ಯಕ್ಷ ಅಹ್ಮದ್ ಖಾನ್ ಹೇಳುವಂತೆ, "ಸಾಮಾನ್ಯವಾಗಿ ಪ್ರತಿದಿನ ಮಾರುಕಟ್ಟೆಗೆ 2000-3000 ಟ್ರಕ್‌ಗಳು ಬರುತ್ತವೆ. ಆದರೆ ಶುಕ್ರವಾರ 666 ಹಾಗೂ ಶನಿವಾರ 1000 ಟ್ರಕ್‌ಗಳ ಬಂದಿವೆ. ಪೂರೈಕೆ ಶೇಕಡ 50-60ರಷ್ಟು ಕುಸಿದಿದೆ. ಇನ್ನೂ ಕೆಲ ದಿನಗಳವರೆಗೆ ಪ್ರತಿಭಟನೆ ಮುಂದುವರಿದರೆ ಪರಿಣಾಮ ತೀವ್ರವಾಗಲಿದೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸರ್ಕಾರ ರೈತರ ಜತೆ ಮಾತುಕತೆ ನಡೆಸಬೇಕಿದೆ. ಓಕ್ಲಾ ಮಂಡಿಯಲ್ಲಿ ಕೂಡಾ ಇದೇ ಸಮಸ್ಯೆ ಇದೆ"

ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಿಂದ ಪೂರೈಕೆಯಾಗುವ ಆಲೂಗಡ್ಡೆ, ಸೇಬು ಮತ್ತು ಇತರ ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 1 ಮತ್ತು 10ರಲ್ಲಿ ಬಹುತೇಕ ಹಣ್ಣು ಮತ್ತು ತರಕಾರಿ ಲಾರಿಗಳು ಸಿಕ್ಕಿಹಾಕಿಕೊಂಡಿವೆ. ಹರ್ಯಾಣ- ದೆಹಲಿ ನಡುವಿನ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರವೇಶಿಸಲು ಸಾಧ್ಯವಾಗದೇ ಅಗತ್ಯ ವಸ್ತುಗಳ ಪೂರೈಕೆಗೆ ಧಕ್ಕೆಯಾಗಿದೆ.

"ತರಕಾರಿ ಪೂರೈಕೆ ಶೇಕಡ 50 ಹಾಗೂ ಹಣ್ಣು ಪೂರೈಕೆ ಶೇಕಡ 70ರಷ್ಟು ಕುಸಿದಿದೆ. ಟ್ರಕ್‌ಗಳು ಹೆದ್ದಾರಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಇವೆಲ್ಲ ಬೇಗನೆ ಹಾಳಾಗುವ ಉತ್ಪನ್ನಗಳು. ಇಲ್ಲಿಂದ ದೇಶದ ವಿವಿಧೆಡೆಗಳಿಗೆ ಹಣ್ಣು- ತರಕಾರಿ ಪೂರೈಕೆಯಾಗುವುದರಿಂದ ಗಂಭೀರ ಪರಿಣಾಮ ಎದುರಾಗಲಿದೆ" ಎಂದು ಅಝಾದ್‌ಪುರ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೀಟಾ ರಾಮ್ ಕೃಪಲಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News