ಚಿಕ್ಕಮಗಳೂರು: 226 ಗ್ರಾ.ಪಂ.ಗಳ ಪೈಕಿ 209 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ

Update: 2020-11-30 17:46 GMT

ಚಿಕ್ಕಮಗಳೂರು, ನ.30: ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ದಿನಾಂಕ ಗೊತ್ತು ಮಾಡಿ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 226 ಗ್ರಾಮ ಪಂಚಾಯತ್‍ಗಳ ಪೈಕಿ 209 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಜಿಲ್ಲೆಯಲ್ಲಿ ಗ್ರಾಮಪಂಚಾಯತ್ ಚುನಾವಣೆಗಳನ್ನು ಚುನಾವಣಾ ಆಯೋಗ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಚಿಕ್ಕಮಗಳೂರು ತಾಲೂಕಿನ 41 ಗ್ರಾಮ ಪಂಚಾಯತ್‍ಗಳು, ಮೂಡಿಗೆರೆ ತಾಲೂಕಿನ 26, ಕೊಪ್ಪ ತಾಲೂಕಿನ 21, ಶೃಂಗೇರಿ ತಾಲೂಕಿನ 9 ಗ್ರಾಮ ಪಂಚಾಯತ್‍ಗಳೂ ಸೇರಿದಂತೆ ಜಿಲ್ಲೆಯ ಒಟ್ಟು 97 ಗ್ರಾಮ ಪಂಚಾಯತ್‍ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ನರಸಿಂಹರಾಜಪುರ ತಾಲೂಕಿನ 14, ಕಡೂರು ತಾಲೂಕಿನ 49, ತರೀಕೆರೆ ತಾಲೂಕಿನ 25 ಹಾಗೂ ಅಜ್ಜಂಪುರ ತಾಲೂಕಿನ 24 ಗ್ರಾಪಂ ಸೇರಿದಂತೆ 112 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದೆ.

ಮೊದಲ ಹಂತದ ಚುನಾವಣೆಗೆ ಡಿ.7ರಂದು ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಡಿ.11ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಡಿ.12ರಂದು ನಾಮಪತ್ರಗಳ ಪರಿಶೀಲನೆ, ಡಿ.14ರಂದು ನಾಮಪತ್ರ ಹಿಂಪಡೆಯಲು ಕೊನೆದಿನವಾಗಿದ್ದು, ಡಿ.22ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಡಿ.24ರಂದು ಅಗತ್ಯವಿದ್ದಲ್ಲಿ ಮರು ಮತದಾನ ನಡೆಯಲಿದ್ದು, ಡಿ.30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಜಿಲ್ಲೆಯಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಗೆ ಡಿ.11ರಂದು ಜಿಲ್ಲಾಧಿಕಾರಿ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಡಿ.16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಡಿ.17 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.19ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಡಿ.27ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಡಿ.29ರಂದು ಅಗತ್ಯವಿದ್ದಲ್ಲಿ ಮರುಮತದಾನ ನಡೆಯಲಿದೆ. ಡಿ.30ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಜಿಲ್ಲೆಯ 8 ತಾಲೂಕು ಕೇಂದ್ರಗಳಲ್ಲಿ ಸುಗಮ ಮತದಾನ ಪ್ರಕ್ರಿಯೆ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 907 ಮತಗಟ್ಟೆ ಹಾಗೂ 193 ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲು ಈಗಾಗಲೇ ಸ್ಥಳ ಗುರುತು ಮಾಡಿದೆ. ಚುನಾವಣೆಗೆ 157 ಚುನಾವಣಾಧಿಕಾರಿ, 167 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ 40 ಗ್ರಾಮ ಪಂಚಾಯತ್‍ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, 1,31,537 ಮತದಾರರು ಮತದಾರರು ಮತ ಚಲಾಯಿಸಲಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ 26 ಗ್ರಾಮ ಪಂಚಾಯತ್‍ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ತಾಲೂಕಿನಲ್ಲಿ 88,635 ಮತದಾರರು ಮತ ಚಲಾಯಿಸಲಿದ್ದಾರೆ. ಕೊಪ್ಪ ತಾಲೂಕಿನ 21 ಗ್ರಾಮ ಪಂಚಾಯತ್‍ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು 66,160 ಮತದಾರರು ಮತ ಚಲಾಯಿಸಲಿದ್ದಾರೆ. ಇನ್ನು ಶೃಂಗೇರಿ ತಾಲೂಕಿನಲ್ಲಿ 9ಗ್ರಾಮ ಪಂಚಾಯತ್‍ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, 26,584 ಮತದಾರರು ಮತ ಚಲಾಯಿಸಲಿದ್ದಾರೆ.

ನರಸಿಂಹರಾಜಪುರ 14 ಗ್ರಾಮ ಪಂಚಾಯತ್‍ಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 48,856 ಮತದಾರರು ಮತ ಚಲಾಯಿಸಲಿದ್ದಾರೆ. ಕಡೂರು ತಾಲೂಕಿನ 49 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದ್ದು, 1,60,580 ಮತದಾರರು ಮತ ಚಲಾಯಿಸಲಿದ್ದಾರೆ. ತರೀಕೆರೆ ತಾಲೂಕಿನ 25 ಗ್ರಾಮ ಪಂಚಾಯತ್‍ಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 85,821 ಮತದಾರರು ಮತ ಚಲಾಯಿಸಲಿದ್ದಾರೆ. ಅಜ್ಜಂಪುರ ತಾಲೂಕಿನ 24 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದ್ದು, 71,949 ಮತದಾರರು ಮತ ಚಲಾಯಿಸಲಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 3,39,199 ಪುರುಷ ಮತದಾರರು ಮತ್ತು 3,40,944 ಮಹಿಳಾ ಮತದಾರರು ಹಾಗೂ 17 ಇತರ ಮತದಾರರು ಮತ ಚಲಾಯಿಸಲಿದ್ದು, ಒಟ್ಟು 6,80,160 ಮತದಾರರು ಮತ ಚಲಾಯಿಸಲಿದ್ದಾರೆ.

