ಮುಂದಿನ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅನುಮೋದನೆ: ಸಿಎಂ ಯಡಿಯೂರಪ್ಪ

Update: 2020-11-30 12:33 GMT

ಬೆಂಗಳೂರು, ನ.30: ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೂತನ ಶಿಕ್ಷಣ ನೀತಿಯನ್ನು ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ ನೂತನ ಶಿಕ್ಷಣ ನೀತಿ ರೂಪಿಸಲು ರಚಿಸಿದ್ದ ಕಾರ್ಯಪಡೆ ಸಲ್ಲಿಸಿದ ಪೂರ್ಣ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಯಪಡೆ ಸದಸ್ಯರು ಮತ್ತು ರಾಜ್ಯದ ಉನ್ನತ ಶಿಕ್ಷಣ, ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಸೇರಿದಂತೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಕಾರ್ಯಪಡೆ ವರದಿ ಮುಖ್ಯಾಂಶಗಳನ್ನು ಆಲಿಸಿ ನೂತನ ಶಿಕ್ಷಣ ನೀತಿ ಜಾರಿಯ ರೂಪುರೇಷೆಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾತನಾಡಿ, ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರಚಿಸಿದ ನೂತನ ಶಿಕ್ಷಣ ನೀತಿಯಲ್ಲಿ ಕರ್ನಾಟಕ ಛಾಪು ವಿಶಾಲವಾಗಿ ಪ್ರತಿಬಿಂಬಿತವಾಗಿದೆ. ಕೇಂದ್ರ ಸರಕಾರ ಈ ನೀತಿ ಕುರಿತಂತೆ ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದು, ಜಾರಿ ಕುರಿತಂತೆ ಮೇಲುಸ್ತುವಾರಿ ನಡೆಸುತ್ತಿದೆ ಎಂದರು.

ಈ ನೀತಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಒಂದು ಹೊಸ ರೂಪ ಪಡೆದುಕೊಳ್ಳಲಿದ್ದು, ನಾಡಿನ ಎಲ್ಲ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೂತನ ಶಿಕ್ಷಣ ನೀತಿ ಕುರಿತಂತೆ ಚರ್ಚಿಸಿ ಅನುಮೋದನೆ ಪಡೆಯಲಾಗುವುದು ಎಂದು ಅವರು ಹೇಳಿದರು.

ಹಾಗೆಯೇ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಹೊಸ ಶಿಕ್ಷಣ ನೀತಿಯ ರೂಪುರೇಷೆಗಳ ಕುರಿತು ಚರ್ಚಿಸಿ ಇದರ ಜಾರಿಗೆ ಶಾಸನಾತ್ಮಕ ಕ್ರಮಗಳು ಮತ್ತು ಅನುಷ್ಠಾನಕ್ಕೆ ಅಗತ್ಯವಾದ ಆಯೋಗ ಸೇರಿದಂತೆ ಇನ್ನಿತರೆ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ನೂತನ ಶಿಕ್ಷಣ ನೀತಿ ಅನುಷ್ಠಾನದ ಮೂಲಕ ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ. ಸುದೀರ್ಘ 34 ವರ್ಷಗಳ ನಂತರದ ಮತ್ತು ಈ ಶತಮಾನದ ಮೊದಲ ಶಿಕ್ಷಣ ನೀತಿಯಾಗಿ ರೂಪಿತವಾಗಿರುವ ನೂತನ ಶಿಕ್ಷಣ ನೀತಿಯನ್ನು ಒಂದು ಆಂದೋಲನದ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರಕಾರ ಮುಂದಾಗಿದೆ. ಈ ನೀತಿ ಅನುಷ್ಠಾನಕ್ಕೆ ಅವಶ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಒದಗಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಟಾಸ್ಕ್ ಫೋರ್ಸ್ ಸಮಿತಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿಯ ಸದಸ್ಯರಾದ ಪ್ರೊ.ಎಂ.ಕೆ.ಶ್ರೀಧರ್ ಮಾತನಾಡಿ, 175 ವರ್ಷಗಳ ನಂತರ ಭಾರತ ಸರಕಾರವು ತನ್ನದೆ ಆದ ಶಿಕ್ಷಣ ನೀತಿಯನ್ನು ರೂಪಿಸಿದೆ. ಈ ನೀತಿ ನಿರೂಪಣೆಯಲ್ಲಿ ಕರ್ನಾಟಕ ರಾಜ್ಯ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣ ವ್ಯವಸ್ಥೆಗೆ ಸರಕಾರ ಹಾಗೂ ಸಮಾಜ ಹೆಚ್ಚಿನ ಒತ್ತು ನೀಡಬೇಕೆನ್ನುವುದು ಶಿಕ್ಷಣ ನೀತಿಯ ಆಶಯ ಎಂದು ವಿವರಿಸಿದರು.

