ರೈತರ ಹೋರಾಟ ಹತ್ತಿಕ್ಕಲು ಯತ್ನ ಆರೋಪ: ಕೇಂದ್ರದ ವಿರುದ್ಧ ರೈತ ಸಂಘದಿಂದ ರಸ್ತೆ ತಡೆದು ಪ್ರತಿಭಟನೆ

Update: 2020-12-02 17:42 GMT

ಚಿಕ್ಕಮಗಳೂರು, ಡಿ.2: ಕೃಷಿ ಮಸೂದೆಗಳ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ದಿಲ್ಲಿಯಲ್ಲಿ ಲಕ್ಷಾಂತರ ಸಂಖ್ಯೆಯ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರಕಾರ ಅರೆಸೇನಾ ಪಡೆಗಳನ್ನು ಬಳಸಿಕೊಂಡಿರುವುದನ್ನು ವಿರೋಧಿಸಿದ ಹಾಗೂ ಕೃಷಿ ಮಸೂದೆಗಳ ತಿದ್ದುಪಡಿಗೆ ಆಗ್ರಹಿಸಿ ರೈತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬುಧವಾರ ನಗರದ ಎಐಟಿ ಸರ್ಕಲ್‍ನಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕ ಹಾಗೂ ವಿವಿಧ ತಾಲೂಕು ಘಟಕಗಳ ಮುಖಂಡರು ಬುಧವಾರ ನಗರದ ಎಐಟಿ ಸರ್ಕಲ್‍ನಲ್ಲಿ ಸಮಾವೇಶಗೊಂಡು ದಿಢೀರ್ ರಸ್ತೆ ತಡೆ ನಡೆಸಿದರು. ರೈತರು ದಿಢೀರ್ ನಡೆಸಿದ ರಸ್ತೆ ತಡೆಯಿಂದಾಗಿ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ವೇಳೆ ಪೊಲೀಸರು ರೈತರ ಮನವೊಲಿಸಲು ಪ್ರಯತ್ನಿಸಿದರಾದರೂ ರೈತರು ಧರಣಿ ಮುಂದುವರಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಕೇಂದ್ರ ಸರಕಾರ ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ನ್ಯಾಯಯುತ ಹೋರಾವನ್ನು ಹತ್ತಿಕ್ಕಲು ಯೋಧರು ಮತ್ತು ಅರೆಸೇನಾ ಪಡೆಗಳನನು ಬಳಸಿಕೊಂಡಿರುವುದು ಖಂಡನೀಯವಾಗಿದೆ. ರೈತರು ತಮ್ಮ ಅಸ್ತಿತ್ವಕ್ಕೆ ಘಾಸಿ ಮಾಡುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆಗೆ ಕೇಂದ್ರ ಸರಕಾರ ವಾಮಮಾರ್ಗದ ಮೂಲಕ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಬೀದಿಗಿಳಿದಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ರೈತರು ದಿಲ್ಲಿಯಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿರುವುದಕ್ಕೆ ಬೆದರಿರುವ ಕೇಂದ್ರ ಸರಕಾರ ರೈತರ ಹೋರಾಟವನ್ನು ಹೊಸಕಿ ಹಾಕಲು ಭಾರೀ ಕಸರತ್ತು ಮಾಡಿದೆ. ರಸ್ತೆಗೆ ಬ್ಯಾರಿಕೇಡ್‍ಗಳನ್ನು ಹಾಕಲಾಗುತ್ತಿದೆ. ಹೆದ್ದಾರಿಯಲ್ಲಿ ಭಾರೀ ಕಂದಕಗಳನ್ನು ನಿರ್ಮಿಸಲಾಗುತ್ತಿದೆ, ಅಶ್ರುವಾಯು ಸಿಂಪಡಿಸಲಾಗುತ್ತಿದೆ, ರೈತರನ್ನು ಬೆದರಿಸಲು ಲಾಠಿಚಾರ್ಜ್ ಮಾಡಲಾಗುತ್ತಿದೆ. ಹೋರಾಟವನ್ನು ಹಿಮ್ಮೆಟ್ಟಿಸಲು ರೈತ ಮುಖಂಡರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದರು.

