ದಿಲ್ಲಿ: ಪ್ರತಿಭಟನಾ ನಿರತ ರೈತರ ಕುರಿತು ಕಾಳಜಿ ವ್ಯಕ್ತಪಡಿಸಿದ ಕೆನಡಾ ಪ್ರಧಾನಿ

Update: 2020-12-01 08:27 GMT

ಒಂಟಾರಿಯೋ : ಭಾರತ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳನ್ನು  ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, ``ಕೆನಡಾ ಪ್ರತಿಭಟಿಸುವ ಹಕ್ಕನ್ನು ಸಮರ್ಥಿಸುತ್ತದೆ,'' ಎಂದು ಹೇಳಿದ್ದಾರೆ.

ಭಾರತದಲ್ಲಿನ ರೈತರ ಪ್ರತಿಭಟನೆಗಳ ಕುರಿತು ಹೇಳಿಕೆ ನೀಡಿದ ಮೊದಲ ಅಂತರ ರಾಷ್ಟ್ರೀಯ ನಾಯಕರಾಗಿದ್ದಾರೆ ಜಸ್ಟಿನ್ ಟ್ರೂಡೊ.

ಗುರು ನಾನಕ್ ಜಯಂತಿಯಂದು  ಕೆನಡಾ ನಾಗರಿಕರಿಗೆ ಮುಖ್ಯವಾಗಿ ಸಿಖ್ ಪಂಥೀಯರಿಗೆ ಶುಭಾಶಯ ಕೋರಿದ ಅವರು ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಮೇಲಿನಂತೆ ಹೇಳಿದ್ದಾರೆ.

``ರೈತರ ಪ್ರತಿಭಟನೆಗಳು ನಡೆಯುತ್ತಿರುವ ಭಾರತದ ಕುರಿತಾದ ಸುದ್ದಿಗಳ ಬಗ್ಗೆ ಉಲ್ಲೇಖಿಸದೆ ನನ್ನ ಮಾತುಗಳನ್ನು ಆರಂಭಿಸುವುದು ಸರಿಯಾಗದು. ಪರಿಸ್ಥಿತಿ ಕಳವಳಕಾರಿಯಾಗಿದೆ. ನಾವೆಲ್ಲರೂ ನಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದೇವೆ.  ನಿಮ್ಮಲ್ಲಿ ಹಲವರಿಗೆ ಇದು ವಾಸ್ತವವೆಂದು ನಮಗೆ ತಿಳಿದಿದೆ. ಶಾಂತಿಯುತ ಪ್ರತಿಭಟನಾಕಾರರ ಹಕ್ಕುಗಳನ್ನು ಕೆನಡಾ ಯಾವತ್ತೂ ಸಮರ್ಥಿಸುತ್ತದೆ ಎಂದು ನಿಮಗೆ ನೆನಪಿಸಲು ಇಚ್ಛಿಸುತೇನೆ. ಮಾತುಕತೆಗಳ ಪ್ರಕ್ರಿಯೆ ಮೇಲೆ ನಂಬಿಕೆಯಿರಿಸಿದವರು ನಾವು. ನಮ್ಮ ಕಳವಳವನ್ನು ಭಾರತೀಯ ಪ್ರಾಧಿಕಾರಗಳಿಗೆ ತಿಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿದ್ದೇವೆ. ನಾವೆಲ್ಲರೂ ಜತೆಯಲ್ಲಿರಬೇಕಾದ ಕ್ಷಣವಿದು,'' ಎಂದು ಅವರು ಬರೆದಿದ್ದಾರೆ.

ಇದಕ್ಕೂ ಮುಂಚೆ ಕೆನಡಾದ ರಕ್ಷಣಾ ಸಚಿವ ಹರ್ಜಿತ್ ಸಿಂಗ್ ಸಜ್ಜನ್ ಕೂಡ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು ಹಾಗೂ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿಯಬೇಕೆಂದು ಹೇಳಿದ್ದರು.

 ಕೆನಡಾ ಪ್ರಧಾನಿ ಹಾಗೂ ರಕ್ಷಣಾ ಸಚಿವರ ಹೇಳಿಕೆಗಳಿಗೆ ಭಾರತ ಸರಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News