ಭಾರತದ ಆರ್ಥಿಕತೆಗೆ ತಟ್ಟಿದ 'ಬಿಸಿ'

Update: 2020-12-03 04:03 GMT

ಹೊಸದಿಲ್ಲಿ, ಡಿ.3: ಭಾರತದ ಆರ್ಥಿಕತೆಗೆ ಇದೀಗ ನಿಜವಾಗಿಯೂ ’ಬಿಸಿ’ ತಟ್ಟಿದೆ. 2019ರಲ್ಲಿ ವಿಪರೀತ ತಾಪಮಾನದಿಂದಾಗಿ ಇಡೀ ವಿಶ್ವದಲ್ಲೇ ಗರಿಷ್ಠ ಉತ್ಪಾದಕತೆ ಅಥವಾ ಕೆಲಸದ ಗಂಟೆ ನಷ್ಟವಾಗಿದೆ ಎಂದು ಅಧ್ಯಯನ ವರದಿ ಹೇಳಿದೆ. ಇಡೀ ಜಗತ್ತಿನಲ್ಲಿ 302 ಶತಕೋಟಿ ಕೆಲಸದ ಗಂಟೆಗಳು 2019ರಲ್ಲಿ ನಷ್ಟವಾಗಿದ್ದು, 2000ನೇ ಇಸವಿಯಲ್ಲಿ ನಷ್ಟವಾದ ಕೆಲಸದ ಗಂಟೆಗಿಂತ ಇದು 103 ಶತಕೋಟಿ ಗಂಟೆ ಅಧಿಕ.

ಜಾಗತಿಕವಾಗಿ ಆಗಿರುವ ನಷ್ಟದ ಪೈಕಿ ಶೇಕಡ 80.7ರಷ್ಟು ಉತ್ಪಾದಕತೆ ನಷ್ಟ ಕೇವಲ 13 ದೇಶಗಳಲ್ಲಿ ಆಗಿದೆ. ಗರಿಷ್ಠ ನಷ್ಟ ಅನುಭವಿಸಿರುವ ದೇಶ ಭಾರತ. ತಲಾದಾಯವನ್ನು ಲೆಕ್ಕ ಹಾಕಿದರೆ ಗರಿಷ್ಠ ನಷ್ಟವಾಗಿರುವುದು ಕಾಂಬೋಡಿಯಾ ದೇಶಕ್ಕೆ. ಭಾರತದಲ್ಲಿ ವಿಪರೀತ ಸೆಖೆಯಿಂದಾಗಿ 118.3 ಶತಕೋಟಿ ಕೆಲಸದ ಗಂಟೆ ನಷ್ಟವಾಗಿದ್ದು, ಪ್ರತಿ ವ್ಯಕ್ತಿಗೆ 111.2 ಗಂಟೆಯಷ್ಟು ನಷ್ಟವಾಗಿದೆ ಎಂದು ಆರೋಗ್ಯ ಮತ್ತು ಹವಾಮಾನ ಬದಲಾವಣೆ ಕುರಿತ ಲ್ಯಾನ್ಸೆಟ್ ಕೌಂಟ್‌ಡೌನ್ ವರದಿ ಹೇಳಿದೆ.

ಭಾರತ, ಇಂಡೋನೇಶ್ಯ ಮತ್ತು ಕಾಂಬೋಡಿಯಾ ಸೇರಿದಂತೆ ಕಡಿಮೆ ಆದಾಯದ ದೇಶಗಳಲ್ಲಿ 2015ರ ವೇಳೆಗೆ ವಿಪರೀತ ಸೆಖೆಯಿಂದಾಗಿ ಆಗುವ ನಷ್ಟ ಒಟ್ಟು ಜಿಡಿಪಿಯ ಶೇಕಡ 3.9 ರಿಂದ 5.9% ಆಗಿತ್ತು. ಭಾರತದಲ್ಲಿ 2019ರಲ್ಲಿ ಸರಾಸರಿ ಉಷ್ಣಾಂಶ 65 ವರ್ಷಗಳಲ್ಲೇ ಗರಿಷ್ಠಮಟ್ಟ ತಲುಪಿತ್ತು. ಕಳೆದ 20 ವರ್ಷಗಳಲ್ಲಿ ಅಧಿಕ ಉಷ್ಣಾಂಶ ಸಂಬಂಧಿ ಸಾವಿನ ಸಂಖ್ಯೆ ಶೇಕಡ 53.7ರಷ್ಟು ಹೆಚ್ಚಿದೆ. 2018ರಲ್ಲಿ ಅಧಿಕ ಉಷ್ಣಾಂಶದ ಕಾರಣದಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದ 2.96 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಗರಿಷ್ಠ ಅಂದರೆ 62 ಸಾವಿರ ಮಂದಿ ಚೀನಾದಲ್ಲೇ ಮೃತಪಟ್ಟಿದ್ದಾರೆ. 31 ಸಾವಿರ ಮಂದಿ ಭಾರತದಲ್ಲಿ ಮೃತಪಟ್ಟಿದ್ದು, ಭಾರತ ಎರಡನೇ ಸ್ಥಾನಲ್ಲಿದೆ. ಜರ್ಮನಿ, ಅಮೆರಿಕ, ರಶ್ಯ ಮತ್ತು ಜಪಾನ್ ನಂತರದ ಸ್ಥಾನಗಳಲ್ಲಿವೆ.

ದಕ್ಷಿಣ ಏಷ್ಯಾದಲ್ಲಿ ಅದರಲ್ಲೂ ಮುಖ್ಯವಾಗಿ ಭಾರತ- ಪಾಕಿಸ್ತಾನ ಪ್ರದೇಶದಲ್ಲಿ ಬಿಸಿಗಾಳಿಯ ತೀವ್ರತೆ, ಅವಧಿ ಮತ್ತು ವಿಸ್ತಾರ ಹೆಚ್ಚಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರೋಪಿಕಲ್ ಮೆಟ್ರಾಲಜಿಯಲ್ಲಿ ಹವಾಮಾನ ವಿಜ್ಞಾನಿಯಾಗಿರುವ ರಾಕ್ಸಿ ಮ್ಯಾಥ್ಯೂ ಕೋಲ್ ಹೇಳಿದ್ದಾರೆ. 2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಿದರೆ ಬಿಸಿಗಾಳಿಯ ಪ್ರಮಾಣ ಆರು ಪಟ್ಟು ಹೆಚ್ಚಲಿದೆ ಎಂದು ಖರಗಪುರ ಐಐಟಿ ನಡೆಸಿದ ಅಧ್ಯಯನ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News