ರೈತರ ಅಹವಾಲುಗಳನ್ನು ಕೇಳಲು ಮುಂದಾಗದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಕೇಂದ್ರದ ಕೃಷಿ ಸಚಿವರು ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವ ಕೇಂದ್ರ ಸರಕಾರದ ಕ್ರಮ ದೇಶ ಕೃಷಿ ಕ್ಷೇತ್ರ ಹಾಗೂ ರೈತರನ್ನು ವಿನಾಶದಂಚಿಗೆ ತಳ್ಳುವ ಜನವಿರೋಧಿ ನೀತಿಯಾಗಿದೆ ಎಂದ ಅವರು ದೇಶದಲ್ಲಿ ಶೇ.65ರಷ್ಟು ರೈತರು ಕೃಷಿಯಾಧಾರಿತ ಜೀವನ ನಡೆಸುತ್ತಿದ್ದಾರೆ. ಶೇ.90ರಷ್ಟು ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ. ಭೂಸುಧಾರಣೆ ಕಾಯ್ದೆಯ ತಿದ್ದುಪಡಿಯಿಂದಾಗಿ ದೇಶದ ಈ ಸಣ್ಣ ಹಿಡುವಳಿದಾರರ ಜಮೀನುಗಳು ಕಾರ್ಪೋರೆಟ್ ಕುಳಗಳ ಪಾಲಾಗಲಿದ್ದು, ರೈತರು ಅವರ ಗುಲಾಮರಾಗುವಂತಹ ವ್ಯವಸ್ಥೆ ಭವಿಷ್ಯದಲ್ಲಿ ಬರಲಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಕೃಷಿ ಬೆಲೆ ನೀತಿ, ವಿದ್ಯುತ್ ಕಾಯ್ದೆ, ಕಾರ್ಮಿಕ ಕಾನೂನುಗಳ ತಿದ್ದುಪಡಿಯಿಂದಾಗಿ ಗ್ರಾಮೀಣ ಭಾಗದ ರೈತರು ಹಾಗೂ ಜನರನ್ನು ಬೀದಿಪಾಲಾಗಲಿದ್ದಾರೆ. ಕಾರ್ಪೊರೆಟ್ ಸಂಸ್ಥೆಗಳು, ಎಂಎನ್‍ಸಿ ಕಂಪೆನಿಗಳು ತಮ್ಮ ಸಂಪತ್ತನ್ನು ದುಪ್ಪಟ್ಟು ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ರೈತರು, ಜನವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿವೆ ಎಂದು ಟೀಕಿಸಿದರು.

ಸರಕಾರದ ರೈತ ವಿರೋಧಿ ನೀತಿಯಿಂದಾಗಿ ಈಗಾಗಲೇ ಬಿತ್ತನೆ ಬೀಜದ ಸಾರ್ವಭೌಮತ್ವ ರೈತರ ಕೈತಪ್ಪಿದೆ. ಈರುಳ್ಳಿ, ಮೆಕ್ಕೆಜೋಳ, ಆಲೂಗಡ್ಡೆ, ಬೇಳೆಕಾಳು, ಎಣ್ಣೆಕಾಳು, ಸಿರಿಧಾನ್ಯಗಳನ್ನು ಅಗತ್ಯ ವಸ್ತುಗಳ ಕಾಯ್ದೆಯಿಂದ ಹೊರಗಿಡಲಾಗುತ್ತಿದೆ. ಇದರಿಂದ ಈ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಹಕ್ಕು ಸರಕಾರದ ನಿಯಂತ್ರಣದಲ್ಲಿರುವುದಿಲ್ಲ. ಬದಲಾಗಿ ಸ್ಟಾಕ್ ಮಾರ್ಕೆಟ್‍ಗಳ ಬಂಡವಾಳಶಾಹಿಗಳ ಹಿಡಿತದಲ್ಲಿರಲಿದೆ ಎಂದು ಆರೋಪಿಸಿದ ರೈತ ಮುಖಂಡರು, ಹೊಸ ಕೃಷಿ ಮಸೂದೆಗಳಿಂದಾಗಿ ಸಾಂಪ್ರದಾಯಿಕ ಕೃಷಿಗಳ ಮೇಲಿನ ಗ್ರಾಮೀಣ ರೈತರ ಸಾರ್ವಭೌಮತ್ವ ನಾಶವಾಗಲಿದೆ. ಖನಿಜ ಮತ್ತು ಜೈವಿಕ ಸಂಪತ್ತಿನಂತಹ ಜೀವನ ಕ್ರಮದ ಹಕ್ಕುಗಳನ್ನು ರೈತರಿಂದ ಕಸಿದುಕೊಳ್ಳಲಾಗುತ್ತಿದೆ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿ ಮಸೂದೆಗಳಿಗೆ ತಂದಿರುವ ತಿದ್ದುಪಡಿಯನ್ನು ರದ್ದು ಮಾಡಬೇಕು. ಎಪಿಎಂಸಿ ಮಾರುಕಟ್ಟೆಯನ್ನು ಯಥಾಸ್ಥಿಯಲ್ಲಿ ಮುಂದುವರಿಸಿ ಅಲ್ಲಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕ್ರಮವಹಿಸಬೇಕು. ದಿಲ್ಲಿಯಲ್ಲಿನ ರೈತರ ಚಳವಳಿಯ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಮುಖಂಡರು ಆಗ್ರಹಿಸಿದರು.

ಧರಣಿ ಬಳಿಕ ಈ ಸಂಬಂಧದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯ, ಕೇಂದ್ರ ಸರಕಾರಗಳಿಗೆ ಕಳುಹಿಸಲಾಯಿತು. ಧರಣಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರಾದ ದುಗ್ಗಪ್ಪಗೌಡ, ದಯಾಕರ್, ಬಸವರಾಜ್, ಮಹೇಶ್, ವೃಷಭರಾಜ್, ಉದ್ದೇಗೌಡ, ನಿರಂಜನ್ ಮೂರ್ತಿ, ಓಂಕಾರಪ್ಪ, ಮಂಜೇಗೌಡ, ನಾಗೇಶ್, ಮಂಜುನಾಥ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News