ವಿಶ್ವನಾಥ್ ರಿಗೆ ಮಂತ್ರಿಗಿರಿ ಸಿಗಬಾರದು ಎಂದು ಬಿಜೆಪಿಗೆ ಹೋದ ಬಾಂಬೆ ಟೀಂನವರೇ ಪಿಐಎಲ್ ಹಾಕಿಸಿದ್ದು: ಸಾ.ರಾ.ಮಹೇಶ್

Update: 2020-12-01 08:01 GMT

ಮೈಸೂರು, ಡಿ.1: ಸಚಿವ ಸ್ಥಾನ ಸಿಗಬಾರದು ಎಂದು ಬಿಜೆಪಿಗೆ ಹೋದ ಬಾಂಬೆ ಟೀಂ ನವರೇ ಪಿಐಎಲ್ ಹಾಕಿಸಿ ಎಚ್.ವಿಶ್ವನಾಥ್ ಅವರಿಗೆ ಹಿನ್ನಡೆಯನ್ನುಂಟು ಮಾಡಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡ ವ್ಯಕ್ತಿಗೆ ನ್ಯಾಯ ದೇವತೆಯೂ ತಿರಸ್ಕರಿಸುವ ಮೂಲಕ ಸತ್ಯಕ್ಕೆ ಸಾವಿಲ್ಲ ಎಂಬುದು ಸಾಬೀತಾಗಿದೆ ಎಂದರು.

ಸಚಿವ ಸ್ಥಾನಕ್ಕೆ ವಿಶ್ವನಾಥ್ ಅನರ್ಹ ಎಂಬ ತೀರ್ಪು ಹೊರಬಿದ್ದಿದೆ. ಇದು ಸತ್ಯಕ್ಕೆ ಸಿಕ್ಕ ಜಯ, ಯಾರೇ ತಪ್ಪು ಮಾಡಿದರೆ ಅವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂಬುದಕ್ಕೆ ಈ ವಿಚಾರವೇ ಸಾಕ್ಷಿ ಎಂದು ಹೇಳಿದರು.

ವಿಶ್ವನಾಥ್ ಮಂತ್ರಿಯಾಗಬಾರದು ಎಂದು ಅವರ ಜೊತೆ ಬಾಂಬೆಗೆ ಹೋಗಿದ್ದ ವ್ಯಕ್ರಿಯೇ ಕೋರ್ಟ್ ನಲ್ಲಿ ಪಿಐಎಲ್ ಹಾಕಿಸಿದ್ದರು. ಕೇಸ್ ಹಾಕಿದ ವ್ಯಕ್ತಿ ಯಾರ ಬೆಂಬಲಿಗ, ಆತನಿಗೆ ಹಣ ನೀಡುತ್ತಿದ್ದವರು ಯಾರು ಎಂಬುದು ತಿಳಿದಿದೆ ಎಂದು ಹೇಳಿದೆರು.

ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರುಗಳ ಬೆಂಬಲದಿಂದ ಗೆದ್ದ ವ್ಯಕ್ತಿ ಅಷ್ಟೇ ನೋವನ್ನು ಉಂಟು ಮಾಡಿದ್ದರು.  ಈ ಮನುಷ್ಯನನ್ನು ಜೆಡಿಎಸ್ ಗೆ ಕರೆತರಬೇಡಿ ಎಂದು ಹಲವಾರು ಮಂದಿ ಹೇಳಿದ್ದರು. ಆದರೆ ನಾವು ಪಕ್ಷಕ್ಕೆ ಕರೆದುಕೊಂಡು ಬಂದು ಡಕೋಟ ಬಸ್ಸಿಗೆ ಎಫ್.ಸಿ. ಮಾಡಿಸಿ ಇದು ಕಾಗೆ ಅಲ್ಲ, ಕೋಗಿಲೆ ಅಂತ ಗೆಲ್ಲಿಸಿಕೊಂಡು ಬಂದಿದ್ದೆವು. ಆದರೆ ಆ ಮನುಷ್ಯನಿಗೆ ಕೃತಜ್ಞತೆಯೇ ಇಲ್ಲ ಎಂದು ಕಿಡಿಕಾರಿದರು.

ವಿಶ್ವನಾಥ್ ಸ್ಥಿತಿ ಕರೆಯೋ ಹಸು ಬಿಟ್ಟು ಒದೆಯೋ ಕೋಣ ಕರೆದುಕೊಂಡು ಬಂದಂತಾಗಿದೆ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News