ಟಾಸ್ಕ್ ಫೋರ್ಸ್ ಸಮಿತಿಯ ಶಿಫಾರಸುಗಳ ಮುಖ್ಯಾಂಶಗಳು:

ಶಾಲಾ ಶಿಕ್ಷಣ: ಕೆಎಸ್‍ಎಸ್‍ಇಸಿ ಮತ್ತು ಎಸ್‍ಎಸ್‍ಎಸ್‍ಎಗಳು ಶಾಲೆಗಳ ನಿಯಂತ್ರಣ ಮತ್ತು ಕಾರ್ಯಾಚರಣೆಗಳ ಪ್ರತ್ಯೇಕತೆಯನ್ನು ಖಾತರಿ ಪಡಿಸಿಕೊಳ್ಳುವುದು. ಡಿಎಸ್‍ಇಆರ್‍ಟಿಯನ್ನು ಪುನರ್ ರಚಿಸುವುದು. ಲಿಂಗಾಧಾರಿತ ಒಳಗೊಳ್ಳುವಿಕೆ ಮತ್ತು ದಿವ್ಯಾಂಗ ನಿಧಿಗಾಗಿ ಸಾಂಸ್ಥಿಕ ಸಾರ್ವಜನಿಕ ಜವಾಬ್ದಾರಿ(ಸಿಎಸ್‍ಆರ್)ಯಡಿಯಲ್ಲಿ ಹಣವನ್ನು ಆಕರ್ಷಿಸುವುದು. ಸಾಕಷ್ಟು ಸಂಖ್ಯೆಯ ವಿಶೇಷ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುವುದು. ಎಲ್ಲ ರೀತಿಯ ವಿದ್ಯಾರ್ಥಿವೇತನಗಳಿಗೆ ಏಕ ವೇದಿಕೆಯನ್ನು ರೂಪಿಸುವುದು. ಅದರೊಂದಿಗೆ ದಿವ್ಯಾಂಗ ವಿದ್ಯಾರ್ಥಿವೇತನವನ್ನು ಸ್ಥಾಪಿಸುವುದು.

ಉನ್ನತ ಶಿಕ್ಷಣ: ಹೊಸ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ಕೆಎಸ್‍ಯು) ಕಾಯ್ದೆಯನ್ನು ಜಾರಿಗೆ ತರುವುದು. ಮತ್ತೊಂದು ಹೊಸ ಕಾಯಿದೆಯನ್ನು ಜಾರಿಗೆ ತಂದು ಅದರನ್ವಯ ಕರ್ನಾಟಕ ಉನ್ನತ ಶಿಕ್ಷಣ ಆಯೋಗವನ್ನು (ಕೆಎಚ್‍ಇಸಿ) ಸ್ಥಾಪಿಸಬೇಕು. ವಿಶೇಷ ಶೈಕ್ಷಣಿಕ ವಲಯಗಳನ್ನು ಗುರುತಿಸಿ ಸ್ಥಾಪಿಸಬೇಕು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಿಗೆ (ಇಎಸ್‍ಡಿಜಿ) ಅನ್ವಯವಾಗುವ ಎಲ್ಲ ವಿದ್ಯಾರ್ಥಿವೇತನಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುವುದು. ಸಂಲಗ್ನಿತ (affiliated) ಅಂಗಸಂಸ್ಥೆಗಳು ಮತ್ತು ಸ್ವಾಯತ್ತ (autonomous) ಕಾಲೇಜುಗಳ ಶ್ರೇಣೀಕೃತ ಸಬಲೀಕರಣ ಪ್ರಕ್ರಿಯೆಗೆ ಚಾಲನೆ ನೀಡುವುದು.

ಈ ಸಂದರ್ಭದಲ್ಲಿ ಕಾರ್ಯಪಡೆ ಸದಸ್ಯರಾದ ತಿಮ್ಮೇಗೌಡ ಶಿಕ್ಷಣ ನೀತಿ ರೂಪುರೇಷೆಗಳನ್ನು ಪ್ರಾತ್ಯಕ್ಷಿತೆ ಮೂಲಕ ಸಾದರಪಡಿಸಿದರು. ಕಾರ್ಯಪಡೆ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ಡಾ.ಅನುರಾಗ್ ಬೆಹರ್ ಸೇರಿದಂತೆ ಇತರೆ ಸದಸ್ಯರು ಮತ್ತು ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News