ರಸ್ತೆ ಅಪಘಾತ: ಎಎಸ್ಸೈ ಆಗಿ ಪದೋನ್ನತಿ ಹೊಂದಿದ್ದ ಮುಖ್ಯ ಪೇದೆ ಮೃತ್ಯು

Update: 2020-12-03 12:03 GMT

ಚಿಕ್ಕಮಗಳೂರು, ಡಿ.3: ಎಎಸ್ಸೈ ಆಗಿ ಪದೋನ್ನತಿ ಹೊಂದಿ ಗುರುವಾರ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಸಖರಾಯಪಟ್ಟಣ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಒಬ್ಬರು ಕರ್ತವ್ಯ ಮುಗಿಸಿ ಬೈಕ್‍ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಗರ ಸಮೀಪದ ಹಿರೇಗೌಜ ಗ್ರಾಮದಲ್ಲಿ ವರದಿಯಾಗಿದೆ.

ಕಡೂರು ತಾಲೂಕು ಸಖರಾಯಪಟ್ಟಣ ಪೊಲೀಸ್ ಠಾಣೆಯ ಮುಖ್ಯಪೇದೆ ಸಿದ್ದರಾಮಪ್ಪ(48) ರಸ್ತೆ ಅಪಘಾತದಲ್ಲಿ ಮೃತರಾದ ವ್ಯಕ್ತಿಯಾಗಿದ್ದು, ಬುಧವಾರ ರಾತ್ರಿ ಕರ್ತವ್ಯ ಮುಗಿಸಿ ಸಖರಾಯಪಟ್ಟಣದಿಂದ ಚಿಕ್ಕಮಗಳೂರು ನಗರದಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.

ಮೂಲತಃ ಅಜ್ಜಂಪುರ ತಾಲೂಕು ತಮ್ಮಟಹಳ್ಳಿ ಗ್ರಾಮದವರಾದ ಸಿದ್ದರಾಮಪ್ಪ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅವರು ಎಎಸ್ಸೈ ಆಗಿ ಪದೋನ್ನತಿ ಹೊಂದಿದ್ದರು. ಗುರುವಾರ ಎಎಸ್ಸೈ ಆಗಿಯೇ ಅವರು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಬುಧವಾರ ಮುಂಬಡ್ತಿ ಹೊಂದಿದ್ದ ಸಂಭ್ರದಲ್ಲಿದ್ದ ಅವರಿಗೆ ಠಾಣೆಯ ಇತರ ಪೊಲೀಸರು ಅಭಿನಂದನೆ ಸಲ್ಲಿಸಿದ್ದು, ಬುಧವಾರ ತಡರಾತ್ರಿ ಸಖರಾಯಪಟ್ಟಣದಿಂದ ಚಿಕ್ಕಮಗಳೂರಿಗೆ ತಮ್ಮ ಬೈಕ್‍ನಲ್ಲಿ ಆಗಮಿಸುತ್ತಿದ್ದ ವೇಳೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ವೇಗವಾಗಿ ಬಂದ ಪ್ರವಾಸಿಗರ ಕಾರು ಸಿದ್ದರಾಮಪ್ಪ ಇದ್ದ ಬೈಕ್‍ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಸಿದ್ದರಾಮಪ್ಪ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅತಿಯಾದ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. 

ಘಟನೆಯ ಬಳಿಕ ಕಾರಿನಲ್ಲಿದ್ದ ಪ್ರವಾಸಿಗರು ಕಾರನ್ನು ಸ್ಥಳದಲ್ಲೇ ಬಿಟ್ಟು ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದ್ದು, ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News