ಜಿಲ್ಲೆಯಲ್ಲಿರುವ ಒಟ್ಟು 226 ಗ್ರಾಮ ಪಂಚಾಯತ್‍ಗಳಲ್ಲಿ ಒಟ್ಟು 2,326 ಸ್ಥಾನಗಳಿವೆ. ಈ ಪೈಕಿ ಸದ್ಯ 209 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 2,138 ಸ್ಥಾನಗಳಿಗೆ ಮಾತ್ರ ಸದ್ಯ ಚುನಾವಣೆ ನಡೆಯಲಿದೆ. ಉಳಿದ 188 ಸ್ಥಾನಗಳಿಗೆ ಆಯಾ ಗ್ರಾಪಂ ಸದಸ್ಯರ ಅವಧಿ ಪೂರ್ಣಗೊಂಡ ಬಳಿಕ ಚುನಾವಣೆ ನಡೆಯಲಿದೆ.

ಚಿಕ್ಕಮಗಳೂರು ತಾಲೂಕಿನ 491 ಸ್ಥಾನಗಳ ಪೈಕಿ 432 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 59 ಸ್ಥಾನಗಳಿಗೆ ಅವಧಿ ಮುಗಿದ ನಂತರ ಚುನಾವಣೆ ನಡೆಯಲಿದೆ. ಮೂಡಿಗೆ ತಾಲೂಕಿನ 306 ಸ್ಥಾನಗಳ ಪೈಕಿ 281 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 25 ಸ್ಥಾನಗಳಿಗೆ ಅವಧಿ ಮುಗಿದ ನಂತರ ಚುನಾವಣೆ ನಡೆಯಲಿದೆ. ಕೊಪ್ಪ ತಾಲೂಕಿನ 210 ಸ್ಥಾನಗಳಲ್ಲಿ 193ಕ್ಕೆ ಚುನಾವಣೆ ನಡೆಯಲಿದ್ದು, 17 ಸ್ಥಾನಕ್ಕೆ ತಡವಾಗಿ ಚುನಾವಣೆ ನಡೆಯಲಿದೆ. ತರೀಕೆರೆ ತಾಲೂಕಿನ 282 ಸ್ಥಾನಗಳ ಪೈಕಿ 273 ಚುನಾವಣೆ ನಡೆಯಲಿದ್ದು 9 ಸ್ಥಾನಕ್ಕೆ ತಡವಾಗಿ ಚುನಾವಣೆ ನಡೆಯಲಿದೆ. ಕಡೂರು ತಾಲೂಕಿನ 558 ಸ್ಥಾನಗಳ ಪೈಕಿ 497 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉಳಿದ 61 ಸ್ಥಾನಗಳಿಗೆ ತಡವಾಗಿ ಚುನಾವಣೆ ನಡೆಯಲಿದೆ. ಅಜ್ಜಂಪುರ ತಾಲೂಕಿನಲ್ಲಿ 240 ಸ್ಥಾನಗಳ ಪೈಕಿ 223 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಾಕಿ 17 ಸ್ಥಾನಗಳಿಗೆ ಅವಧಿ ಮುಗಿದ ಬಳಿಕ ಚುನಾವಣೆ ನಡೆಯಲಿದೆ.

17 ಗ್ರಾಪಂ ಚುನಾವಣೆ ನಡೆಯೋದಿಲ್ಲ!
ಕರಗಡ ಯೋಜನೆ ವ್ಯಾಪ್ತಿಯ 11 ಗ್ರಾಮ ಪಂಚಾಯತ್‍ಗಳು ಕಳೆದ ಚುನಾವಣೆ ವೇಳೆ ಯೋಜನೆಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಿದ್ದರು. ಈ ಕಾರಣದಿಂದ 1 ವರ್ಷ ಕಾಲ ಚುನಾವಣೆ ನಡೆದಿರಲಿಲ್ಲ. ಇನ್ನು ಜಿಲ್ಲೆಯಲ್ಲಿ 6 ಗ್ರಾಮ ಪಂಚಾಯತ್‍ಗಳಲ್ಲಿ ಮೀಸಲಾತಿ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಚುನಾವಣೆ ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಾರಿ 17 ಗ್ರಾಮ ಪಂಚಾಯತ್‍ಗಳ ಅವಧಿ ಮುಗಿಯದ ಕಾರಣದಿಂದಾಗಿ ಚುನಾವಣೆ ನಡೆಯುತ್ತಿಲ್ಲ.

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಆರ್‍ಒಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ತೆರೆಯಲೂ ಸ್ಥಳಗಳನ್ನು ನಿಗದಿ ಮಾಡಲಾಗಿದೆ.
- ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ.

ಗ್ರಾಪಂ ಚುನಾವಣೆ ಕೋವಿಡ್ ನಡುವೆ ನಡೆಯುತ್ತಿದೆ. ಇದು ಪಕ್ಷಾತೀತ ಚುನಾವಣೆಯಾಗಿದ್ದು, ಯೋಗ್ಯರನ್ನು ಮತದಾರರು ಆಯ್ಕೆ ಮಾಡಬೇಕು. ಬಿಜೆಪಿ ಕಾರ್ಯಕರ್ತರು ಗ್ರಾಮ ಸ್ವರಾಜ್ ಯಾತ್ರೆಯ ಮೂಲಕ ಚುನಾವಣೆ ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸುವ ವಿಶ್ವಾಸವಿದೆ.
- ಸಿ.ಟಿ.ರವಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News